
Kodagu Homestay Rape Case| "ಗೈಡ್‌ಲೈನ್ಸ್ ಪಾಲಿಸಿ... ಇಲ್ಲದಿದ್ದರೆ ಹೋಂ ಸ್ಟೇಗಳಿಗೆ ಬೀಗ... ಮಾಲಿಕರಿಗೆ ಶಿಕ್ಷೆ!"
ಕೊಡಗಿನ ಹೋಂಸ್ಟೇನಲ್ಲಿ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ನಿಯಮ ಉಲ್ಲಂಘಿಸುವ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಕೊಡಗಿನ ಹೋಂಸ್ಟೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ರಾಜ್ಯವೇ ತಲೆತಗ್ಗಿಸುವಂತೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಈಗಾಗಲೇ ರಾಜ್ಯದ ಎಲ್ಲಾ ಹೋಂಸ್ಟೇಗಳಿಗೆ ಪಾಲಿಸಬೇಕಾದ ನಿಯಮಗಳ ಕುರಿತು ಎಸ್‌ಒಪಿ ಅಡಿಯಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದ್ದು, ಪ್ರತಿಯೊಬ್ಬ ಮಾಲೀಕರು ಅದರಂತೆ ಕ್ರಮ ವಹಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋಂಸ್ಟೇ ನಡೆಸುವವರು ಪರವಾನಗಿ ಹೊಂದಿದ್ದಾರೆಯೇ ಮತ್ತು ಅಲ್ಲಿ ಪಾಲಿಸಬೇಕಾದ ಸುರಕ್ಷತಾ ಕ್ರಮಗಳೇನು ಎಂಬ ಬಗ್ಗೆ ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ. ಇಷ್ಟೆಲ್ಲಾ ಮುನ್ನೆಚ್ಚರಿಕೆಗಳ ನಡುವೆಯೂ ಇಂತಹ ಅಹಿತಕರ ಘಟನೆಗಳು ಸಂಭವಿಸಿದರೆ ಕಾನೂನುಬದ್ಧವಾಗಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಕಾನೂನು ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿದೇಶಿ ಪ್ರಜೆಗಳ ಮೇಲೆ ಇಂತಹ ದೌರ್ಜನ್ಯಗಳು ನಡೆದಾಗ ನಮ್ಮ ಸಮಾಜ ಮತ್ತು ದೇಶದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಕಳಕಳಿಯನ್ನು ವ್ಯಕ್ತಪಡಿಸಿದ ಸಚಿವರು, ಈ ಕಾರಣಕ್ಕಾಗಿಯೇ ಸರ್ಕಾರ ಇಂತಹ ಪ್ರಕರಣಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದಿದ್ದಾರೆ. ಘಟನೆಯ ನಂತರ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವ ಸಂಶಯಗಳಿದ್ದು, ಆ ಎಲ್ಲಾ ಅಂಶಗಳನ್ನು ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಂಧಿತ ಆರೋಪಿಗಳು ಜಾರ್ಖಂಡ್ ಮೂಲದವರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಏನಿದು ಘಟನೆ?
ಕೊಡಗಿನ ಖಾಸಗಿ ಹೋಂಸ್ಟೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ. ಏಪ್ರಿಲ್ 19 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಅಮೆರಿಕ ಮೂಲದ ಪ್ರವಾಸಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಹೋಂಸ್ಟೇ ಮಾಲೀಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.
ಘಟನೆಯ ವಿವರ
ಅಮೆರಿಕದ ವಾಷಿಂಗ್ಟನ್ ಮೂಲದ ಮಹಿಳೆಯೊಬ್ಬರು ಪ್ರವಾಸಕ್ಕಾಗಿ ಕೊಡಗಿಗೆ ಬಂದಿದ್ದರು. ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ 'ದೇವಿ ವಿಲ್ಲಾ' ಎಂಬ ಖಾಸಗಿ ಹೋಂಸ್ಟೇನಲ್ಲಿ ಅವರು ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಕೆಲಸಕ್ಕಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.
ಮಾದಕ ದ್ರವ್ಯ ಬೆರೆಸಿದ ಪಾನೀಯ
ಆರೋಪಿ ವೃಜೇಶ್ ಕುಮಾರ್, ಮಹಿಳೆಗೆ ತಂಪು ಪಾನೀಯದಲ್ಲಿ (Cool Drinks) ಮತ್ತು ಬರುವ ಔಷಧಿಯನ್ನು ಬೆರೆಸಿ ನೀಡಿ, ಆಕೆ ಪ್ರಜ್ಞೆ ತಪ್ಪಿದ ನಂತರ ಈ ಪೈಶಾಚಿಕ ಕೃತ್ಯ ಎಸಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಘಟನೆಯ ನಂತರ ಮಹಿಳೆ ದೂರು ನೀಡದಂತೆ ತಡೆಯಲು ಹೋಂಸ್ಟೇ ಮಾಲೀಕ ಪ್ರಯತ್ನಿಸಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ಅತ್ಯಾಚಾರದ ಬಳಿಕ ಮಹಿಳೆಯನ್ನು ವೈ-ಫೈ ಸಂಪರ್ಕ ಕಟ್ ಮಾಡಿ ಸುಮಾರು ಮೂರು ದಿನಗಳ ಕಾಲ ಅದೇ ಹೋಂಸ್ಟೇನಲ್ಲಿ ಕೂಡಿ ಹಾಕಿದ್ದಾನೆ. ಆ ಮೂಲಕ ಆಕೆಯನ್ನು ಸಮಾಧಾನಪಡಿಸಲು ಅಥವಾ ಪ್ರಕರಣವನ್ನು ಮುಚ್ಚಿಹಾಕಲು ಮಾಲೀಕ ಯತ್ನಿಸಿದ್ದ ಎನ್ನಲಾಗಿದೆ.
ರಾಯಭಾರಿ ಕಚೇರಿ ಮೆಟ್ಟಿಲೇರಿದ ಸಂತ್ರಸ್ತೆ
ಹೋಂಸ್ಟೇನಿಂದ ಹೇಗೋ ಹೊರಬಂದ ಮಹಿಳೆ, ತಕ್ಷಣವೇ ಅಮೆರಿಕ ರಾಯಭಾರಿ ಕಚೇರಿಗೆ (US Embassy) ಸಂಪರ್ಕಿಸಿ ತನಗಾದ ಅನ್ಯಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಯಭಾರಿ ಕಚೇರಿಯ ಮಧ್ಯಸ್ಥಿಕೆಯ ನಂತರ ಪ್ರಕರಣವು ಮುನ್ನೆಲೆಗೆ ಬಂದಿದೆ.
ತನಿಖೆಗೆ ಅಧಿಕಾರಿಗಳಿಗೆ ಸಚಿವ ಭೋಸರಾಜು ಖಡಕ್ ಸೂಚನೆ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಭೋಸರಾಜು ಅವರು , ಈ ಕುರಿತು ಶೀಘ್ರವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ದೂರವಾಣಿ ಮಾತನಾಡಿದ ಸಚಿವರು, ಪ್ರಕರಣದ ವಿವರಗಳನ್ನು ಪಡೆದುಕೊಂಡರು.
"ಕೊಡಗು ಜಿಲ್ಲೆಯು ಪ್ರವಾಸೋದ್ಯಮಕ್ಕೆ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ. ಇಂತಹ ಅಹಿತಕರ ಘಟನೆಗಳಿಂದ ಜಿಲ್ಲೆಯ ಘನತೆ ಹಾಗೂ ಪ್ರವಾಸೋದ್ಯಮದ ಮೇಲೆ ಗಂಭೀರವಾದ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು" ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

