Kodagu Rape Case | ಕೊಡಗಿನ ಹೋಮ್‌ಸ್ಟೇನಲ್ಲಿ ಹೀನ ಕೃತ್ಯ! ವಿದೇಶಿ ಮಹಿಳೆಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ
x

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಅಮೆರಿಕ ಮೂಲದ ಪ್ರವಾಸಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. 

Kodagu Rape Case | ಕೊಡಗಿನ ಹೋಮ್‌ಸ್ಟೇನಲ್ಲಿ ಹೀನ ಕೃತ್ಯ! ವಿದೇಶಿ ಮಹಿಳೆಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ

ಕೊಡಗಿನ ಕುಟ್ಟ ಗ್ರಾಮದ ಹೋಂಸ್ಟೇನಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೃಜೇಶ್ ಹಾಗೂ ಮಾಲೀಕ ವಿಶಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.


Click the Play button to hear this message in audio format

ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿಯಾಗಿರುವ ಕೊಡಗಿನ ಖಾಸಗಿ ಹೋಂಸ್ಟೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ. ಏಪ್ರಿಲ್ 19 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರವಾಸೋದ್ಯಮ ವಲಯದಲ್ಲಿ ಆತಂಕ ಮೂಡಿಸಿದೆ. ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಅಮೆರಿಕ ಮೂಲದ ಪ್ರವಾಸಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಹೋಂಸ್ಟೇ ಮಾಲೀಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಘಟನೆಯ ವಿವರ:

ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆಯೊಬ್ಬರು ಪ್ರವಾಸಕ್ಕಾಗಿ ಕೊಡಗಿಗೆ ಬಂದಿದ್ದರು. ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ 'ದೇವಿ ವಿಲ್ಲಾ' ಎಂಬ ಖಾಸಗಿ ಹೋಂಸ್ಟೇನಲ್ಲಿ ಅವರು ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಕೆಲಸಕ್ಕಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.

ಮಾದಕ ದ್ರವ್ಯ ಬೆರೆಸಿದ ಪಾನೀಯ:

ಆರೋಪಿ ವೃಜೇಶ್ ಕುಮಾರ್, ಮಹಿಳೆಗೆ ತಂಪು ಪಾನೀಯದಲ್ಲಿ (Cool Drinks) ಮತ್ತು ಬರುವ ಔಷಧಿಯನ್ನು ಬೆರೆಸಿ ನೀಡಿ, ಆಕೆ ಪ್ರಜ್ಞೆ ತಪ್ಪಿದ ನಂತರ ಈ ಪೈಶಾಚಿಕ ಕೃತ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮೂರು ದಿನಗಳ ಕಾಲ ಕೂಡಿಟ್ಟ ಮಾಲೀಕ?

ಘಟನೆಯ ನಂತರ ಮಹಿಳೆ ದೂರು ನೀಡದಂತೆ ತಡೆಯಲು ಹೋಂಸ್ಟೇ ಮಾಲೀಕ ಪ್ರಯತ್ನಿಸಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ಅತ್ಯಾಚಾರದ ಬಳಿಕ ಮಹಿಳೆಯನ್ನು ವೈ-ಫೈ ಸಂಪರ್ಕ ಕಟ್‌ ಮಾಡಿ ಸುಮಾರು ಮೂರು ದಿನಗಳ ಕಾಲ ಅದೇ ಹೋಂಸ್ಟೇನಲ್ಲಿ ಕೂಡಿ ಹಾಕಿದ್ದಾನೆ. ಆ ಮೂಲಕ ಆಕೆಯನ್ನು ಸಮಾಧಾನಪಡಿಸಲು ಅಥವಾ ಪ್ರಕರಣವನ್ನು ಮುಚ್ಚಿಹಾಕಲು ಮಾಲೀಕ ಯತ್ನಿಸಿದ್ದ ಎನ್ನಲಾಗಿದೆ.

ರಾಯಭಾರಿ ಕಚೇರಿ ಮೆಟ್ಟಿಲೇರಿದ ಸಂತ್ರಸ್ತೆ:

ಹೋಂಸ್ಟೇನಿಂದ ಹೇಗೋ ಹೊರಬಂದ ಮಹಿಳೆ, ತಕ್ಷಣವೇ ಅಮೆರಿಕ ರಾಯಭಾರಿ ಕಚೇರಿಗೆ (US Embassy) ಸಂಪರ್ಕಿಸಿ ತನಗಾದ ಅನ್ಯಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಯಭಾರಿ ಕಚೇರಿಯ ಮಧ್ಯಸ್ಥಿಕೆಯ ನಂತರ ಪ್ರಕರಣವು ಮುನ್ನೆಲೆಗೆ ಬಂದಿದೆ.

ಪೊಲೀಸ್ ತನಿಖೆ:

ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಹೋಂಸ್ಟೇನಲ್ಲಿ ಕೃತ್ಯ ನಡೆದ ನಂತರ, ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಮೈಸೂರಿಗೆ ಆಗಮಿಸಿದ ವಿದೇಶಿ ಮಹಿಳೆ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತಕ್ಷಣವೇ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಘಟನೆ ನಡೆದ ಕುಟ್ಟ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಆರೋಪಿಯ ಬಂಧನ ಮತ್ತು ಹೋಂಸ್ಟೇ ಮಾಲೀಕನ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ. ವಿದೇಶಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹಂಪಿಯಲ್ಲಿ ನಡೆದಿತ್ತು ಭೀಕರ ಘಟನೆ

ಕಳೆದ ವರ್ಷ ಮಾರ್ಚ್ 6ರಂದು ಹಂಪಿ ಪ್ರವಾಸಿ ತಾಣದ ಸಮೀಪವಿರುವ ಸಾನಾಪುರ ಗ್ರಾಮದ ತುಂಗಭದ್ರಾ ಎಡದಂಡೆ ನಾಲೆ ಬಳಿ ಈ ಅಮಾನವೀಯ ಘಟನೆ ನಡೆದಿತ್ತು. ಮಲ್ಲೇಶ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪ ಎಂಬ ಮೂವರು ಆರೋಪಿಗಳು ಹಣಕ್ಕಾಗಿ ಪ್ರವಾಸಿಗರ ಗುಂಪನ್ನು ಅಡ್ಡಗಟ್ಟಿದ್ದರು. ಹಣ ನೀಡಲು ನಿರಾಕರಿಸಿದಾಗ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ, ಇಸ್ರೇಲ್ ಮೂಲದ ಪ್ರವಾಸಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಇದೇ ವೇಳೆ ಮೂವರು ಪುರುಷ ಪ್ರವಾಸಿಗರನ್ನು ಕಾಲುವೆಗೆ ತಳ್ಳಲಾಗಿದ್ದು, ಈ ಪೈಕಿ ಒಡಿಶಾ ಮೂಲದ ಓರ್ವ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನು. ಉಳಿದ ಇಬ್ಬರು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದರು.

Read More
Next Story