
ಎಐ ಆಧಾರಿತ ಚಿತ್ರ
ಐಬಿ, ಪೊಲೀಸರ ಜಂಟಿ ಕಾರ್ಯಾಚರಣೆ, ರಾಜ್ಯದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ!
ಇಬ್ಬರೂ ಯುವಕರು ಜಾಗತಿಕ ನಿಷೇಧಿತ ಭಯೋತ್ಪಾದಕ ಸಂಘಟನೆ ಐಎಸ್‌ಐಎಸ್ ಮತ್ತು ಪಾಕಿಸ್ತಾನದ ಉಗ್ರರ ಜಾಲಕ್ಕೆ ಇಲ್ಲಿಂದಲೇ ಹಣಕಾಸಿನ ನೆರವು ಒದಗಿಸುತ್ತಿದ್ದ ಜಾಲದೊಂದಿಗೆ ನೇರ ಸಂಪರ್ಕದಲ್ಲಿದ್ದರು.
ದೇಶದ ಆಂತರಿಕ ಭದ್ರತೆಗೆ ಸದ್ದಿಲ್ಲದೆ ಸಂಚು ರೂಪಿಸುತ್ತಿದ್ದ ದೊಡ್ಡದೊಂದು ಭಯೋತ್ಪಾದಕ ಜಾಲವನ್ನು ಕೇಂದ್ರ ಗುಪ್ತಚರ ಇಲಾಖೆ (IB) ಹಾಗೂ ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಧ್ವಂಸಗೊಳಿಸಿದ್ದಾರೆ. ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಹಾಗೂ ಭಾರತದಲ್ಲಿ ಭಾರಿ ಪ್ರಮಾಣದ ಸರಣಿ ಬಾಂಬ್ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಿಸಿಟಿವಿ ಬಲೆಯಲ್ಲಿ ಸಿಕ್ಕಿಬಿದ್ದ ಶಂಕಿತರು
ಕೇಂದ್ರ ಗುಪ್ತಚರ ಇಲಾಖೆ ನೀಡಿದ ಅತ್ಯಂತ ನಿಖರ ಹಾಗೂ ಮಹತ್ವದ ಸುಳಿವಿನ ಆಧಾರದ ಮೇಲೆ ಈ ಹೈ-ಅಲರ್ಟ್ ಜಂಟಿ ಕಾರ್ಯಾಚರಣೆ ನಡೆದಿದೆ. ದಾವಣಗೆರೆ ಎಸ್‌ಪಿ ಡಾ. ಎಚ್.ಟಿ. ಶೇಖರ್ ಅವರ ನೇರ ಮಾರ್ಗದರ್ಶನದಲ್ಲಿ ತುಮಕೂರು ಮತ್ತು ದಾವಣಗೆರೆಯ ಸ್ಥಳೀಯ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಬಂಧಿತರನ್ನು ತುಮಕೂರು ನಿವಾಸಿ ಅಲ್ಲಾಬಕ್ಷು (24) ಮತ್ತು ದಾವಣಗೆರೆಯ ಬಿಡಿ ಲೇಔಟ್ ನಿವಾಸಿ ಜಮೀರ್ ಖಾನ್ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಪೊಲೀಸರ ಕಾರ್ಯಾಚರಣೆಯ ವಾಸನೆ ಅರಿತು ಬೇರೆಡೆಗೆ ಪರಾರಿಯಾಗಲು ರೈಲ್ವೆ ನಿಲ್ದಾಣಕ್ಕೆ ಬಂದು ಹೊಂಚು ಹಾಕುತ್ತಿದ್ದರು. ಆದರೆ, ತಕ್ಷಣವೇ ಅಲರ್ಟ್ ಆದ ಪೊಲೀಸರು ರೈಲ್ವೆ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡಿ, ಇಂಚಿಂಚೂ ಚಲನವಲನಗಳನ್ನು ಗಮನಿಸಿ, ಇಬ್ಬರನ್ನೂ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆಯಲ್ಲಿ ಹೊರಬಂತು ಆಘಾತಕಾರಿ ಸತ್ಯ!
ಬಂಧಿತ ಶಂಕಿತರನ್ನು ಪ್ರಾಥಮಿಕ ವಿಚಾರಣೆ ನಡೆಸಿದಾಗ ಆಘಾತಕಾರಿ ಮಾಹಿತಿಗಳು ಹೊರಬಂದಿವೆ. ಈ ಇಬ್ಬರೂ ಯುವಕರು ಜಾಗತಿಕ ನಿಷೇಧಿತ ಭಯೋತ್ಪಾದಕ ಸಂಘಟನೆ ಐಎಸ್‌ಐಎಸ್ ಮತ್ತು ಪಾಕಿಸ್ತಾನದ ಉಗ್ರರ ಜಾಲಕ್ಕೆ ಇಲ್ಲಿಂದಲೇ ಹಣಕಾಸಿನ ನೆರವು ಒದಗಿಸುತ್ತಿದ್ದ ಜಾಲದೊಂದಿಗೆ ನೇರ ಸಂಪರ್ಕದಲ್ಲಿದ್ದರು. ಭಾರತದ ಪ್ರಮುಖ ನಗರಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಬಾಂಬ್ ಸ್ಫೋಟಗಳನ್ನು ನಡೆಸಿ ದೇಶವನ್ನು ನಡುಗಿಸಲು ಇವರು ವ್ಯವಸ್ಥಿತವಾಗಿ ಯೋಜನೆ ಸಿದ್ಧಪಡಿಸುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಪಾಕ್ ಉಗ್ರ ‘ರಾಣಾ’ ಹೆಣೆದಿದ್ದ ಡಿಜಿಟಲ್ ಚಕ್ರವ್ಯೂಹ
ಈ ಇಡೀ ನೆಟ್‌ವರ್ಕ್‌ನ ಹಿಂದೆ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ‘ರಾಣಾ’ ಎಂಬ ಮಾಸ್ಟರ್‌ಮೈಂಡ್ ಇರುವುದು ಪತ್ತೆಯಾಗಿದೆ. ಈತ ಯುವಕರನ್ನು ಬ್ರೈನ್‌ವಾಶ್ ಮಾಡಲು ಸಾಮಾಜಿಕ ಜಾಲತಾಣಗಳನ್ನು ಅಸ್ತ್ರವಾಗಿ ಬಳಸಿಕೊಂಡಿದ್ದ. ಕಳೆದ ಒಂದು ತಿಂಗಳ ಹಿಂದೆ ರಾಣಾ, ಇನ್‌ಸ್ಟಾಗ್ರಾಮ್ ಮೂಲಕ ಈ ಇಬ್ಬರು ಯುವಕರನ್ನು ತಲುಪಿ ಗೆಳೆತನ ಬೆಳೆಸಿದ್ದ. ನಂತರ ಇವರೆಲ್ಲರೂ ಒಟ್ಟಾಗಿ ಎಕ್ಸ್ ಖಾತೆಯಲ್ಲಿ ದೇಶವಿರೋಧಿ ಹಾಗೂ ತೀವ್ರ ಪ್ರಚೋದನಾತ್ಮಕ ಚರ್ಚೆಗಳನ್ನು ನಡೆಸಲು ಆರಂಭಿಸಿದ್ದರು. ಅಷ್ಟಕ್ಕೆ ನಿಲ್ಲದೆ, ವಾಟ್ಸ್ ಆ್ಯಪ್‌ನಲ್ಲಿ ರಹಸ್ಯ ಗ್ರೂಪ್ ಒಂದನ್ನು ರಚಿಸಿ, ಅದರಲ್ಲಿ ಉತ್ತರ ಭಾರತದ ಹಲವು ಮುಸ್ಲಿಂ ಯುವಕರನ್ನು ದುರುದ್ದೇಶಪೂರ್ವಕವಾಗಿ ಸೇರಿಸಲಾಗಿತ್ತು.
ಆರಂಭದಲ್ಲಿ ಧರ್ಮದ ಆಚರಣೆಗಳು ಮತ್ತು ಧರ್ಮಗುರುಗಳ ಪ್ರವಚನಗಳನ್ನು ಹಂಚಿಕೊಳ್ಳುತ್ತಿದ್ದ ರಾಣಾ, ತದನಂತರ ‘ನಮ್ಮ ಸಮುದಾಯಕ್ಕೆ ಯಾವುದೇ ತೊಂದರೆಯಾದರೂ ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು, ತಡೆಯಬೇಕು’ ಎಂದು ಇವರ ತಲೆಗೆ ಜಿಹಾದಿ ವಿಷ ತುಂಬಿ ಸೈದ್ಧಾಂತಿಕವಾಗಿ ಬ್ರೈನ್‌ವಾಶ್ ಮಾಡಿದ್ದ.
ದೇಶಾದ್ಯಂತ ಸ್ಲೀಪರ್ ಸೆಲ್ ಆತಂಕ!
ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದ ಮೌಲ್ವಿ ಹತ್ಯೆಯನ್ನು ಮುಂದಿಟ್ಟುಕೊಂಡು, ಭಾರತದೊಳಗೆ ಭೀಕರ ಪ್ರತಿಕಾರ ತೀರಿಸಿಕೊಳ್ಳುವ ಕುರಿತು ಈ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಉಗ್ರ ರಾಣಾ ಚರ್ಚೆ ಆರಂಭಿಸಿದ್ದ. ದೇಶದ ಆಂತರಿಕ ಭದ್ರತೆಗೆ ತೀವ್ರ ಧಕ್ಕೆ ಉಂಟಾಗುವ ಮತ್ತು ಯಾವುದೇ ಕ್ಷಣದಲ್ಲಾದರೂ ಸರಣಿ ಉಗ್ರ ದಾಳಿ ನಡೆಯುವ ಗಂಭೀರ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆಯು ತಕ್ಷಣವೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪೊಲೀಸರನ್ನು ಹೈ-ಅಲರ್ಟ್ ಮಾಡಿತ್ತು.
ಲಿಂಕ್ ಸಿಕ್ಕಿದ್ದು ಹೇಗೆ?
ಪೊಲೀಸರು ಮೊದಲಿಗೆ ತುಮಕೂರಿನಲ್ಲಿ ಅಲ್ಲಾಬಕ್ಷುನನ್ನು ವಶಕ್ಕೆ ಪಡೆದು ಸೀಕ್ರೆಟ್ ಅಖಾಡದಲ್ಲಿ ಗ್ರಿಲ್ ಮಾಡಿದಾಗ, ಆತ ದಾವಣಗೆರೆಯ ಜಮೀರ್ ಖಾನ್ ಹೆಸರನ್ನು ಬಾಯಿಬಿಟ್ಟಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ದಾವಣಗೆರೆ ಪೊಲೀಸರು ಜಮೀರ್‌ನನ್ನು ಸುತ್ತುವರೆದು ಬಂಧಿಸಿದ್ದಾರೆ.
ಮುಂದುವರಿದ ಬಿಗ್ ಆಪರೇಷನ್
ಸದ್ಯ ಇಬ್ಬರೂ ಆರೋಪಿಗಳನ್ನು ತುಮಕೂರು ನಗರ ಪೊಲೀಸರು ವಶದಲ್ಲಿಟ್ಟುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇವರ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್ ಹಾಗೂ ಡಿಜಿಟಲ್ ಡಾಕ್ಯುಮೆಂಟ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಕರ್ನಾಟಕದಲ್ಲಿ ಇವರ ಹಿಂದೆ ಅಡಗಿರುವ ದೊಡ್ಡ ‘ಸ್ಲೀಪರ್ ಸೆಲ್ ನೆಟ್‌ವರ್ಕ್’ ಹಾಗೂ ಇವರಿಗೆ ಆರ್ಥಿಕ ನೆರವು ನೀಡುತ್ತಿದ್ದ ಸ್ಥಳೀಯ ಲಿಂಕ್‌ಗಳನ್ನು ಭೇದಿಸಲು ಎನ್‌ಐಎ (NIA) ಮತ್ತು ರಾಜ್ಯ ಆಂತರಿಕ ಭದ್ರತಾ ವಿಭಾಗ (ISD) ಕೂಡ ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದೆ.

