
GST Fraud| ತೆರಿಗೆ ವಂಚನೆ ಜಾಲ ಬೇಧಿಸಿದ ವಾಣಿಜ್ಯ ತೆರಿಗೆ ಇಲಾಖೆ; ಪ್ರಮುಖ ಆರೋಪಿ ಬಂಧನ
ಆಂಧ್ರಪ್ರದೇಶದ ಚಿತ್ತೂರು ಮೂಲದ ಈತನನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸದ್ದು, ನ್ಯಾಯಾಲಯವು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯ ಎನ್‌ಫೋರ್ಸ್‌ಮೆಂಟ್ ವಿಭಾಗವು ಅತಿ ದೊಡ್ಡ ತೆರಿಗೆ ವಂಚನೆ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ನಕಲಿ ಬಿಲ್ ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಂತರ ರೂ.ತೆರಿಗೆ ವಂಚಿಸುತ್ತಿದ್ದ ಅಂತರರಾಜ್ಯ ಜಾಲವನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಸುಮಾರು 410 ಕೋಟಿ ಮೌಲ್ಯದ ನಕಲಿ ವಹಿವಾಟು ನಡೆಸಿ, ಸರ್ಕಾರಕ್ಕೆ ಕಟ್ಟಬೇಕಿದ್ದ 102.5 ಕೋಟಿ ತೆರಿಗೆ ಹಣವನ್ನು ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ತೌಕೀರ್ ಅಲಿಯಾಸ್ ಮೊಹಮ್ಮದ್ (42) ಎಂಬಾತನನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಮೂಲದ ಈತನನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸದ್ದು, ನ್ಯಾಯಾಲಯವು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಶೇಕ್ ಜಾಕೀರ್ ಹುಸೇನ್ ಅಲಿಯಾಸ್ ಬಾಷಾ ಎಂಬಾತ ವಿದೇಶಕ್ಕೆ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ.
ವಂಚನೆ ಮಾಡಿದ್ದು ಹೇಗೆ?
ಆರೋಪಿಗಳು ಅತ್ಯಂತ ವ್ಯವಸ್ಥಿತವಾಗಿ ಅಮಾಯಕರನ್ನು ಬಳಸಿಕೊಂಡು ವಂಚನೆ ಎಸಗುತ್ತಿದ್ದರು. ಬಡವರ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ಗಳನ್ನು ಪಡೆದು, ಅವರ ಹೆಸರಿನಲ್ಲಿ ನಕಲಿ ಕಂಪನಿಗಳನ್ನು ನೋಂದಣಿ ಮಾಡಿಸುತ್ತಿದ್ದರು. ಯಾವುದೇ ರೀತಿಯ ಸರಕು ಅಥವಾ ಸೇವೆಗಳನ್ನು ಪೂರೈಸದೆ, ಕೇವಲ ಸಿಮೆಂಟ್ ಮತ್ತು ಕಬ್ಬಿಣದ ಸರಳುಗಳ ಹೆಸರಿನಲ್ಲಿ ನಕಲಿ ಬಿಲ್ಗಳನ್ನು ಸೃಷ್ಟಿಸುತ್ತಿದ್ದರು.
ನಕಲಿ ಬಿಲ್‌ಗಳ ಮೂಲಕ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆದು, ಅದನ್ನು ವಿವಿಧ ಕಾಂಟ್ರಾಕ್ಟರ್ಗಳಿಗೆ ವರ್ಗಾಯಿಸುವ ಮೂಲಕ ತೆರಿಗೆ ವಂಚನೆಗೆ ದಾರಿ ಮಾಡಿಕೊಡುತ್ತಿದ್ದರು. ತೆರಿಗೆ ಇಲಾಖೆಯಿಂದ ನೋಂದಣಿ ಪರಿಶೀಲನೆ ಅಥವಾ ನೋಟಿಸ್ ಬರುತ್ತಿದ್ದಂತೆಯೇ ಜಿಎಸ್ಟಿ ನೋಂದಣಿಯನ್ನು ತಾವೇ ರದ್ದುಪಡಿಸುತ್ತಿದ್ದರು. ನಂತರ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗಳನ್ನು ಬದಲಿಸಿ ಅಲ್ಲಿಂದ ಪರಾರಿಯಾಗುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಅಂತರರಾಜ್ಯ ಜಾಲದ ನಂಟು
ತೆರಿಗೆ ವಂಚನೆ ಜಾಲವು ಕೇವಲ ಕರ್ನಾಟಕಕ್ಕೆ ಸೀಮಿತವಾಗದೇ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೂ ವ್ಯಾಪಿಸಿತ್ತು. ಮೂರು ರಾಜ್ಯಗಳ ನಡುವೆ ನಕಲಿ ಬಿಲ್ಗಳ ಜಾಲವನ್ನು ಹರಡಿದ್ದ ಈ ತಂಡ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯ ಎನ್‌ಫೋರ್ಸ್‌ಮೆಂಟ್ ವಿಭಾಗದ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ವಂಚಿರುವ 102.5 ಕೋಟಿ ಹಣವನ್ನು ವಸೂಲಿ ಮಾಡಲು ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಜಾಲದಲ್ಲಿ ಇನ್ನೂ ಹಲವು ಪ್ರಭಾವಿಗಳು ಮತ್ತು ಗುತ್ತಿಗೆದಾರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

