
ಸಾಂಧರ್ಭಿಕ ಚಿತ್ರ
Cyber Crime Awareness| ಅತ್ಯುನ್ನತ ಹುದ್ದೆಯಲ್ಲಿದ್ದವರಿಗೆ ಸೈಬರ್ ಕಳ್ಳರ ಖೆಡ್ಡಾ; ಹೇಗೆ?
ಸೈಬರ್ ವಂಚನೆಗೆ ಇಂತಯಹವರೆ ಎಂಬ ನಿರ್ದಿಷ್ಟ ಟಾರ್ಗೆಟ್ ಇಲ್ಲ. ಯಾರು ಬೇಕಿದ್ದರೂ ವಂಚನೆಗೊಳಗಾಗಬಹುದು. ಅತೀ ಬುದ್ಧಿವಂತಿಕೆ ಹಾಗೂ ದಡ್ಡತನಗಳೇ ವಂಚಕರಿಗೆ ಗಾಳ.
"ಎಲ್ಲಿಯವರೆಗೂ ಮೋಸ ಹೋಗುವವರು ಇರುತ್ತಾರೋ, ಅಲ್ಲಿಯ ವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ" ಎಂಬ ಮಾತು ಇಂದು ನಡೆಯುತ್ತಿರುವ ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ನಂತಹ ಪ್ರಕರಣಗಳನ್ನು ನೋಡಿದರೆ ನಿಜ ಎನ್ನಿಸುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ "Knowledge is not a shield against fear " ಎಂಬ ಮಾತು ಈ ಸೈಬರ್ ವಂಚಕರಿಗೆ ಶಿಕ್ಷಣ ಪಡೆದವರು ಹಾಗೂ ಅತ್ಯುನ್ನತ ಹುದ್ದೆಯಲ್ಲಿದ್ದವರು ಬಲಿ ಬೀಳುವುತ್ತಿರುವ ಪ್ರಕರಣಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ.
ನಿವೃತ್ತ ನ್ಯಾಯಾಧೀಶರಿಂದ ಹಿಡಿದು, ಶಾಸಕರು, ಸಚಿವರಾದಿಯಾಗಿ ಎಲ್ಲರೂ ಈ ಸೈಬರ್ ಖದೀಮರು ತೋಡಿದ ಖೆಡ್ಡಾಗೆ ಬೀಳುತ್ತಿದ್ದಾರೆ. ಕೋಟಿ ಕುಬೇರರೆಲ್ಲರೂ ಈಗ ಕುಚೇಲರಾಗಿರುವ ಅನೇಕ ಕಥೆಗಳು ನಮ್ಮ ಮುಂದಿವೆ. ಮುಗ್ಧತೆ ಹಾಗೂ ದುರಾಸೆ ಎಂಬ ಎರಡು ಕಾರಣಗಳೇ ಸಾರ್ವಜನಿಕರು ಸೈಬರ್ ವಂಚನೆಗೊಳಗಾಗಲು ಮುಖ್ಯ ಕಾರಣ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು. ಬಹುತೇಕ ಎಲ್ಲ ವರ್ಗದ ಜನರು ಸಹ ಈ ವಂಚನೆಗಳಿಗೆ ಬಲಿಯಾಗಿದ್ದಾರೆ. ಅದರೆ, ಅತೀ ಹೆಚ್ಚಾಗಿ ಬಲಿಯಾಗಿರುವುದು ದೊಡ್ಡದಾಗಿ ಓದಿಕೊಂಡಿರುವವರು, ಐಟಿ ಉದ್ಯೋಗಿಗಳು, ರೆಪ್ಯೂಟೆಡ್ ಕಂಪನಿಗಳಲ್ಲಿ ಉನ್ನತ ಸ್ಥಾನದಲ್ಲಿರುವವರೆ ಆಗಿದ್ದಾರೆ.
ಪ್ರಕರಣ 1
ಸ್ವಂತ ಕಂಪನಿ ಆರಂಭಿಸಬೇಕೆಂಬ ಆಸೆಯಲ್ಲಿದ್ದ ಬೆಂಗಳೂರಿನ ವೈಟ್ಫೀಲ್ಡ್ ನಿವಾಸಿ ಹರ್ಷ ಎಂಬುವರು, ಕೇವಲ 10 ನಿಮಿಷಗಳಲ್ಲಿ ಬರೋಬ್ಬರಿ 1 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಐಟಿ ಉದ್ಯೋಗಿಯಾಗಿದ್ದ ಅವರು, ತಮ್ಮ ಉಳಿತಾಯ ಖಾತೆಯಲ್ಲಿದ್ದ 80 ಲಕ್ಷ ರೂ.ಗಳ ಮೂಲಕ ತಮ್ಮದೇ ಆದ "ಸ್ಟಾರ್ಟ್ಅಪ್" ಶುರು ಮಾಡಲು, ಲಿಂಕ್ಡ್ಇನ್ (LinkedIn) ಸೇರಿದಂತೆ ಒಂದಷ್ಟು ವೆಬ್ಸೈಟ್ಗಳಲ್ಲಿ ಹುಡುಕಾಡುತ್ತಿದ್ದರು. ಈ ವೇಳೆ ವೆಬ್ಸೈಟ್ ಒಂದರಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ, "ನಾನು 10 ಕೋಟಿ ಹಣ ಹೂಡಿಕೆ ಮಾಡಲು ಸಿದ್ಧನಿದ್ದೇನೆ. ಯಾರ ಬಳಿಯಾದರೂ ಐಡಿಯಾ ಇದ್ದರೆ ಹೇಳಿ," ಎಂದು ಪೋಸ್ಟ್ ಮಾಡಿದ್ದ.
ಇದನ್ನೇ ನಂಬಿದ ಹರ್ಷ, ಅನಾಮಧೇಯ ವ್ಯಕ್ತಿಯೊಂದಿಗೆ ಮಾತುಕಥೆ ಶುರು ಮಾಡಿದ್ದ. "ನಾನು 10 ಕೋಟಿ ಹೂಡಿಕೆ ಮಾಡಲು, ಕನಿಷ್ಠ ಅದರಲ್ಲಿ ಶೇ.10ರಷ್ಟು ಹಣ ನಿಮ್ಮ ಬಳಿಯೂ ಇರಬೇಕು. ಹೀಗಾಗಿ 1 ಕೋಟಿ ರೂ.ಗಳನ್ನು ಕ್ರಿಪ್ಟೋ ಕರೆನ್ಸಿ ಮೂಲಕ ನಿಮ್ಮ ವಾಲೆಟ್ನಲ್ಲಿ ತೋರಿಸಬೇಕು," ಎಂದು ವಂಚಕ ಪುಸಲಾಯಿಸಿದ್ದಾನೆ. ಕೊನೆಗೆ ಹರ್ಷ, ತನ್ನ ಖಾತೆಗೆ ಕ್ರಿಪ್ಟೋ ಕರೆನ್ಸಿಯನ್ನು ಹಾಕಿಕೊಂಡಿದ್ದಾನೆ. ಇನ್ನೇನು ಕಂಪನಿ ಶುರುವಾಗಿಯೇ ಬಿಟ್ಟಿತು ಎನ್ನುವಷ್ಟರಲ್ಲಿ, ಇ-ಮೇಲ್ ಮೂಲಕ ಪಿಡಿಎಫ್ ರೂಪದ ಅಗ್ರಿಮೆಂಟ್ ಪ್ರತಿಯೊಂದು ಬಂದಿದೆ. ಇದನ್ನು ಡೌನ್ಲೋಡ್ ಮಾಡಿ, ಸಹಿ ಹಾಕಿ ವಾಪಸ್ ಕಳುಹಿಸುವಂತೆ ವಂಚಕ ಹೇಳಿದ್ದ. ಪಿಡಿಎಫ್ ಫೈಲ್ ಡೌನ್ಲೋಡ್ ಆಗುತ್ತಿದ್ದಂತೆಯೇ, 1 ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವರ್ಗಾವಣೆಯಾಗಿದೆ ಎಂದು ಹರ್ಷನಿಗೆ ಮತ್ತೊಂದು ಸಂದೇಶ ಬಂದಿದೆ.
ಪಿಡಿಎಫ್ ಫೈಲ್ನಲ್ಲಿ "ಎನ್ಕ್ರಿಪ್ಟೆಡ್ ವೈರಸ್ಗಳಿದ್ದು, ರ್ಯಾಟ್ (RAT) ಅಟ್ಯಾಕ್" ಆಗಿರುವುದು, ಪೊಲೀಸರ ಬಳಿ ಹೋದ ಮೇಲೆಯೇ ಹರ್ಷನಿಗೆ ತಿಳಿದಿದೆ. ಸ್ವಂತ ಕಂಪನಿ ಕಟ್ಟಬೇಕು ಎಂದುಕೊಂಡಿದ್ದ ಆತ, ಸಂಪೂರ್ಣವಾಗಿ ತನ್ನೆಲ್ಲ ಹಣವನ್ನೂ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.
ಪ್ರಕರಣ 2
ದೇಶದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ರಾಕೇಶ್ (ಹೆಸರು ಬದಲಿಸಲಾಗಿದೆ) ಕಳೆದುಕೊಂಡಿದ್ದು ಬರೋಬ್ಬರಿ 3.78 ಕೋಟಿ ರೂ.ಗಳು. ಮನೆಯಿಂದ ಕಂಪನಿಗೆ ಹೋಗುತ್ತಿದ್ದ ರಾಕೇಶ್ಗೆ, "ನಿಮ್ಮ ಹೆಸರಿನ ಪಾರ್ಸಲ್ನಲ್ಲಿ ಕೆಲವು ನಕಲಿ ಪಾಸ್ಪೋರ್ಟ್ ಮತ್ತು ನಾರ್ಕೋಟಿಕ್ (ಮಾದಕ) ವಸ್ತುಗಳು ಪತ್ತೆಯಾಗಿವೆ. ನಿಮ್ಮ ಖಾತೆಯಲ್ಲಿ ಕೋಟಿಗಟ್ಟಲೆ ಹಣವಿದ್ದು, ಇದೆಲ್ಲವನ್ನೂ ನೀವು 'ಮನಿ ಲಾಂಡರಿಂಗ್' ಮೂಲಕವೇ ಸಂಪಾದಿಸಿದ್ದೀರಿ ಎಂಬ ಶಂಕೆ ಇದೆ," ಎಂದು ಪೊಲೀಸರ ಹೆಸರಿನಲ್ಲಿ ಸೈಬರ್ ವಂಚಕರು ಕರೆ ಮಾಡಿದ್ದರು.
ಪ್ರಾರಂಭದಲ್ಲಿ ಇದೆಲ್ಲವೂ ಸೈಬರ್ ವಂಚಕರ ಕೈವಾಡ ಎಂದು ಸಂಶಯಗೊಂಡ ರಾಕೇಶ್, ದೆಹಲಿ ಹೈಕೋರ್ಟ್ನಲ್ಲಿ ವಕೀಲರಾಗಿರುವ ತಮ್ಮ ಸ್ನೇಹಿತ ಹಾಗೂ ವೈದ್ಯರೊಬ್ಬರಿಗೆ ಕರೆ ಮಾಡಿದ್ದಾರೆ. ಆದರೆ, ದುರದೃಷ್ಟವಶಾತ್ ಅವರು ಕರೆ ಸ್ವೀಕರಿಸಲಿಲ್ಲ. ಪದೇಪದೇ ಕರೆ ಮಾಡಿದ ಸೈಬರ್ ವಂಚಕರು, "ನಿಮ್ಮನ್ನು ಈ ಕೂಡಲೇ ಅರೆಸ್ಟ್ (ಬಂಧನ) ಮಾಡಲಾಗುವುದು. ನಿಮ್ಮ ಲೊಕೇಷನ್ ಟ್ರೇಸ್ ಮಾಡಲಾಗುತ್ತಿದೆ," ಎಂದು ಹೆದರಿಸಿದ್ದಾರೆ. "ನಿಮ್ಮ ಖಾತೆಯಲ್ಲಿನ ಅಷ್ಟೂ ಹಣವನ್ನು ನಾವು ನೀಡುವ ಸರ್ಕಾರಿ ಖಾತೆಗೆ ವರ್ಗಾವಣೆ ಮಾಡಿ. ತನಿಖೆ ಪೂರ್ಣಗೊಂಡ ಬಳಿಕ ನೀವು ನಿರಪರಾಧಿಯಾಗಿದ್ದರೆ, ಹಣವನ್ನು ಹಿಂದಿರುಗಿಸಲಾಗುವುದು," ಎಂದು ಬ್ಲಾಕ್ಮೇಲ್ ಮಾಡಿದ್ದಾರೆ.
ಉನ್ನತ ಹುದ್ದೆಯಲ್ಲಿದ್ದ ರಾಕೇಶ್, ಒಂದು ವೇಳೆ ಇದು ನಿಜವೇ ಆಗಿದ್ದರೆ ತನ್ನ ಪ್ರತಿಷ್ಠೆ ಮಣ್ಣುಪಾಲಾಗಲಿದೆ ಎಂದು ಆತಂಕಗೊಂಡಿದ್ದಾರೆ. ಬಳಿಕ ವಂಚಕರು ನೀಡಿದ ಖಾತೆಗೆ 3.78 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಮರುದಿನ ಅವರ ಸ್ನೇಹಿತರಾದ ವಿಂಗ್ ಕಮಾಂಡರ್ ಒಬ್ಬರು ಕರೆ ಮಾಡಿದಾಗಲೇ, ತಾನು ಮೋಸ ಹೋಗಿರುವುದು ರಾಕೇಶ್ಗೆ ಗೊತ್ತಾಗಿದೆ.
ಪ್ರಕರಣ 3
ವೃದ್ಧ ದಂಪತಿ ಸತತ 5 ತಿಂಗಳು "ಡಿಜಿಟಲ್ ಅರೆಸ್ಟ್" ನೆಪದಲ್ಲಿ ತಮ್ಮ ಮನೆಯಲ್ಲಿಯೇ ಬಂಧಿಯಾಗಿದ್ದ ಕರುಣಾಜನಕ ಕಥೆ ಇದು. ಸ್ಟಾರ್ ಹೋಟೆಲ್ ಒಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರು, ನಿವೃತ್ತಿಯ ಬಳಿಕ ತಮ್ಮ ಮಡದಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇವರ ಮಗಳು ಅಮೆರಿಕದಲ್ಲಿ ನೆಲೆಸಿದ್ದರು. "ನೀವು ಅಮೆರಿಕಕ್ಕೆ ಕಳುಹಿಸಿದ್ದ ಪಾರ್ಸೆಲ್ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ. ಈ ವಿಷಯವನ್ನು ಯಾರಿಗೂ ಹೇಳುವಂತಿಲ್ಲ. ನಾವು ಅಮೆರಿಕ ಪೊಲೀಸರು," ಎಂದು ವಂಚಕರು ಹೆದರಿಸಿದ್ದಾರೆ.
ಇದರಿಂದ ಭಯಗೊಂಡು ಸತತ 5 ತಿಂಗಳ ಕಾಲ ಗೃಹ ಬಂಧನದಲ್ಲಿಯೇ ಇದ್ದ ದಂಪತಿ, ವಂಚಕರು ಕೇಳಿದಾಗಲಷ್ಟೇ ಬ್ಯಾಂಕ್ಗೆ ಹೋಗಿ ಹಣ ಡ್ರಾ ಮಾಡಿ, ಅವರ ಖಾತೆಗೆ ಜಮೆ ಮಾಡುತ್ತಿದ್ದರು. ತಮ್ಮಲ್ಲಿದ್ದ ಎಫ್ಡಿ (Fixed Deposit) ಅನ್ನೂ ಮುರಿದು, ಅಂದಾಜು 1.5 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಈ 5 ತಿಂಗಳಲ್ಲಿ ದಂಪತಿ, ತಮ್ಮ ಮನೆಯನ್ನು ಬಿಟ್ಟರೆ ನೋಡಿದ್ದು ಬ್ಯಾಂಕ್ ಒಂದನ್ನು ಮಾತ್ರ!
ಸಂಗ್ರಹ ಚಿತ್ರ
ಯಾರ್ಯಾರು?
ಬೆಂಗಳೂರಿನ ಯಲಹಂಕದಲ್ಲಿ ಐಟಿ ಉದ್ಯೋಗಿಯೊಬ್ಬರು ಎಂಎಸ್ಸಿ ಓದಿದ್ದರೂ ಸಹ, "ಡಿಜಿಟಲ್ ಅರೆಸ್ಟ್" ಹೆಸರಿನಲ್ಲಿ 20 ದಿನಗಳ ಕಾಲ ಹೋಟೆಲ್ ರೂಂನಲ್ಲಿಯೇ ಬಂಧಿಯಾಗಿದ್ದರು. ದೊಡ್ಡ ಕಂಪನಿಯೊಂದರ ಸಿಇಒ ಆಗಿದ್ದವರು ಕೂಡ ವಾರಗಟ್ಟಲೆ ಡಿಜಿಟಲ್ ಅರೆಸ್ಟ್ಗೆ ಒಳಗಾಗಿದ್ದಾರೆ. ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರು ಸಹ 8 ದಿನಗಳ ಕಾಲ ಡಿಜಿಟಲ್ ಅರೆಸ್ಟ್ನಲ್ಲಿದ್ದು, 31 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ನಿವೃತ್ತ ನ್ಯಾಯಾಧೀಶರು, ಅತ್ಯುನ್ನತ ಹುದ್ದೆಯಲ್ಲಿರುವವರು ಮತ್ತು ವಿದ್ಯಾವಂತರೇ ಈ ಖೆಡ್ಡಾಗೆ ಬೀಳುತ್ತಿರುವುದು ವಿಪರ್ಯಾಸ.
ಮದ್ಯಮ ವರ್ಗದವರಿಗೆ ಮತ್ತೊಂದು ರೀತಿ..
ಸಾಲ ನೀಡುವ ನೆಪದಲ್ಲಿ ಲೋನ್ ಆಪ್ಗಳು (Loan Apps) ನೀಡುವ 10 ಸಾವಿರ ಸಾಲಕ್ಕೆ 20 ಸಾವಿರ ಪಾವತಿಸಿದ್ದರೂ ಸಹ ಋಣಮುಕ್ತರಾಗುವುದೇ ಇಲ್ಲ. ಜೊತೆಗೆ ಕಂತು ಪಾವತಿಸಿಲ್ಲ ಎಂಬ ಕಾರಣಕ್ಕೆ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್ಗಳನ್ನು ದುರ್ಬಳಕೆ ಮಾಡಿಕೊಂಡು, ಅವರ ಮೊಬೈಲ್ನಲ್ಲಿನ ಎಲ್ಲಾ ನಂಬರ್ಗಳಿಗೆ ಅಶ್ಲೀಲ ಅಥವಾ ಅವಹೇಳನಕಾರಿ ಸಂದೇಶ ಕಳುಹಿಸುವುದು... ಹೀಗೆ ಇನ್ನಿಲ್ಲದ ಕಿರುಕುಳಗಳಿಗೆ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೊಂದೆಡೆ, ಡೇಟಿಂಗ್ ಆಪ್ಗಳ ಮೂಲಕ ಹುಡುಗಿಯರ ಹೆಸರಿನಲ್ಲಿ ಹಣ ವಸೂಲಿ ಮಾಡುವುದು, ವಾಟ್ಸ್ಆ್ಯಪ್ (WhatsApp) ನಂಬರ್ ಪಡೆದು ಬ್ಲಾಕ್ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುವುದು, ರೈಲ್ವೆ ಟಿಕೆಟ್ ಬುಕಿಂಗ್ನಲ್ಲಿಯೂ ವಂಚಿಸುವುದು ಹೀಗೆ ಮೋಸದ ಜಾಲ ವಿಸ್ತಾರವಾಗಿದೆ. ಈಗ ವಾಯ್ಸ್ ಕ್ಲೋನಿಂಗ್ ಆಪ್ಗಳ ಮೂಲಕ ವ್ಯಕ್ತಿಯೊಬ್ಬರ ಧ್ವನಿಯನ್ನು ನಕಲು ಮಾಡಿ, ಆತನ ಸಂಪರ್ಕದಲ್ಲಿರುವ ಎಲ್ಲರಿಗೂ ಆತನ ಎಐ (AI) ಧ್ವನಿಯಲ್ಲಿಯೇ ಸಾಲ ಕೇಳುವುದು... ಹೀಗೆ ಲೆಕ್ಕವಿಲ್ಲದಷ್ಟು ಬಗೆಯ ಸೈಬರ್ ವಂಚನೆಗಳು ನಡೆಯುತ್ತಲೇ ಇವೆ. ಇಷ್ಟೆಲ್ಲಾ ವಂಚನೆಗಳು ನಡೆಯುತ್ತಿದ್ದರೂ, ಸಾರ್ವಜನಿಕರು ಈವರೆಗೂ ಎಚ್ಚೆತ್ತುಕೊಳ್ಳದಿರುವುದು ಸಮಾಜವನ್ನೇ ಅಣಕಿಸುವಂತಿದೆ.
ಸೈಬರ್ ಕ್ರೈಂ ಹೆಚ್ಚಾಗಲು ಕಾರಣ..
*ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಳ
*ಡಿಜಿಟಲ್ ಸಾಕ್ಷರತೆ ಕೊರತೆ
*ಜಾಲತಾಣಗಳ ಅತಿಯಾದ ಬಳಕೆ
*ಮುಗ್ದತೆ ಇಲ್ಲವೇ ಆರ್ಥಿಕ ಲಾಭಾದ ಆಸೆಗೆ ಬಲಿಯಾಗುವುದು
*ಅತ್ಯಾಧುನಿಕ ತಂತ್ರಜ್ಞಾನ ದುರುಪಯೋಗ (ವಿಪಿಎನ್, ಎನ್ ಕ್ರಿಪ್ಷನ್, ಡಾರ್ಕ್ ವೆಬ್...ಹೀಗೆ ಮುಂತಾದ ಸಾಮಾಗ್ರಿಗಳಿಂದ ಅಪರಾಧಗಳು ತಮ್ಮ ಗುರುತನ್ನು ಮರೆಮಾಚುವುದು)
*ಡಿಜಿಟಲ್ ಪಾವತಿ ವಿಧಾನಗಳ ವಿಸ್ತರಣೆ ( ಇ ವಾಲೆಟ್, ಕ್ರಿಡಿಟ್ ಕಾರ್ಡ್, ಯುಪಿಐ, ಇತ್ಯಾದಿ)
ಸರಕಾರದ ಕ್ರಮಗಳೇನು?
2021ರ ಡಿಸೆಂಬರ್ನಿಂದ ಕೇಂದ್ರ ಗೃಹ ಸಚಿವಾಲಯದ ಸಹಯೋಗದೊಂದಿಗೆ ಎನ್ಸಿಆರ್ಪಿ (ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ - 1930) ಆರಂಭಿಸಿ, ಆನ್ಲೈನ್ ಮೂಲಕ ಅಕ್ರಮ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.
ಹೊಸದಾಗಿ 43 ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ಅಪರಾಧ ತನಿಖಾ ಸಂಸ್ಥೆ (ಸಿಐಡಿ) ಹಾಗೂ ಕೇಂದ್ರ ತರಬೇತಿ ಘಟಕ (ಸೆಂಟರ್ ಫಾರ್ ಸೈಬರ್ ಕ್ರೈಂ ಇನ್ವೆಸ್ಟಿಗೇಷನ್ ಟ್ರೈನಿಂಗ್ ಅಂಡ್ ರಿಸರ್ಚ್ - CCITR) ಸ್ಥಾಪಿಸಿ, ಪೊಲೀಸ್ ಠಾಣೆಯ ಸಿಬ್ಬಂದಿಗೆ ಸೈಬರ್ ಅಪರಾಧಗಳನ್ನು ಭೇದಿಸಲು ತರಬೇತಿ ನೀಡಲಾಗುತ್ತಿದೆ.
ಸಿಐಡಿ ಘಟಕದಲ್ಲಿನ ಸೈಬರ್ ಫಾರೆನ್ಸಿಕ್ ಸೆಲ್ನಿಂದ ಪ್ರತಿ ವರ್ಷ ಸುಮಾರು 1500 ಸೈಬರ್ ಅಪರಾಧ ಪ್ರಕರಣಗಳಿಗೆ ವೈಜ್ಞಾನಿಕ ವರದಿ ನೀಡಲಾಗುತ್ತಿದೆ.
ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಲತಾಣಗಳು ಮತ್ತು ಎಲ್ಲಾ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಮೊಬೈಲ್ ಸೇವಾ ಪೂರೈಕೆದಾರರ (Service Providers) ಮೂಲಕ ಕರೆ ಸ್ವೀಕರಿಸುವ ಮುನ್ನವೇ ಜಾಗೃತಿ ಸಂದೇಶ ಬಿತ್ತರಿಸಲಾಗುತ್ತಿದೆ.
ಸುಧಾರಿತ ತರಬೇತಿಗಳಾದ ಡ್ರೋನ್ ಫಾರೆನ್ಸಿಕ್, ಕ್ಲೌಡ್ ಫಾರೆನ್ಸಿಕ್, ವೇರಿಯಬಲ್ ಡಿವೈಸ್ ಫಾರೆನ್ಸಿಕ್, ಕ್ರಿಪ್ಟೋ ಕರೆನ್ಸಿ ಟ್ರೇಸಿಂಗ್ ಅಂಡ್ ಇನ್ವೆಸ್ಟಿಗೇಷನ್ಗಳಲ್ಲಿ ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ. ಸೈಬರ್ ಠಾಣೆಗಳ ಮೇಲುಸ್ತುವಾರಿಗಾಗಿ ಡಿಜಿಪಿ (ಸೈಬರ್ ಮತ್ತು ನಾರ್ಕೋಟಿಕ್ಸ್) ಹುದ್ದೆಯನ್ನು ಸೃಜಿಸಲಾಗಿದೆ. ಬೆಂಗಳೂರು ನಗರದಲ್ಲಿ 8 ಸೈಬರ್ ಸೆಕ್ಯೂರಿಟಿ ಅನಾಲಿಸ್ಟ್ ಮತ್ತು 8 ಡಿಜಿಟಲ್ ಫಾರೆನ್ಸಿಕ್ ಅನಾಲಿಸ್ಟ್ ಸೇರಿದಂತೆ ಒಟ್ಟು 16 ಸೈಬರ್ ತಾಂತ್ರಿಕ ತಜ್ಞರನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿದೆ.
ಡಿಜಿಟಲ್ ಅರೆಸ್ಟ್
2024ರಲ್ಲಿ ಒಟ್ಟು 1055 'ಡಿಜಿಟಲ್ ಅರೆಸ್ಟ್' ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಕೇವಲ 99 ಪ್ರಕರಣಗಳಷ್ಟೇ ಪತ್ತೆಯಾಗಿವೆ. ಇದೇ ಸಾಲಿನಲ್ಲಿ ಒಟ್ಟು 22,472 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಕೇವಲ 2858 ಪ್ರಕರಣಗಳಷ್ಟೇ ಪತ್ತೆಯಾಗಿವೆ. ಬರೋಬ್ಬರಿ 221.54 ಕೋಟಿ (2,21,54,49,720) ರೂ. ಮೊತ್ತದಷ್ಟು ಸೈಬರ್ ವಂಚನೆ ನಡೆದಿದೆ. ಜೊತೆಗೆ ಡಿಜಿಟಲ್ ಅರೆಸ್ಟ್ನಂತಹ ಪ್ರಕರಣಗಳಿಂದಲೇ ಸುಮಾರು 211.84 ಕೋಟಿ (2,11,84,18,063) ರೂ.ಗಳಷ್ಟು ಮೊತ್ತ ವಂಚನೆಯಾಗಿದೆ.
ಭಯ ಪಡುವವರೆ ಹೆಚ್ಚು
ಈ ಬಗ್ಗೆ ಮನೋವೈದ್ಯ ಡಾ.ಆದರ್ಶ್ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, ಸೈಬರ್ ವಂಚಕರು ನಿತ್ಯ ನೂರು ಮಂದಿಗೆ ಗಾಳ ಹಾಕಿದರೆ, ಅದರಲ್ಲಿ ಹತ್ತು ಮಂದಿ ಬಲೆಗೆ ಬೀಳುತ್ತಾರೆ. ಅದರಲ್ಲೂ ಆಂತಕದ (ಆಕ್ಸೈಟಿ) ಮನಸ್ಥಿತಿ ಹೊಂದಿರುವವರೆ ಹೆಚ್ಚಾಗಿದ್ದಾರೆ. ಜತೆಗೆ ಸಿರಿವಂತರು, ಉನ್ನತ ಹುದ್ದೆಯಲ್ಲಿರುವವರು ಅಕ್ರಮವಾಗಿ ಸಂಪಾದಿಸಿರುವ ಹಣದ ಭಯದಿಂದಾಗಿ ಅತೀ ಸುಲಭವಾಗಿ ಸೈಬರ್ ವಂಚಕರ ಜಾಲಕ್ಕೆ ಸಿಲುಕುತ್ತಾರೆ. ಇನ್ನೂ ಕೆಲವರು ತಮ್ಮ ಪ್ರತಿಷ್ಠೆಗೆ ಹೆದರಿ, ಈ ರೀತಿ ವಂಚನೆಗೊಳಗಾಗುತ್ತಾರೆ ಎಂದು ವಿವರಿಸಿದರು.
ಸೈಬರ್ ವಂಚನೆಗೆ ಇಂಥಹವರೆ ಎಂಬ ನಿರ್ಧಿಷ್ಟ ಟಾರ್ಗೆಟ್ ಇಲ್ಲ. ಯಾರು ಬೇಕಿದ್ದರೂ ವಂಚನೆಗೊಳಗಾಗಬಹುದು. ಅತೀ ಬುದ್ದಿವಂತಿಕೆ ಹಾಗೂ ದಡ್ಡತನಗಳೇ ವಂಚಕರಿಗೆ ಗಾಳ. ಲಿಂಕ್ಗಳ ಮೇಲೆ ಕ್ಲಿಕ್ಕಿಸುವುದು, ಉಡುಗೊರೆಗಳು, ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಖರೀದಿಸುವಾಗ ಗೂಗಲ್ನ "ಥರ್ಡ್ ಪಾರ್ಟಿʼ ಅಪ್ಲಿಕೇಷನ್ಗಳನ್ನು ಬಳಕೆ ಮಾಡುವುದು ಸಹ ವಂಚಕರಿಗೆ ಅನುಕೂಲವಾಗುತ್ತದೆ. ಬ್ಯಾಂಕಿನ ಉದ್ಯೋಗಿಯೊಬ್ಬರು ಎಟಿಎಂನ ಪಾಸ್ವರ್ಡ್ ಮರೆಯುತ್ತೆನೆ ಎಂಬ ಕಾರಣಕ್ಕೆ ಮೊಬೈಲ್ ಹಿಂದಿನ ಕವರ್ನೊಳಗೆ ಪಾಸ್ ವರ್ಡ್ ಬರೆದಿಟ್ಟಿದ್ದರು. ಜತೆಗೆ ಎಟಿಎಂ ಕಾರ್ಡ್ ಸಹ ಇಟ್ಟಿದ್ದರು. ಮೊಬೈಲ್ ಕದ್ದವನು, ಎಟಿಎಂನಲ್ಲಿ ಹಣವನ್ನು ಡ್ರಾ ಮಾಡಿಕೊಟ್ಟಿದ್ದ. ಇತಂಹ ವಿದ್ಯಾವಂತರಿಗೆ ಏನು ಹೇಳೊದು ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾಹಿತಿ ಹಂಚಿಕೊಂಡರು.

