
ಬೆಳಗಾವಿ ನಗರದ ಚಾವ್ಹಾಣ್ ಗಲ್ಲಿಯಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ದುರಂತವಾಗಿ ಸಜೀವ ದಹನಗೊಂಡಿದ್ದಾರೆ.
ನಾಲ್ವರ ಸಜೀವ ದಹನಕ್ಕೆ ಫ್ರಿಡ್ಜ್ ಸ್ಫೋಟವೇ ಕಾರಣ
ಬೆಳಗಾವಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಫ್ರಿಡ್ಜ್ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ. ಹಬ್ಬದ ವೇಳೆಯೇ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಬೆಳಗಾವಿ ನಗರದ ಚಾವ್ಹಾಣ್ ಗಲ್ಲಿಯಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡದಲ್ಲಿ ನಾಲ್ವರು ಸಜೀವ ದಹನಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಂಗತಿಯೊಂದು ಬಯಲಾಗಿದೆ. ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮವಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮದಿಂದ ಪೂಜೆ ಸಲ್ಲಿಸಿದ್ದ ಕುಟುಂಬಸ್ಥರು, ಊಟ ಮುಗಿಸಿ ನಿದ್ರೆಗೆ ಜಾರಿದ್ದರು. ಇದೇ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಫ್ರಿಡ್ಜ್ ಸ್ಫೋಟಗೊಂಡಿದೆ ಎಂದು ಶಂಕಿಸಲಾಗಿದೆ. ಫ್ರಿಡ್ಜ್ ಸಮೀಪದಲ್ಲೇ ಮಲಗಿದ್ದವರಿಗೆ ಬೆಂಕಿಯ ತೀವ್ರತೆಯಿಂದಾಗಿ ಹೊರಬರಲು ಸಾಧ್ಯವಾಗದೆ ದುರಂತ ಅಂತ್ಯ ಕಂಡಿದ್ದಾರೆ.
ಈ ಅಗ್ನಿ ಅವಘಡದಲ್ಲಿ ಶಾರದಾ ದಮೋನೆ (45), ಭಾರತಿ ರಾಜಾರಾಮ ದಮೋನೆ (50), ಪ್ರಿಯಾ ಗಜಾನನ ದಮೋನೆ (28) ಮತ್ತು ಗಂಗಾ ಗಜಾನನ ದಮೋನೆ (25) ಅಗ್ನಿಗೆ ಬಲಿಯಾಗಿದ್ದಾರೆ. ಇನ್ನು ಗಜಾನನ ರಾಜಾರಾಮ ದಮೋನೆ (65) ಹಾಗೂ ರೋಷನ ಗಜಾನನ ದಮೋನೆ (21) ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಟ್ಟು ಕರಕಲಾದ ಮನೆ, ಕಣ್ಣೀರಲ್ಲಿ ಗಣೇಶ ವಿಸರ್ಜನೆ
ಸ್ಫೋಟದ ರಭಸಕ್ಕೆ ಫ್ರಿಡ್ಜ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದರ ಅವಶೇಷಗಳು ಮಾತ್ರ ಉಳಿದುಕೊಂಡಿವೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಗಣೇಶ ಮಂಟಪದ ಒಂದು ಭಾಗವೂ ಭಸ್ಮವಾಗಿದೆ. ಹಬ್ಬದ ಖುಷಿಯಲ್ಲಿದ್ದ ಕುಟುಂಬವು ಕೆಲವೇ ಕ್ಷಣಗಳಲ್ಲಿ ಶೋಕಸಾಗರದಲ್ಲಿ ಮುಳುಗಿದ್ದು, ದುರಂತದ ಬೆನ್ನಲ್ಲೇ ಸಂಬಂಧಿಕರು ಹಾಗೂ ಸ್ಥಳೀಯರು ಕಣ್ಣೀರಿನ ನಡುವೆಯೇ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿದ್ದಾರೆ.
ಕೂಲಿ ಕಾರ್ಮಿಕರ ಕುಟುಂಬ
ದೈನಂದಿನ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಕುಟುಂಬದಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವೇ ಅಥವಾ ಫ್ರಿಡ್ಜ್ ಸ್ಫೋಟಗೊಳ್ಳಲು ಬೇರೆ ಏನಾದರೂ ತಾಂತ್ರಿಕ ದೋಷವಿತ್ತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

