
ಕಲಬುರಗಿಯಲ್ಲಿ ಶಂಕಿತ ಉಗ್ರನ ಬಂಧನ: ಸೋಶಿಯಲ್ ಮೀಡಿಯಾದ ಮೂಲಕ ಪಾಕ್ ಜೊತೆ ನಂಟು
ಬಂಧಿತ ಸಮೀರ್ ಹಲವಾರು ಅನುಮಾನಾಸ್ಪದ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಫಾಲೋ ಮಾಡುತ್ತಿದ್ದದ್ದು ಪೊಲೀಸರ ಗಮನಕ್ಕೆ ಬಂದಿದೆ. ಅಲ್ಲದೇ ಈತ ಪಾಕಿಸ್ತಾನದ ಜೊತೆಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಕಲಬುರಗಿಯಲ್ಲಿ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಸದರಪುರ ಪ್ರದೇಶದ ನಿವಾಸಿ ಮೊಹಮ್ಮದ್ ಸಮೀರ್ (23) ಎಂದು ಗುರುತಿಸಲಾಗಿದೆ. ಈತನನ್ನು ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಹಾಗೂ ಮೂಲಭೂತವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಖಾತೆಗಳನ್ನು ಫಾಲೋ ಮಾಡಿ, ಅವುಗಳನ್ನು ಉತ್ತೇಜಿಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.
ಕಲಬುರಗಿ ನಗರದ ಹುಮನಾಬಾದ್ ರಸ್ತೆಯ ಮಾಲಗತ್ತಿ ಗ್ರಾಮದ ಹೊರವಲಯದಲ್ಲಿ ವಾಸವಿದ್ದ ಸಮೀರ್, ಕಳೆದ ಎಂಟು ತಿಂಗಳಿನಿಂದ ಅಲ್ಲಿರುವ ಫೇರ್ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಎಂಬ ಮಾಂಸ ರಫ್ತು ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣ ಚಟುವಟಿಕೆ ಆಧರಿಸಿ ಬಂಧನ
ಪೊಲೀಸರ ತಾಂತ್ರಿಕ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆ, ಮಾಹಿತಿ ಹಂಚಿಕೆ ಹಾಗೂ ಮಾಹಿತಿ ಪೋರ್ಟಲ್‌ಗಳಿಂದ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ಬುಧವಾರ ಸಂಜೆ ದಾಳಿ ನಡೆಸಿ ಸಮೀರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮೀರ್ ಹಲವಾರು ಅನುಮಾನಾಸ್ಪದ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಫಾಲೋ ಮಾಡುತ್ತಿದ್ದದ್ದು ಪೊಲೀಸರ ಗಮನಕ್ಕೆ ಬಂದಿದೆ. ಈ ಖಾತೆಗಳು ದೇಶ ವಿರೋಧಿ ಹಾಗೂ ಮೂಲಭೂತವಾದಿ ವಿಷಯಗಳಿಗೆ ಸಂಬಂಧಿಸಿದ್ದವು ಎಂದು ಪೊಲೀಸರು ಹೇಳಿದ್ದಾರೆ.
ಪಾಕ್ ಜೊತೆಗೆ ನಂಟು
ಕೆಲವು ಅನುಮಾನಾಸ್ಪದ ಖಾತೆಗಳನ್ನು ನಿರ್ವಹಿಸುತ್ತಿದ್ದವರೊಂದಿಗೆ ಸಮೀರ್ ಸಂಪರ್ಕದಲ್ಲಿದ್ದ ಎಂಬ ಆರೋಪವೂ ಇದೆ. ಈ ಖಾತೆಗಳನ್ನು ನಿರ್ವಹಿಸುವವರು ಪಾಕಿಸ್ತಾನಿ ಪ್ರಜೆಗಳಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ದೇಶ ವಿರೋಧಿ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದ ಖಾತೆಗಳನ್ನು ಫಾಲೋ ಮಾಡುವುದರ ಜತೆಗೆ ಅವುಗಳ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಮೀರ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಮೊಬೈಲ್‌ಗಳು ವಶಕ್ಕೆ
ಬಂಧಿತ ಸಮೀರ್‌ನಿಂದ ಒಂದು ಸ್ಮಾರ್ಟ್‌ಫೋನ್ ಹಾಗೂ ಒಂದು ಕೀಪ್ಯಾಡ್ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಎರಡೂ ಮೊಬೈಲ್‌ಗಳಲ್ಲಿರುವ ಡಿಜಿಟಲ್ ಮಾಹಿತಿಯನ್ನು ವಿಧಿವಿಜ್ಞಾನ ಹಾಗೂ ತಾಂತ್ರಿಕ ತಜ್ಞರು ಪರಿಶೀಲಿಸುತ್ತಿದ್ದಾರೆ. ಮೊಬೈಲ್‌ಗಳ ಪರಿಶೀಲನೆಯ ಬಳಿಕ ಸಮೀರ್ ಯಾರೊಂದಿಗೆ ಸಂಪರ್ಕದಲ್ಲಿದ್ದ, ಸಾಮಾಜಿಕ ಜಾಲತಾಣಗಳ ಮೂಲಕ ಬೇರೆ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
NIA ಅಧಿಕಾರಿಗಳಿಂದಲೂ ವಿಚಾರಣೆ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸ್ಥಳೀಯ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಸಮೀರ್‌ನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವ ಹಿನ್ನೆಲೆಯಲ್ಲಿ, ಲಭ್ಯವಾದ ಮಾಹಿತಿಯನ್ನು ಸಂಬಂಧಪಟ್ಟ ರಾಜ್ಯ ಹಾಗೂ ಅಂತಾರಾಜ್ಯ ತನಿಖಾ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕಲಬುರಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
BNS ಅಡಿಯಲ್ಲಿ ಪ್ರಕರಣ ದಾಖಲು
ಸಮೀರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 113(3) ಹಾಗೂ ಸೆಕ್ಷನ್ 197 ಅಡಿಯಲ್ಲಿ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಕ್ಷನ್ 113(3) ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಆರೋಪಗಳಿಗೆ ಅನ್ವಯವಾಗುತ್ತದೆ. ಸೆಕ್ಷನ್ 197 ರಾಷ್ಟ್ರೀಯ ಏಕತೆಗೆ ಧಕ್ಕೆ ತರುವಂತಹ ಆರೋಪಗಳು ಮತ್ತು ಹೇಳಿಕೆಗಳಿಗೆ ಸಂಬಂಧಿಸಿದೆ.
ಮತ್ತೊಬ್ಬನ ವಿಚಾರಣೆ, ಬಳಿಕ ಬಿಡುಗಡೆ
ಸಮೀರ್‌ನೊಂದಿಗೆ ಮತ್ತೊಬ್ಬ ವ್ಯಕ್ತಿಯನ್ನೂ ಪೊಲೀಸರು ಆರಂಭದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ಆತನ ವಿರುದ್ಧ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬರದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಸಮೀರ್‌ನ ಸಾಮಾಜಿಕ ಜಾಲತಾಣ ಚಟುವಟಿಕೆಗಳು, ಡಿಜಿಟಲ್ ದಾಖಲೆಗಳು ಹಾಗೂ ಸಂಪರ್ಕಗಳ ಕುರಿತು ತನಿಖೆ ಮುಂದುವರಿದಿದೆ. ತನಿಖೆಯ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.

