ಬ್ಯಾಂಕ್‌ನಿಂದ ಡ್ರಾ ಮಾಡಿದ್ದ ಹಣಕ್ಕೆ ಕನ್ನ, ಸ್ಕೂಟರ್ ಡಿಕ್ಕಿಯಲ್ಲಿದ್ದ ಲಕ್ಷಾಂತರ ರೂಪಾಯಿ ಎಗರಿಸಿದ ಖದೀಮರು
x

 ಖದೀಮರು ಸ್ಕೂಟರ್ ಡಿಕ್ಕಿಯನ್ನು ಜಾಣ್ಮೆಯಿಂದ ತೆರೆದು, ಅದರಲ್ಲಿದ್ದ 3.50 ಲಕ್ಷ ರೂಪಾಯಿ ಹಣವನ್ನು ದೋಚಿದ್ದಾರೆ. 

ಬ್ಯಾಂಕ್‌ನಿಂದ ಡ್ರಾ ಮಾಡಿದ್ದ ಹಣಕ್ಕೆ ಕನ್ನ, ಸ್ಕೂಟರ್ ಡಿಕ್ಕಿಯಲ್ಲಿದ್ದ ಲಕ್ಷಾಂತರ ರೂಪಾಯಿ ಎಗರಿಸಿದ ಖದೀಮರು

ಇದೇ ಮಾದರಿಯಲ್ಲಿ ಅದೇ ದಿನ ನಡೆದ ಮತ್ತೊಂದು ಪ್ರಕರಣದಲ್ಲಿ, ಕರ್ನಾಟಕ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ ಗ್ರಾಹಕರೊಬ್ಬರ ₹1 ಲಕ್ಷ ಹಣವನ್ನು ಕದಿಯಲಾಗಿದೆ.


Click the Play button to hear this message in audio format

ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬರುವ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಸ್ಕೂಟರ್ ಡಿಕ್ಕಿಯನ್ನು ಒಡೆದು ಲಕ್ಷಾಂತರ ರೂಪಾಯಿ ಹಣ ದೋಚುವ ಜಾಲವೊಂದು ಕನಕಪುರ ನಗರದಲ್ಲಿ ಸಕ್ರಿಯವಾಗಿದೆ. ಗುರುವಾರ (ಮೇ 7) ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸ್ಕೂಟರ್ ಡಿಕ್ಕಿಯಲ್ಲಿದ್ದ ಒಟ್ಟು ₹4.50 ಲಕ್ಷ ಹಣವನ್ನು ಖದೀಮರು ಎಗರಿಸಿರುವ ಘಟನೆ ವರದಿಯಾಗಿದೆ.

ಸಮೀಪದ ತೋಕಸಂದ್ರ ಗ್ರಾಮದ ನಿವಾಸಿ ಹಾಗೂ ರೇಷ್ಮೆ ಗೂಡಿನ ವ್ಯಾಪಾರಿಯೊಬ್ಬರು ಗುರುವಾರ ನಗರದ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿದ್ದರು. ಡ್ರಾ ಮಾಡಿದ್ದ ಹಣದಲ್ಲಿ ₹50 ಸಾವಿರವನ್ನು ತಮ್ಮ ಬಳಿಯೇ ಭದ್ರವಾಗಿಟ್ಟುಕೊಂಡು, ಉಳಿದ 3.50 ಲಕ್ಷ ರೂಪಾಯಿ ಹಣವನ್ನು ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದರು.

ನಂತರ ಅವರು ವ್ಯಾಪಾರದ ನಿಮಿತ್ತ ಕುರುಬರ ದೊಡ್ಡಿಯಲ್ಲಿ ರೈತರನ್ನು ಭೇಟಿಯಾಗಲು ತೆರಳಿದ್ದರು. ಅಲ್ಲಿಂದ ನಗರದ ಎಂ.ಎಚ್.ಎಸ್ (MHS) ಮೈದಾನದ ಬಳಿ ಬಂದು ಕೆಲಕಾಲ ವಿಶ್ರಾಂತಿ ಪಡೆದಿದ್ದಾರೆ. ಬಳಿಕ ವಾಣಿ ಟಾಕೀಸ್ ರಸ್ತೆಯಲ್ಲಿರುವ ಸಲೂನ್‌ಗೆ ತೆರಳಿ ಕ್ಷೌರ ಮಾಡಿಸಿಕೊಂಡು ತಮ್ಮ ಸ್ವಗ್ರಾಮ ತೋಕಸಂದ್ರಕ್ಕೆ ಹೊರಟಿದ್ದಾರೆ. ಈ ನಡುವಿನ ಅವಧಿಯಲ್ಲಿಯೇ ಖದೀಮರು ಸ್ಕೂಟರ್ ಡಿಕ್ಕಿಯನ್ನು ಜಾಣ್ಮೆಯಿಂದ ತೆರೆದು, ಅದರಲ್ಲಿದ್ದ 3.50 ಲಕ್ಷ ರೂಪಾಯಿ ಹಣವನ್ನು ದೋಚಿದ್ದಾರೆ. ಊರಿಗೆ ತೆರಳಿದ ಬಳಿಕ ಡಿಕ್ಕಿ ಪರಿಶೀಲಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಮತ್ತೊಬ್ಬ ಗ್ರಾಹಕನಿಗೆ 1 ಲಕ್ಷ ರೂ. ಪಂಗನಾಮ

ಇದೇ ಮಾದರಿಯಲ್ಲಿ ಅದೇ ದಿನ ನಡೆದ ಮತ್ತೊಂದು ಪ್ರಕರಣದಲ್ಲಿ, ಕರ್ನಾಟಕ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ ಗ್ರಾಹಕರೊಬ್ಬರ ₹1 ಲಕ್ಷ ಹಣವನ್ನು ಕದಿಯಲಾಗಿದೆ. ನಗರದ ಟಿ.ಎಂ.ಬಿ (TMB) ಬ್ಯಾಂಕ್ ಪಕ್ಕದಲ್ಲಿಯೇ ಈ ಕೃತ್ಯ ನಡೆದಿದ್ದು, ಸಾರ್ವಜನಿಕರ ಓಡಾಟವಿರುವ ಜನನಿಬಿಡ ಸ್ಥಳದಲ್ಲಿಯೇ ಕಳ್ಳರು ಕೈಚಳಕ ತೋರಿದ್ದಾರೆ.

ಒಂದೇ ದಿನ ನಗರದಲ್ಲಿ ಎರಡು ಕಳ್ಳತನ ಪ್ರಕರಣಗಳು ನಡೆದಿರುವುದು ಸಾರ್ವಜನಿಕರಲ್ಲಿ, ಅದರಲ್ಲೂ ಬ್ಯಾಂಕ್ ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಬ್ಯಾಂಕ್‌ಗಳಲ್ಲಿ ಹಣ ಡ್ರಾ ಮಾಡುವವರನ್ನೇ ಕಣ್ಣಿಟ್ಟು ಹಿಂಬಾಲಿಸಿ, ಅವರು ವಾಹನವನ್ನು ನಿಲ್ಲಿಸಿ ಬೇರೆಡೆ ಹೋದ ತಕ್ಷಣ ಡಿಕ್ಕಿ ಒಡೆದು ಹಣ ದೋಚುವ ಕಳ್ಳರ ತಂಡವೊಂದು ನಗರದಲ್ಲಿ ಬೀಡುಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.

ಈ ಎರಡೂ ಕಳ್ಳತನ ಪ್ರಕರಣಗಳ ಬಗ್ಗೆ ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬ್ಯಾಂಕ್ ಸುತ್ತಮುತ್ತಲಿನ ಹಾಗೂ ಕಳ್ಳತನ ನಡೆದಿರುವ ರಸ್ತೆಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

Read More
Next Story