ಬೆಂಗಳೂರಲ್ಲಿ ಕುಟುಂಬದ ಮೂವರನ್ನು ಕೊಂದ ಯುವಕ, ಬಳಿಕ ತಾನೂ ಆತ್ಮಹತ್ಯೆ
x

ಬೆಂಗಳೂರಲ್ಲಿ ಕುಟುಂಬದ ಮೂವರನ್ನು ಕೊಂದ ಯುವಕ, ಬಳಿಕ ತಾನೂ ಆತ್ಮಹತ್ಯೆ

ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಶಾಂತ್ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ. ಆರೋಪಿಯ ಮಾನಸಿಕ ಸ್ಥಿತಿಗತಿ ಕುರಿತು ತನಿಖೆ ನಡೆಯುತ್ತಿದೆ.


Click the Play button to hear this message in audio format

ಬೆಂಗಳೂರಿನಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳು ನಾಗರಿಕರನ್ನು ತಲ್ಲಣಗೊಳಿಸುತ್ತಿವೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ನಡೆದ ಕೌಟುಂಬಿಕ ಹತ್ಯೆ ನಗರವನ್ನು ಬೆಚ್ಚಿಬೀಳಿಸಿದೆ. ಶನಿವಾರ ಬೆಳಗಿನ ಜಾವ ನಡೆದ ಈ ಘಟನೆಯಲ್ಲಿ ಪ್ರಶಾಂತ್ (34) ಎಂಬ ಯುವಕ ತನ್ನ ತಾಯಿ ಮಂಗಳಮ್ಮ (55), ಅಜ್ಜಿ ನಂಜಮ್ಮ (65) ಹಾಗೂ ಬಾವ ಸತೀಶ್ (50) ಅವರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಬೆಳಗ್ಗೆ ತಂದೆ ಚಿಕ್ಕಣ್ಣ ಕೆಲಸದ ನಿಮಿತ್ತ ಹೊರಹೋದ ತಕ್ಷಣ, ಮನೆಯಲ್ಲಿದ್ದ ತನ್ನ ಕುಟುಂಬದ ಸದಸ್ಯರ ಮೇಲೆ ಪ್ರಶಾಂತ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿ ಪ್ರಶಾಂತ್‌ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಆದರೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಂತೆ ವರ್ತಿಸುತ್ತಿದ್ದ ಪ್ರಶಾಂತ್, ಅಷ್ಟರಲ್ಲಿಯೇ ಒಳಗಿನಿಂದ ಬಾಗಿಲು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕುಟುಂಬದ ಹಿನ್ನೆಲೆ

ಪ್ರಶಾಂತ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಪೋಷಕರು, ಅಜ್ಜಿ ಹಾಗೂ ಬಾವನೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದನು. ಪ್ರಶಾಂತ್‌ನ ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅಜ್ಜಿ ಪೌರ ಕಾರ್ಮಿಕರಾಗಿದ್ದರು. ಕುಟುಂಬದ ಸದಸ್ಯರು ದುಡಿಮೆಯ ಮೂಲಕ ಬದುಕು ಸಾಗಿಸುತ್ತಿದ್ದರು. ಇಂತಹ ಸಾಮಾನ್ಯ ಕುಟುಂಬದಲ್ಲಿ ಇಷ್ಟು ದೊಡ್ಡ ದುರಂತ ಸಂಭವಿಸಿರುವುದು ಅಕ್ಕಪಕ್ಕದವರನ್ನು ದಿಗ್ಭ್ರಮೆಗೊಳಿಸಿದೆ. ಪ್ರಶಾಂತ್‌ನ ತಂದೆ ಚಿಕ್ಕಣ್ಣ ಮಾತನಾಡಿ, ನಾನು ಇಸ್ತ್ರಿ ಅಂಗಡಿ ತೆರೆಯಲು ಬೆಳಗ್ಗೆ ಹೊರಹೋಗಿದ್ದೆ. ನಾನು ಮನೆಯಲ್ಲಿದ್ದಿದ್ದರೆ ಬಹುಶಃ ನನ್ನನ್ನೂ ಮುಗಿಸುತ್ತಿದ್ದನೇನೋ. ಅವನಿಗೆ ಜ್ಞಾನ ಸರಿಯಾಗಿಯೇ ಇತ್ತು, ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಣ್ಣಪುಟ್ಟ ಜಗಳಗಳು ನಡೆಯುತ್ತಿದ್ದುವು. ಆದರೆ ಹೀಗೆ ಮೂವರನ್ನು ಹತ್ಯೆ ಮಾಡಿದ್ದಾನೆ ಎಂದು ಭಾವಿಸಿರಲಿಲ್ಲ ಎಂದರು.

ಪೊಲೀಸ್ ತನಿಖೆ

ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್., ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಶಾಂತ್ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಆರೋಪಿಯ ಮಾನಸಿಕ ಸ್ಥಿತಿಗತಿ ಕುರಿತು ತನಿಖೆ ನಡೆಯುತ್ತಿದೆ. ಸದ್ಯ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ದಾರುಣ ಕೃತ್ಯಕ್ಕೆ ನಿಜವಾದ ಪ್ರೇರಣೆ ಏನು ಎಂಬುದು ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೌಟುಂಬಿಕ ಸಂಬಂಧಗಳ ನಡುವೆ ನಡೆಯುತ್ತಿರುವ ಇಂತಹ ಭೀಕರ ಕೃತ್ಯಗಳು ಕಳವಳಕಾರಿ ವಿಷಯಗಳಾಗಿವೆ. ಕೇವಲ ಎರಡು ವಾರಗಳ ಹಿಂದೆ, ಸಿಗೇಹಳ್ಳಿಯ ಸಾಯಿಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ತಂದೆ-ತಾಯಿ ಹಾಗೂ ಸಹೋದರಿಯ ಹತ್ಯೆಯ ಪ್ರಕರಣ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಇದರ ಬೆನ್ನಲ್ಲೇ ಇದೀಗ ಮತ್ತೆ ತ್ರಿವಳಿ ಕೊಲೆಯಾಗಿದೆ.

Read More
Next Story