
Karnataka Bitcoin Scam | ಬಿಟ್ ಕಾಯಿನ್ ಕಿಂಗ್‌ಪಿನ್ ಶ್ರೀಕಿ ಬಂಧನ ಫಿಕ್ಸ್?
ಕರ್ನಾಟಕದ ಬಿಟ್ ಕಾಯಿನ್ ಹಗರಣದ ತನಿಖೆ ತೀವ್ರಗೊಂಡಿದೆ. ಶಾಸಕ ನಲಪಾಡ್ ಸಹೋದರರು ಮತ್ತು ಹಕೀಬ್ ಖಾನ್ ನಿವಾಸದ ಮೇಲೆ ಇ.ಡಿ. ದಾಳಿ ನಡೆಸಿದೆ.
ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಬಿಟ್ ಕಾಯಿನ್ ಹಗರಣದ ತನಿಖೆ ಈಗ ಪ್ರಭಾವಿ ರಾಜಕಾರಣಿಗಳ ಕುಟುಂಬದವರ ಮನೆ ಬಾಗಿಲಿಗೆ ಬಂದು ನಿಂತಿದೆ. ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಬಿಟ್ ಕಾಯಿನ್ ಹಗರಣ ಈಗ ಕೇವಲ ಹ್ಯಾಕಿಂಗ್‌ಗೆ ಸೀಮಿತವಾಗಿಲ್ಲ ಎಂಬುದು ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆಯಲ್ಲಿ ಸಾಬೀತಾಗುತ್ತಿದೆ. ಈ ಬೃಹತ್ ಹಗರಣದ ಹಿಂದೆ ಹವಾಲಾ ಜಾಲ ಮತ್ತು ಅಕ್ರಮ ಹಣ ವರ್ಗಾವಣೆಯ (Money Laundering) ಕರಾಳ ಹಸ್ತವಿರುವುದು ಪತ್ತೆಯಾಗಿದ್ದು, ಹಗರಣದ ಕಿಂಗ್‌ಪಿನ್ ಹ್ಯಾಕರ್ ಶ್ರೀಕಿಯನ್ನು ಇ.ಡಿ. ಅಧಿಕಾರಿಗಳು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಶ್ರೀಕಿಯನ್ನು ದಾಳವಾಗಿ ಬಳಸಿಕೊಂಡು ರಾಜ್ಯದ ಹಲವು ಪ್ರಭಾವಿಗಳು ಕೋಟ್ಯಂತರ ರೂಪಾಯಿ ಅಕ್ರಮ ವ್ಯವಹಾರ ನಡೆಸಿರುವ ಗಂಭೀರ ಸುಳಿವು ಲಭ್ಯವಾಗಿದ್ದು, ತನಿಖೆ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ.
ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರರ ಬೆನ್ನಲ್ಲೇ, ಈಗ ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್ ಅವರ ಮೊಮ್ಮಗ ಹಕೀಬ್ ಖಾನ್ ಅವರಿಗೆ ಜಾರಿ ನಿರ್ದೇಶನಾಲಯದ (ಇ.ಡಿ.) ಕಂಟಕ ಎದುರಾಗಿದೆ. ಹ್ಯಾಕರ್ ಶ್ರೀಕಿ ಗ್ಯಾಂಗ್ ಜೊತೆ ಕೋಟ್ಯಂತರ ರೂಪಾಯಿಗಳ ಹವಾಲಾ ಮತ್ತು ಅಕ್ರಮ ಹಣಕಾಸು ವ್ಯವಹಾರ ನಡೆಸಿದ ಗಂಭೀರ ಆರೋಪದ ಮೇಲೆ ಹಕೀಬ್ ನಿವಾಸದ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಶ್ರೀಕಿ ಗ್ಯಾಂಗ್ ಜೊತೆ ಕೋಟ್ಯಂತರ ವಹಿವಾಟು?
ಕುಖ್ಯಾತ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಮತ್ತು ಆತನ ಗ್ಯಾಂಗ್ ಜೊತೆ ಹಕೀಬ್ ಖಾನ್ ನಿಕಟ ಸಂಪರ್ಕ ಹೊಂದಿರುವುದು ಇ.ಡಿ. ತನಿಖೆಯಲ್ಲಿ ಪ್ರಾಥಮಿಕವಾಗಿ ಪತ್ತೆಯಾಗಿದೆ. ಇವರ ನಡುವೆ ಕೋಟ್ಯಂತರ ರೂಪಾಯಿಗಳ ಅಕ್ರಮ ಹಣಕಾಸು ವ್ಯವಹಾರ ಮತ್ತು ಹವಾಲಾ ಜಾಲದ ನಂಟಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸೋಮವಾರ ಹಕೀಬ್ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು.
ಇ.ಡಿ. ದಾಳಿ ಮತ್ತು ದಾಖಲೆಗಳ ಜಪ್ತಿ
ಸೋಮವಾರ ಬೆಳ್ಳಂಬೆಳಗ್ಗೆ ಆರಂಭವಾದ ಶೋಧ ಕಾರ್ಯವು ಮಂಗಳವಾರ ರಾತ್ರಿಯವರೆಗೂ ಮುಂದುವರಿದಿತ್ತು. ಹಕೀಬ್ ಖಾನ್ ನಿವಾಸದಲ್ಲಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ್ದು, ವ್ಯವಹಾರಕ್ಕೆ ಸಂಬಂಧಿಸಿದ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖವಾಗಿ ಡಿಜಿಟಲ್ ಸಾಕ್ಷ್ಯಗಳು ಮತ್ತು ಬ್ಯಾಂಕ್ ವಹಿವಾಟಿನ ಕಡತಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಲಪಾಡ್ ಸಹೋದರರಿಗೆ ಇಡೀ ರಾತ್ರಿ ಇ.ಡಿ. ಡ್ರಿಲ್
ಬಿಟ್ ಕಾಯಿನ್ ಹಗರಣದ ತನಿಖೆ ತೀವ್ರಗೊಳಿಸಿರುವ ಇ.ಡಿ. ಅಧಿಕಾರಿಗಳು, ಸೋಮವಾರ ಬೆಳ್ಳಂಬೆಳಗ್ಗೆ ಶಾಂತಿನಗರದ ಶಾಸಕ ಎನ್.ಎ. ಹ್ಯಾರಿಸ್ ಪುತ್ರರಾದ ಮೊಹಮ್ಮದ್ ನಲಪಾಡ್ ಮತ್ತು ಓಮರ್ ನಲಪಾಡ್ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಇಡೀ ರಾತ್ರಿ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಹ್ಯಾಕರ್ ಶ್ರೀಕಿ ಜೊತೆಗಿನ ಹಣಕಾಸು ವ್ಯವಹಾರದ ಶಂಕೆಯ ಮೇಲೆ ನಡೆದ ಈ ಕಾರ್ಯಾಚರಣೆಯಲ್ಲಿ ನಲಪಾಡ್‌ಗೆ ಸೇರಿದ ಎರಡು ಮೊಬೈಲ್ ಫೋನ್‌ಗಳು, ಹಾರ್ಡ್ ಡಿಸ್ಕ್‌ಗಳು, ವಿದೇಶಿ ಬ್ಯಾಂಕ್ ಖಾತೆಗಳ ವಿವರ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದ್ದು, ಮುಂದಿನ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ನಲಪಾಡ್ ಸಹೋದರರಿಗೆ ಇ.ಡಿ. ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

