ಬಂಗಾರಪೇಟೆ ಗಡಿಭಾಗದಲ್ಲಿ 214 ಬಂದೂಕು ಗುಂಡುಗಳು ಪತ್ತೆ;  ತನಿಖೆ ಚುರುಕು
x

ಬಂಗಾರಪೇಟೆ ಗಡಿಭಾಗದಲ್ಲಿ 214 ಬಂದೂಕು ಗುಂಡುಗಳು ಪತ್ತೆ; ತನಿಖೆ ಚುರುಕು

ಪೊಲೀಸರು ಪರಿಶೀಲಿಸಿದಾಗ 7.6 ಎಂಎಂ ಗಾತ್ರದ ಒಟ್ಟು 214 ಗುಂಡುಗಳು ಲಭ್ಯವಾಗಿವೆ. ಈ ಪೈಕಿ 135 ಜೀವಂತ ಗುಂಡುಗಳು ಮತ್ತು 85 ಖಾಲಿ ಕಾರ್ಟ್ರಿಡ್ಜ್‌ಗಳು ಸೇರಿವೆ. ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


Click the Play button to hear this message in audio format

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಠಾಣೆಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬಂದೂಕುಗಳಿಗೆ ಬಳಕೆ ಮಾಡುವ 214 ಗುಂಡುಗಳು ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ. ಅಕ್ರಮವಾಗಿ ಗುಂಡುಗಳು ಪತ್ತೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಪಂಚಾಯಿತಿ ವ್ಯಾಪ್ತಿಯ ದಾಸರಮಲ್ಲ ಗ್ರಾಮದ ಸಮೀಪವಿರುವ ಕಾಮಸಮುದ್ರ ಕೆರೆ ರಸ್ತೆ ಸೇತುವೆಯ ಕೆಳಗೆ ಕೆಲವು ಲೋಹದ ವಸ್ತುಗಳು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ಭಾಗವು ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಸೂಕ್ಷ್ಮ ಪ್ರದೇಶವಾಗಿರುವುದರಿಂದ, ಅನುಮಾನಗೊಂಡ ಸಾರ್ವಜನಿಕರು ತಕ್ಷಣವೇ ದೊಡ್ಡಪನ್ನಾಂಡಹಳ್ಳಿಯ ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ವಿಷಯದ ಗಂಭೀರತೆಯನ್ನು ಅರಿತ ಶಿಕ್ಷಕರು, ಕೂಡಲೇ ಕಾಮಸಮುದ್ರ ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸೇತುವೆಯ ಕೆಳಭಾಗದಲ್ಲಿ ಎಸ್‌ಎಲ್‌ಆರ್ ಅಥವಾ ಮಷಿನ್ ಗನ್‌ಗಳಿಗೆ ಬಳಸುವ ಮೂರು ಅಮ್ಯೂನಿಷನ್ ಬೆಲ್ಟ್‌ಗಳು ಪತ್ತೆಯಾಗಿವೆ. ಪೊಲೀಸರು ಕೂಲಂಕುಷವಾಗಿ ಪರಿಶೀಲಿಸಿದಾಗ, ಸುಮಾರು 7.6 ಎಂಎಂ ಗಾತ್ರದ ಒಟ್ಟು 214 ಗುಂಡುಗಳು ಲಭ್ಯವಾಗಿವೆ. ಈ ಪೈಕಿ 135 ಜೀವಂತ ಗುಂಡುಗಳು ಮತ್ತು 85 ಖಾಲಿ ಕಾರ್ಟ್ರಿಡ್ಜ್‌ಗಳು ಸೇರಿವೆ. ಈ ಎಲ್ಲಾ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಹಾರಾಷ್ಟ್ರದ ಕಾರ್ಖಾನೆಯಲ್ಲಿ ತಯಾರಾದ ಗುಂಡುಗಳು

ಈ ಮದ್ದುಗುಂಡುಗಳ ಪ್ರಾಥಮಿಕ ತನಿಖೆಯಲ್ಲಿ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ. ಈ ಗುಂಡುಗಳ ಮೇಲೆ ನಮೂದಿಸಲಾದ ವಿವರಗಳ ಪ್ರಕಾರ, ಅವು 1969ರಲ್ಲಿ ಮಹಾರಾಷ್ಟ್ರದ ಕಾರ್ಖಾನೆಯೊಂದರಲ್ಲಿ ತಯಾರಾದವು ಎಂದು ತಿಳಿದುಬಂದಿದೆ. ಸುಮಾರು ಐದು ದಶಕಗಳಷ್ಟು ಹಳೆಯದಾದ ಈ ಗುಂಡುಗಳು ಇಲ್ಲಿಗೆ ಹೇಗೆ ಬಂದವು ಎಂಬುದು ಅತಿದೊಡ್ಡ ರಹಸ್ಯವಾಗಿದೆ. ಇವು ಹಳೆಯ ಸ್ಟಾಕ್‌ನ ಮಿಸ್‌ಫೈರ್ ಆದ ಅಥವಾ ಡಮ್ಮಿ ಗುಂಡುಗಳಾಗಿರಬಹುದು ಎಂದು ಶಂಕಿಸಲಾಗಿದೆ. ಹಲವು ತಿಂಗಳ ಹಿಂದೆಯೇ ಯಾರೋ ದುಷ್ಕರ್ಮಿಗಳು ಇವುಗಳನ್ನು ಇಲ್ಲಿ ಬಿಸಾಡಿ ಹೋಗಿರುವ ಸಾಧ್ಯತೆಯ ಇರಬಹುದು ಎಂದು ಹೇಳಲಾಗಿದೆ. ಕಳೆದ 15-20 ದಿನಗಳಿಂದ ಈ ಕೆರೆ ಕಾಲುವೆಯಲ್ಲಿ ನೀರು ಸಂಪೂರ್ಣವಾಗಿ ಬತ್ತಿರುವುದರಿಂದ ಮದ್ದುಗುಂಡು ಕಂಡಿವೆ. ಇವುಗಳನ್ನು ಬಹಳ ಹಿಂದೆಯೇ ಇಲ್ಲಿ ಎಸೆಯಲಾಗಿದೆ ಎನ್ನಲಾಗಿದೆ.

ಘಟನೆಯ ಕುರಿತು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಬಂಗಾರಪೇಟೆ ತಾಲೂಕಿನ ತಮಿಳುನಾಡು ಗಡಿಗ್ರಾಮದಲ್ಲಿ 214 ಮದ್ದುಗುಂಡುಗಳು ಪತ್ತೆಯಾಗಿದ್ದು, ಎಲ್ಲವನ್ನೂ ನಮ್ಮ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಮದ್ದುಗುಂಡುಗಳಲ್ಲಿ ಬಹುತೇಕವು ಈಗಾಗಲೇ ಬಳಕೆಯಾದ ಖಾಲಿ ಗುಂಡುಗಳಾಗಿವೆ. ಇವುಗಳನ್ನು ಎಲ್ಲಿಂದ ತರಲಾಯಿತು? ಮತ್ತು ಯಾರು ಇಲ್ಲಿ ಎಸೆದರು? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ತನಿಖೆಯ ಶುರು ಮಾಡಿದ ಅಧಿಕಾರಿಗಳು

ಕಾಮಸಮುದ್ರ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಮದ್ದುಗುಂಡುಗಳು ಮಿಲಿಟರಿ ಅಥವಾ ಪೊಲೀಸ್ ಇಲಾಖೆಗೆ ಸೇರಿದ್ದೇ ಅಥವಾ ಬೇರೆ ಯಾವುದಾದರೂ ಮೂಲದಿಂದ ಬಂದವೇ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ. ಸಾಮಾನ್ಯವಾಗಿ ಇಂತಹ ಮದ್ದುಗುಂಡುಗಳು ಸರ್ಕಾರಿ ಸಂಸ್ಥೆಗಳಲ್ಲಿನ ಹಳೆಯ ಸ್ಟಾಕ್ ವಿಲೇವಾರಿಯ ಸಂದರ್ಭದಲ್ಲಿ ಹೊರಬರಬಹುದು. ಆದರೆ, ಇವು ಸಾರ್ವಜನಿಕ ಸ್ಥಳದಲ್ಲಿ, ಅದೂ ಗಡಿಭಾಗದ ಸೇತುವೆಯ ಅಡಿಯಲ್ಲಿ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಗಡಿಭಾಗದ ಹಳ್ಳಿಗಳಲ್ಲಿ ಇಂತಹ ಮಾರಕ ಶಸ್ತ್ರಾಸ್ತ್ರಗಳ ಬಿಡಿಭಾಗಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳ್ಳಸಾಗಣೆದಾರರು ಅಥವಾ ಸಮಾಜ ವಿರೋಧಿ ಶಕ್ತಿಗಳು ಇವುಗಳನ್ನು ಇಲ್ಲಿ ಬಚ್ಚಿಟ್ಟಿರಬಹುದೇ ಎಂಬ ಪ್ರಶ್ನೆಗಳು ಗ್ರಾಮಸ್ಥರಲ್ಲಿ ಎದ್ದಿವೆ. ಪೊಲೀಸರು ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

Read More
Next Story