
ಮದುವೆ ನಿಶ್ಚಯವಾಗಿದ್ದ ಯುವತಿಗೆ ಕಿರುಕುಳ: ನೇಣಿಗೆ ಶರಣಾದ ತಂದೆ, ತಾಯಿ, ಮಗಳು
ರಕ್ಷಿತಾಳಿಗೆ ಮದುವೆ ನಿಶ್ಚಯವಾಗಿದ್ದ ವಿಷಯ ತಿಳಿದು, ಉಲ್ಲಾಸ್ ಗೌಡ ಎಂಬಾತ ಈ ಕುಟುಂಬಕ್ಕೆ ದೀರ್ಘಕಾಲದಿಂದ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಅತ್ಯಂತ ದಾರುಣ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನ ಕಾಟಕ್ಕೆ ಬೇಸತ್ತು, ಒಂದೇ ಕುಟುಂಬದ ಮೂವರು ಸದಸ್ಯರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ಇಡೀ ಗ್ರಾಮದಲ್ಲಿ ತೀವ್ರ ಆಘಾತ ಮತ್ತು ಆಕ್ರೋಶವನ್ನು ಉಂಟುಮಾಡಿದೆ.
ಮೃತಪಟ್ಟವರನ್ನು ಶಿವಣ್ಣ (ತಂದೆ), ನಾಗರತ್ನ (ತಾಯಿ) ಮತ್ತು ಅವರ ಪುತ್ರಿ ರಕ್ಷಿತಾ ಎಂದು ಗುರುತಿಸಲಾಗಿದೆ. ರಕ್ಷಿತಾಳಿಗೆ ಮದುವೆ ನಿಶ್ಚಯವಾಗಿದ್ದ ವಿಷಯ ತಿಳಿದು, ಗ್ರಾಮದ ಉಲ್ಲಾಸ್ ಗೌಡ ಎಂಬಾತ ಈ ಕುಟುಂಬಕ್ಕೆ ದೀರ್ಘಕಾಲದಿಂದ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ. ಮಗಳು ರಕ್ಷಿತಾಳ ಖಾಸಗಿ ಫೋಟೋಗಳನ್ನು ಹಾಗೂ ಸಂದೇಶಗಳನ್ನು ಬಳಸಿಕೊಂಡು ಆಕೆಯ ಮದುವೆ ಸಂಬಂಧವನ್ನು ಮುರಿಯಲು ಉಲ್ಲಾಸ್ ಗೌಡ ಪ್ರಯತ್ನಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ತಮಗೆ ನಿರಂತರವಾಗಿ ಸಿಗುತ್ತಿದ್ದ ಕಿರುಕುಳದಿಂದ ಕಂಗೆಟ್ಟ ಕುಟುಂಬವು, ಸಮಾಜದಲ್ಲಿ ತಮ್ಮ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ಭಾವಿಸಿ, ಇಂತಹ ಅಂತಿಮ ನಿರ್ಧಾರಕ್ಕೆ ಬಂದಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಪತ್ತೆಯಾದ ಡೆತ್ ನೋಟ್
ಆತ್ಮಹತ್ಯೆಗೂ ಮುನ್ನ ಈ ಕುಟುಂಬವು ಡೆತ್ ನೋಟ್ ಬರೆದಿಟ್ಟಿದೆ. ಈ ಪತ್ರದಲ್ಲಿ ಉಲ್ಲಾಸ್ ಗೌಡ ನೀಡುತ್ತಿದ್ದ ಕಿರುಕುಳದ ವಿವರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ರಕ್ಷಿತಾ ಕಳಿಸಿರುವ ಸಂದೇಶಗಳು ಮತ್ತು ಫೋಟೋಗಳನ್ನು ಇಟ್ಟುಕೊಂಡು ಆಕೆಗೆ ಮತ್ತು ನಮ್ಮ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಮದುವೆ ನಿಶ್ಚಯವಾಗಿದ್ದ ಯುವಕನಿಗೂ ಈ ಫೋಟೋಗಳನ್ನು ಕಳುಹಿಸಿ ಮಾನಸಿಕವಾಗಿ ಹಿಂಸಿಸುತ್ತಿದ್ದ ಎಂದು ಬರೆದಿಟ್ಟಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ಈ ಡೆತ್ ನೋಟನ್ನು ವಶಕ್ಕೆ ಪಡೆದಿದ್ದು, ತನಿಖೆಯ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಘಟನಾ ಸ್ಥಳಕ್ಕೆ ಆಗಮಿಸಿ, ಕುಟುಂಬಸ್ಥರು ಮತ್ತು ಸ್ಥಳೀಯರಿಂದ ಮಾಹಿತಿ ಪಡೆದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮೃತರು ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಕುರಿತು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಘಟನೆಯು ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿಯ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಆತನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆಯ ಬೆನ್ನಲ್ಲೇ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

