
ಕೊಡಗು ಹೋಂಸ್ಟೇನಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ, ನಾಲ್ಕು ದಿನಗಳ ಕಾಲ ದಿಗ್ಬಂಧನ..!
ಅಮೆರಿಕ ಮೂಲದ ವಿದೇಶಿ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಅದನ್ನು ಮುಚ್ಚಿಡಲು ನಡೆಸಿದ ಪ್ರಯತ್ನಗಳು ಪ್ರವಾಸೋದ್ಯಮದ ಘನತೆಗೆ ಧಕ್ಕೆ ತಂದಿವೆ ಎಂದು ಕೊಡಗು ಜಿಲ್ಲಾಡಳಿತ ಅಭಿಪ್ರಾಯಪಟ್ಟಿದೆ.
ವಿದೇಶಿ ಮಹಿಳೆ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸರು ಕೇಳಿಬಂದ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂ ಸ್ಟೇನ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೊಡಗು ಜಿಲ್ಲಾಡಳಿತವು ಈ ಕ್ರಮ ಕೈಗೊಂಡಿದೆ. ಅಲ್ಲದೇ, ಈ ಕ್ರಮವು ಜಿಲ್ಲೆಯ ಇತರ ಹೋಂ ಸ್ಟೇ ಮಾಲೀಕರಿಗೆ ಒಂದು ಎಚ್ಚರಿಕೆಯ ಗಂಟೆ.
ಅಮೆರಿಕ ಮೂಲದ ವಿದೇಶಿ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಅದನ್ನು ಮುಚ್ಚಿಡಲು ನಡೆಸಿದ ಪ್ರಯತ್ನಗಳು ಪ್ರವಾಸೋದ್ಯಮದ ಘನತೆಗೆ ಧಕ್ಕೆ ತಂದಿವೆ ಎಂದು ಕೊಡಗು ಜಿಲ್ಲಾಡಳಿತ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗಿದ್ದ ಅಧಿಕೃತ ನೋಂದಣಿಯನ್ನು ತಕ್ಷಣವೇ ರದ್ದುಪಡಿಸಲಾಗಿದೆ. ಈ ಹೋಂ ಸ್ಟೇ ನಡೆಸಲು ಪ್ರವಾಸೋದ್ಯಮ ಇಲಾಖೆಯಿಂದ 2024 ರ ಜ.15 ರಂದು ಪರವಾನಗಿ ನೀಡಲಾಗಿತ್ತು. ಇದನ್ನು ಪಿ.ಎ. ಪೊನ್ನಪ್ಪ ಎಂಬುವವರ ಹೆಸರಿನಲ್ಲಿ ನೋಂದಣಿ ಮಾಡಿಸಲಾಗಿತ್ತು. ಈ ಪರವಾನಗಿಯು 2029 ರವರೆಗೂ ಚಾಲ್ತಿಯಲ್ಲಿರಬೇಕಿತ್ತು. ಆದರೆ, ಉದ್ಯಮದ ನಿಯಮಗಳನ್ನು ಗಾಳಿಗೆ ತೂರಿ, ಅತಿಥಿಗಳ ಸುರಕ್ಷತೆಯಲ್ಲಿ ವಿಫಲವಾದ ಕಾರಣ ಮತ್ತು ಅಪರಾಧ ಕೃತ್ಯದಲ್ಲಿ ಮಾಲೀಕರ ಪಾಲ್ಗೊಳ್ಳುವಿಕೆ ಕಂಡುಬಂದ ಹಿನ್ನೆಲೆಯಲ್ಲಿ, ಐದು ವರ್ಷಗಳ ಕಾಲಾವಧಿ ಮುಗಿಯುವ ಮುನ್ನವೇ ಅದನ್ನು ರದ್ದು ಪಡಿಸಲಾಗಿದೆ.
ಸಾರ್ವಜನಿಕರಿಗೆ ಸಂದೇಶ ರವಾನೆ
ಕೊಡಗು ಜಿಲ್ಲೆಯ ಆರ್ಥಿಕತೆ ಪ್ರವಾಸೋದ್ಯಮದ ಮೇಲೆ ನಿಂತಿದೆ. ಇಲ್ಲಿ ಸಾವಿರಾರು ಹೋಂ ಸ್ಟೇಗಳು ಕಾರ್ಯಾಚರಿಸುತ್ತಿವೆ. ಆದರೆ, ಕೆಲವೇ ಕೆಲವು ಕಾನೂನುಬಾಹಿರ ಚಟುವಟಿಕೆಗಳಿಂದ ಇಡೀ ಜಿಲ್ಲೆಯ ಹೆಸರಿಗೆ ಮಸಿ ಬಳಿಯುವಂತಾಗಿದೆ. ಜಿಲ್ಲಾಡಳಿತ ಕೈಗೊಂಡಿರುವ ಈ ಕ್ರಮದಿಂದ ಜಿಲ್ಲೆಯು ನಾಗರಿಕರ ರಕ್ಷಣೆಗೆ ಬದ್ಧ ಎಂಬ ಸಂದೇಶವನ್ನು ರವಾನಿಸಿದೆ. ಪ್ರವಾಸಿಗರ, ವಿಶೇಷವಾಗಿ ಮಹಿಳೆಯರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಹೋಂ ಸ್ಟೇ ಮಾಲೀಕರು ಕೇವಲ ವ್ಯವಹಾರವನ್ನಷ್ಟೇ ನೋಡದೆ, ತಮ್ಮಲ್ಲಿ ಕೆಲಸ ಮಾಡುವವರ ಹಿನ್ನೆಲೆ ಮತ್ತು ಅತಿಥಿಗಳ ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು. ನೋಂದಾಯಿತ ಹೋಂ ಸ್ಟೇಗಳಲ್ಲಿ ಇಂತಹ ಕೃತ್ಯಗಳು ನಡೆದರೆ ಸರ್ಕಾರಿ ಸವಲತ್ತುಗಳು ಮತ್ತು ಪರವಾನಗಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.
ಸಂತ್ರಸ್ತೆಯ ಹೇಳಿಕೆ ದಾಖಲು : ನಾಲ್ಕು ದಿನಗಳ ದಿಗ್ಬಂಧನ
ಈ ನಡುವೆ, ತನಿಖೆ ಕೈಗೊಂಡಿರುವ ಪೊಲೀಸರು ಸಂತ್ರಸ್ತೆಯಾದ ವಿದೇಶಿ ಮಹಿಳೆಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಇದರಲ್ಲಿ ಬಂಧಿತ ಆರೋಪಿಗಳು ಯುವತಿಯನ್ನು ನಾಲ್ಕು ದಿನಗಳ ದಿಗ್ಬಂಧನ ಮಾಡಿದ್ದರು ಎಂಬ ವಿಷಯ ಗೊತ್ತಾಗಿದೆ. ಹೋಂ ಸ್ಟೇ ಮಾಲೀಕ ವಿಶಾಲ್ ಸಂತ್ರಸ್ತೆಗೆ ನೆರವಾಗುವ ಬದಲು, ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದನು. ಪೊಲೀಸರ ತನಿಖೆಯ ಪ್ರಕಾರ, ಮಹಿಳೆಯನ್ನು ನಾಲ್ಕು ದಿನಗಳ ಕಾಲ (ಏಪ್ರಿಲ್ 12 ರಿಂದ 16) ಹೋಂ ಸ್ಟೇನಲ್ಲೇ ಇರಿಸಲಾಗಿತ್ತು. ಆಕೆಗೆ ಯಾರೊಂದಿಗೂ ಫೋನ್‌ನಲ್ಲಿ ಮಾತನಾಡಲು ಅನುಮತಿ ನೀಡುತ್ತಿರಲಿಲ್ಲ. ಕೇವಲ ಟೆಕ್ಸ್ಟ್ ಮೆಸೇಜ್ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. "ಪೊಲೀಸರಿಗೆ ಮಾಹಿತಿ ನೀಡಬೇಡಿ, ವೈದ್ಯರನ್ನು ಸಂಪರ್ಕಿಸಬೇಡಿ ಮತ್ತು ಯಾರೊಂದಿಗೂ ಮಾತನಾಡಬೇಡಿ" ಎಂದು ವಿಶಾಲ್ ಆಕೆಗೆ ತಾಕೀತು ಮಾಡಿದ್ದನು. ಆಕೆ ಆ ಸಮಯದಲ್ಲಿ ತೀವ್ರ ಆಘಾತದಲ್ಲಿದ್ದ ಕಾರಣ ಮತ್ತು ಒಂಟಿಯಾಗಿದ್ದ ಕಾರಣ ಹತಾಶಳಾಗಿದ್ದರು. ಹೋಂ ಸ್ಟೇನಿಂದ ಹೊರಹೋಗಲು ವಿಶಾಲ್ ಅಡ್ಡಿಪಡಿಸುತ್ತಿದ್ದನು. ಇದು ಕೇವಲ ಅತ್ಯಾಚಾರವಲ್ಲದೆ, ಅಕ್ರಮ ಬಂಧನವೂ ಆಗಿತ್ತು ಎಂದು ಹೇಳಿಕೆಯಲ್ಲಿ ದಾಖಲಾಗಿದೆ.
ಎರಡನೇ ಬಾರಿ ಕೊಡಗಿಗೆ ಭೇಟಿ
ವಿದೇಶಿ ಮಹಿಳೆಯು ಭಾರತದ ಪ್ರವಾಸಿ ತಾಣಗಳನ್ನು ಅನ್ವೇಷಿಸುವ ಉದ್ದೇಶದಿಂದ ದೇಶಕ್ಕೆ ಆಗಮಿಸಿದ್ದರು. ಈ ಹಿಂದೆ ಮಾ.22 ರಿಂದ 24 ರವರೆಗೆ ಅವರು ತಮ್ಮ ಸಹೋದ್ಯೋಗಿಯೊಂದಿಗೆ ಇದೇ 'ದೇವಿ ವಿಲ್ಲಾ' ಹೋಂ ಸ್ಟೇನಲ್ಲಿ ತಂಗಿದ್ದರು. ಆಗ ಅಲ್ಲಿನ ವ್ಯವಸ್ಥೆ ಮತ್ತು ಅನುಭವ ಚೆನ್ನಾಗಿದ್ದ ಕಾರಣ, ಏ.12 ರಂದು ಅವರು ಎರಡನೇ ಬಾರಿಗೆ ಏಕಾಂಗಿಯಾಗಿ ಕೊಡಗಿಗೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ, ಮೊದಲ ಬಾರಿ ಸಿಕ್ಕ ಭರವಸೆಯೇ ಎರಡನೇ ಬಾರಿ ಆಕೆಗೆ ಕಹಿ ಘಟನೆಯಾಗಿ ಪರಿಣಮಿಸುತ್ತದೆ ಎಂದು ಅವರು ಊಹಿಸಿರಲಿಲ್ಲ. ಏ.12 ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಮಹಿಳೆ ಟ್ಯಾಕ್ಸಿಯ ಮೂಲಕ ಹೋಂ ಸ್ಟೇ ತಲುಪಿದರು. ಆ ಸಮಯದಲ್ಲಿ ಮಾಲೀಕ ವಿಶಾಲ್ ಅಲ್ಲಿರಲಿಲ್ಲ. ವಿಶಾಲ್ ತಾಯಿ ಆಕೆಗೆ ವಾಸ್ತವ್ಯಕ್ಕಾಗಿ ಒಂದು ಟೆಂಟ್ ಅನ್ನು ಹಂಚಿಕೆ ಮಾಡಿದರು. ಪ್ರಯಾಣದ ಬಳಲಿಕೆಯಿಂದಾಗಿ ಮಹಿಳೆ ಟೆಂಟ್ ಪ್ರವೇಶಿಸಿ ವಿಶ್ರಾಂತಿ ಪಡೆಯುತ್ತಿದ್ದರು.
ಮಧ್ಯಾಹ್ನ 1.30ರ ಸುಮಾರಿಗೆ ಹೋಂ ಸ್ಟೇನಲ್ಲಿ ಅಡುಗೆಯವ ಮತ್ತು ಕೆಲಸದವನಾಗಿದ್ದ ವೃಜೇಶ್ ಕುಮಾರ್ ಮಹಿಳೆಯ ಟೆಂಟ್ ಪ್ರವೇಶಿಸಿದನು. ಆಕೆಗೆ ಕುಡಿಯಲು ಪೇರಳೆ ಹಣ್ಣಿನ ಜ್ಯೂಸ್ ನೀಡಿದನು. ಇದನ್ನು ಅತಿಥಿ ಸತ್ಕಾರ ಎಂದು ಭಾವಿಸಿದ ಮಹಿಳೆ ಅದನ್ನು ಕುಡಿದರು. ಆದರೆ, ಆ ಜ್ಯೂಸ್‌ನಲ್ಲಿ ಮೊದಲೇ ಮಾದಕ ದ್ರವ್ಯ ಅಥವಾ ನಿದ್ರೆ ಬರುವ ಔಷಧವನ್ನು ಬೆರೆಸಲಾಗಿತ್ತು. ಅದನ್ನು ಕುಡಿದ ಕೆಲವೇ ನಿಮಿಷಗಳಲ್ಲಿ ಮಹಿಳೆ ಅರೆಪ್ರಜ್ಞಾವಸ್ಥೆಗೆ ತಲುಪಿದರು. ಮಹಿಳೆ ತನ್ನ ಹೇಳಿಕೆಯಲ್ಲಿ ತಿಳಿಸಿರುವಂತೆ, "ನಾನು ಜ್ಯೂಸ್ ಕುಡಿದ ನಂತರ ತೀವ್ರ ಅರೆನಿದ್ರಾವಸ್ಥೆಯಲ್ಲಿದ್ದೆ. ಸ್ವಲ್ಪ ಸಮಯದ ನಂತರ ಕಣ್ಣು ಬಿಟ್ಟಾಗ ಅದೇ ಕೆಲಸಗಾರ ನನ್ನ ಮೇಲಿದ್ದನು. ನಾನು ತೀವ್ರವಾಗಿ ಪ್ರತಿರೋಧ ತೋರಲು ಯತ್ನಿಸಿದೆ. ಆದರೆ ಔಷಧದ ಪ್ರಭಾವದಿಂದಾಗಿ ನನ್ನ ಕೈಕಾಲುಗಳು ಸ್ವಾಧೀನದಲ್ಲಿರಲಿಲ್ಲ. ಏನಾಗುತ್ತಿದೆ ಎಂದು ನನಗೆ ಸಂಪೂರ್ಣ ಅರಿವಿತ್ತು, ಆದರೆ ನನ್ನನ್ನು ನಾನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.
ಭಯ ಹಾಗೂ ಅಸಹಾಯಕತೆ
ಮಧ್ಯಾಹ್ನ 1.30 ರಿಂದ 3 ಗಂಟೆಯ ಅವಧಿಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಅಪರಾಧ ನಡೆದ ನಂತರ ಮಹಿಳೆ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಸಂಜೆ ಸುಮಾರು 7 ಗಂಟೆಗೆ ವೈಫೈ ಸಂಪರ್ಕ ಪಡೆಯಲು ಈಜುಕೊಳದ ಬಳಿ ಬಂದಾಗ, ಆರೋಪಿ ಬ್ರಿಜೇಶ್ ಮತ್ತೊಮ್ಮೆ ಆಕೆಗೆ ಕ್ಯಾಂಡಿ ಬಾರ್ ನೀಡಲು ಮುಂದಾದನು. ಇದನ್ನು ನಿರಾಕರಿಸಿದ ಮಹಿಳೆ ಆತನಿಂದ ದೂರ ಸರಿದರು. ಇದೇ ಸಮಯದಲ್ಲಿ ಮಾಲೀಕ ವಿಶಾಲ್ ಆಕೆಗೆ ವೈಫೈ ಪಾಸ್‌ವರ್ಡ್ ನೀಡಿದನು. ಆದರೆ, ವಿಶಾಲ್ ಕೂಡ ಆರೋಪಿಯ ಜೊತೆ ಶಾಮೀಲಾಗಿದ್ದಾನೆಯೇ ಅಥವಾ ಆತನ ಪ್ರತಿಕ್ರಿಯೆ ಹೇಗಿರಬಹುದು ಎಂಬ ಭಯದಿಂದ ಮಹಿಳೆ ತಕ್ಷಣ ವಿಶಾಲ್‌ಗೆ ವಿಷಯ ತಿಳಿಸಲಿಲ್ಲ. ಬದಲಾಗಿ, ಮಹಿಳೆ ಅಮೆರಿಕದಲ್ಲಿರುವ ತನ್ನ ಸ್ನೇಹಿತನಿಗೆ ಸಂದೇಶದ ಮೂಲಕ ವಿಷಯ ತಿಳಿಸಿದರು. ರಾತ್ರಿ 9.50ರ ಸುಮಾರಿಗೆ ಸ್ನೇಹಿತನಿಗೆ ಕರೆ ಮಾಡಿ ನಡೆದ ಘಟನೆಯನ್ನು ವಿವರಿಸಿದರು. ಸ್ನೇಹಿತನು ತಕ್ಷಣ ಈ ವಿಷಯವನ್ನು ಮಾಲೀಕ ವಿಶಾಲ್ ಗಮನಕ್ಕೆ ತರುವಂತೆ ಸೂಚಿಸಿದನು. ಆ ಸಮಯದಲ್ಲಿ ಮತ್ತೆ ಟೆಂಟ್‌ಗೆ ಬಂದ ವೃಜೇಶ್, ವಿಟಮಿನ್ ಸಿ ಮಾತ್ರೆ ಎಂದು ಹೇಳಿ ಮತ್ತೊಂದು ಗುಳಿಗೆ ನೀಡಲು ಯತ್ನಿಸಿದಾಗ ಮಹಿಳೆ ಚೀರಾಡುತ್ತಾ ಮುಖ್ಯ ಮನೆಗೆ ಓಡಿ ಹೋದರು. ಅಲ್ಲಿ ವಿಶಾಲ್ ಬಳಿ ತನ್ನನ್ನು ರಕ್ಷಿಸುವಂತೆ ಮತ್ತು ಲಾಕ್ ಮಾಡಬಹುದಾದ ಪ್ರತ್ಯೇಕ ಕೊಠಡಿ ನೀಡುವಂತೆ ಬೇಡಿಕೊಂಡರು ಎಂದು ಹೇಳಲಾಗಿದೆ.
ಪಾರಾದ ಮಹಿಳೆ - ದೂರು ದಾಖಲು
ಏ.16 ರಂದು ವಿಶಾಲ್ ಅಂತಿಮವಾಗಿ ಟ್ಯಾಕ್ಸಿಯೊಂದನ್ನು ವ್ಯವಸ್ಥೆ ಮಾಡಿ ಮಹಿಳೆಯನ್ನು ಮೈಸೂರಿಗೆ ಕಳುಹಿಸಿದನು. ಮೈಸೂರು ತಲುಪಿದ ತಕ್ಷಣ ಮಹಿಳೆ ಅಲ್ಲಿರುವ ಅಮೆರಿಕನ್ ನಾಗರಿಕರ ಸ್ವಯಂಸೇವಕ ಸಂಘದ ಸದಸ್ಯರನ್ನು ಸಂಪರ್ಕಿಸಿದರು. ಅಷ್ಟರಲ್ಲಾಗಲೇ ಆಕೆಯ ಅಮೆರಿಕದ ಸ್ನೇಹಿತ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು. ಅಮೆರಿಕನ್ ರಾಯಭಾರ ಕಚೇರಿಯ ಮಧ್ಯಪ್ರವೇಶದ ನಂತರ ಪ್ರಕರಣದ ಗಂಭೀರತೆ ಹೆಚ್ಚಾಯಿತು ಮತ್ತು ಕೊಡಗು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಸಮಯಪ್ರಜ್ಞೆ ಮರೆದಿದ್ದರು. ಹೋಂ ಸ್ಟೇನಿಂದ ಹೊರಬರುವ ಮೊದಲು ಅವರು ಅತ್ಯಾಚಾರ ನಡೆದ ಸಮಯದಲ್ಲಿ ಬಳಸಲಾಗಿದ್ದ ಬೆಡ್‌ಶೀಟ್, ತನ್ನ ಹೆಡ್‌ಬ್ಯಾಂಡ್ ಮತ್ತು ಟಿಶ್ಯೂ ಪೇಪರ್‌ಗಳನ್ನು ಗುಟ್ಟಾಗಿ ಸಂಗ್ರಹಿಸಿ ತಂದಿದ್ದರು. ಇವುಗಳನ್ನು ಅವರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಮತ್ತು ಈ ಸಾಕ್ಷ್ಯಾಧಾರಗಳು ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಬಲವಾದ ಪುರಾವೆಗಳಾಗಿ ಕೆಲಸ ಮಾಡಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೊಡಗು ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ವೃಜೇಶ್ ಕುಮಾರ್ ಮತ್ತು ಆತನಿಗೆ ಬೆಂಬಲ ನೀಡಿದ ಹಾಗೂ ಮಾಹಿತಿ ಮುಚ್ಚಿಟ್ಟ ಮಾಲೀಕ ವಿಶಾಲ್‌ನನ್ನು ಬಂಧಿಸಲಾಗಿದೆ.

