Woman dies after going to give birth at home after watching YouTube; Case filed against husband!
x

ಕಂಠೀರವ ಸ್ಟುಡಿಯೋ ಬಳಿ ಅಂಡರ್‌ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ. 

ಡಾ. ರಾಜ್‌ಕುಮಾರ್ ಸಮಾಧಿ ಬಳಿ ಅಂಡರ್‌ಪಾಸ್‌ ಕುಸಿತ- ಕಾರ್ಮಿಕ ಸಾವು, ಇಬ್ಬರಿಗೆ ಗಾಯ

ಕಂಠೀರವ ಸ್ಟುಡಿಯೋ ಬಳಿಯ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಸುಮಾರು 20 ಅಡಿ ಆಳದವರೆಗೆ ಮಣ್ಣು ತೆರವುಗೊಳಿಸಲಾಗಿತ್ತು. ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮಣ್ಣಿನ ತಡೆಗೋಡೆ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ.


Click the Play button to hear this message in audio format

ಬೆಂಗಳೂರಿನ ಕಂಠೀರವ ಸ್ಟುಡಿಯೋ ಹಾಗೂ ಡಾ. ರಾಜ್‌ಕುಮಾರ್ ಸಮಾಧಿ ಸಮೀಪ ಅಂಡರ್‌ಪಾಸ್‌ ಕಾಮಗಾರಿ ವೇಳೆ ಮಣ್ಣು ಕುಸಿದು ಓರ್ವ ಕಾರ್ಮಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ.

ಕಂಠೀರವ ಸ್ಟುಡಿಯೋ ಬಳಿಯ ರಸ್ತೆಯಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ಸುಮಾರು 20 ಅಡಿ ಆಳದವರೆಗೆ ಮಣ್ಣು ತೆರವುಗೊಳಿಸಲಾಗಿತ್ತು. ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಮಣ್ಣಿನ ತಡೆಗೋಡೆ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ. ಪರಿಣಾಮ ಮೂವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.

ಘಟನೆ ಸಂಭವಿಸಿದ ಕೂಡಲೇ ಸ್ಥಳದಲ್ಲಿದ್ದವರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೂ ಮಾಹಿತಿ ನೀಡಲಾಗಿದೆ. ತಕ್ಷಣ ಕಾರ್ಯಾಚರಣೆ ನಡೆಸಿ ಇಬ್ಬರು ಕಾರ್ಮಿಕರನ್ನು ಮಣ್ಣಿನಿಂದ ಹೊರತೆಗೆಯಲಾಗಿದೆ. ಆದರೆ ಮತ್ತೊಬ್ಬ ಕಾರ್ಮಿಕನನ್ನು ರಕ್ಷಿಸುವಷ್ಟರಲ್ಲಿ ಮೃತಪಟ್ಟಿದ್ದ ಎನ್ನಲಾಗಿದೆ.

ಒಡಿಶಾ ಮೂಲದ ಕಾರ್ಮಿಕ ಸಾವು

ಮೃತ ಕಾರ್ಮಿಕ ಒಡಿಶಾ ಮೂಲದವರು ಎಂದು ತಿಳಿದುಬಂದಿದೆ. ಕಾಮಗಾರಿ ಸ್ಥಳದಲ್ಲಿ ಒಟ್ಟು 15 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಣ್ಣು ಕುಸಿದ ವೇಳೆ ಮೂವರು ಕಾರ್ಮಿಕರು ಅಪಾಯಕ್ಕೆ ಸಿಲುಕಿದ್ದಾರೆ. ಈ ಅಂಡರ್‌ಪಾಸ್ ಕಾಮಗಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೈಗೆತ್ತಿಕೊಂಡಿದೆ. ಘಟನೆ ಕುರಿತು BDA ಆಯುಕ್ತ ಕ್ಯಾಪ್ಟನ್ ಮಣಿವಣ್ಣನ್ ಮಾಹಿತಿ ಪಡೆದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಸೂಚಿಸಿದ್ದಾರೆ.

ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ

ಮಣ್ಣಿನಡಿ ಸಿಲುಕಿ ಗಾಯಗೊಂಡ ಇಬ್ಬರು ಕಾರ್ಮಿಕರಿಗೆ ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿದೆ. 24 ಗಂಟೆಯೊಳಗೆ ಪರಿಹಾರ ಮೊತ್ತವನ್ನು ಕುಟುಂಬಕ್ಕೆ ನೀಡುವಂತೆ ಸೂಚಿಸಲಾಗಿದೆ.

ಘಟನೆ ಕುರಿತು ಆಂತರಿಕ ತನಿಖೆ

ದುರಂತದ ಕಾರಣ ಪತ್ತೆಹಚ್ಚಲು BDA ಆಂತರಿಕ ತನಿಖೆ ಆರಂಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಲಾಗಿದ್ದು, 45 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕಾಮಗಾರಿ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ, ಮಣ್ಣು ಕುಸಿಯಲು ಕಾರಣವೇನು, ಕಾಮಗಾರಿ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಹಾಗೂ ಯಾವುದೇ ನಿರ್ಲಕ್ಷ್ಯ ನಡೆದಿದೆಯೇ ಎಂಬ ಕುರಿತು ತನಿಖೆ ನಡೆಯಲಿದೆ.

ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ

20 ಅಡಿ ಆಳದ ಗುಂಡಿಯಲ್ಲಿ ಕಾಮಗಾರಿ ನಡೆಸುವಾಗ ಮಣ್ಣು ಕುಸಿಯದಂತೆ ಸೂಕ್ತ ತಡೆ ವ್ಯವಸ್ಥೆ ಹಾಗೂ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ. ಇದೀಗ ಸಂಭವಿಸಿರುವ ದುರಂತದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳದಲ್ಲಿನ ಸುರಕ್ಷತಾ ವ್ಯವಸ್ಥೆಗಳನ್ನೂ ಪರಿಶೀಲಿಸಲು BDA ಮುಂದಾಗಿದೆ. ತನಿಖಾ ವರದಿ ಬಂದ ಬಳಿಕ ಘಟನೆಗೆ ಕಾರಣರಾದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Read More
Next Story