ಕ್ರೂಸರ್-ಲಾರಿ ಮುಖಾಮುಖಿ ಡಿಕ್ಕಿ; ಒಂದೇ ಕುಟುಂಬದ ಐವರ ದಾರುಣ ಸಾವು
x

ಕ್ರೂಸರ್-ಲಾರಿ ಮುಖಾಮುಖಿ ಡಿಕ್ಕಿ; ಒಂದೇ ಕುಟುಂಬದ ಐವರ ದಾರುಣ ಸಾವು

ನುಜ್ಜುಗುಜ್ಜಾಗಿದ್ದ ವಾಹನವನ್ನು ಜೆಸಿಬಿ ಹಾಗೂ ಸ್ಥಳೀಯರ ನೆರವಿನಿಂದ ಪಕ್ಕಕ್ಕೆ ಸರಿಸಿ, ಒಳಗಿದ್ದ ಮೃತದೇಹಗಳನ್ನು ಹರಸಾಹಸಪಟ್ಟು ಹೊರತೆಗೆಯಲಾಯಿತು


ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾಗಿದ್ದು, ಕೆಲಸದ ನಿಮಿತ್ತ ಯಾದಗಿರಿಗೆ ತೆರಳಿ ವಾಪಸ್ ಆಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಮೃತರನ್ನು ಚಾಲಕ ತೋಲುಸಾಬ್ ಕ್ಯಾಶ್ವಾರ್, ಹುಸೇನ್ ಷಾ (48), ಮೈಬೂಬ್ ಅಲಿ (45), ರಸೂಲ್ ಬೀ (42), ಫಾತೀಮಾ ಅಲಿ (38) ಎಂದು ಗುರುತಿಸಲಾಗಿದೆ.

ದುರಂತ ಸಂಭವಿಸಿದ್ದು ಹೇಗೆ?

ಇಂಗಳಗಿ ಗ್ರಾಮದ ಒಂದೇ ಕುಟುಂಬದ ಸದಸ್ಯರು ಯಾದಗಿರಿಯಿಂದ ಇಂಗಳಗಿಗೆ ವಾಪಸ್‌ ಬರುತ್ತಿದ್ದಾಗ ಶುಕ್ರವಾರ ಮಧ್ಯರಾತ್ರಿ ಸುಮಾರು 11.40ರ ವೇಳೆಗೆ ಎದುರಿನಿಂದ ಅತಿ ವೇಗವಾಗಿ ಬಂದ ತಮಿಳುನಾಡು ನೋಂದಣಿಯ ಲಾರಿಯು ಕ್ರೂಸರ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಸಂಪೂರ್ಣ ನುಜ್ಜುಗುಜ್ಜಾದ ಕ್ರೂಸರ್

ಡಿಕ್ಕಿಯ ರಭಸಕ್ಕೆ ಕ್ರೂಸರ್ ವಾಹನದ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಲಾರಿಯ ಅಡಿಗೆ ಸಿಲುಕಿಕೊಂಡಿತ್ತು. ವಾಹನದಲ್ಲಿದ್ದ ಐದೂ ಜನರಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ಶಬ್ದ ಕೇಳಿ ಧಾವಿಸಿದ ಸ್ಥಳೀಯರು ವಾಹನದೊಳಗೆ ಮೃತದೇಹಗಳು ಸಿಲುಕಿಕೊಂಡಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ

ಮಧ್ಯರಾತ್ರಿ ಹೆದ್ದಾರಿಯಲ್ಲಿ ನಡೆದ ಈ ಭೀಕರ ದುರಂತದ ಮಾಹಿತಿ ಸಿಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು, ವಾಡಿ ಮತ್ತು ಚಿತ್ತಾಪುರ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದರು. ನುಜ್ಜುಗುಜ್ಜಾಗಿದ್ದ ವಾಹನವನ್ನು ಜೆಸಿಬಿ ಹಾಗೂ ಸ್ಥಳೀಯರ ನೆರವಿನಿಂದ ಪಕ್ಕಕ್ಕೆ ಸರಿಸಿ, ಒಳಗಿದ್ದ ಮೃತದೇಹಗಳನ್ನು ಹರಸಾಹಸಪಟ್ಟು ಹೊರತೆಗೆಯಲಾಯಿತು. ತದ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಾಡಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.

ಗ್ರಾಮದಲ್ಲಿ ಆಕ್ರಂದನ

ಒಂದೇ ಕುಟುಂಬದ ಐವರು ಜತೆಯಾಗಿಯೇ ರಸ್ತೆ ಅಪಘಾತಕ್ಕೆ ಬಲಿಯಾದ ಸುದ್ದಿ ತಿಳಿಯುತ್ತಿದ್ದಂತೆ ಇಂಗಳಗಿ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ. ಮೃತರ ಮನೆ ಹಾಗೂ ಗ್ರಾಮದಲ್ಲಿ ಸದ್ಯ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಅಪಘಾತದ ಬಳಿಕ ಲಾರಿ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದು, ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಲಾರಿ ಚಾಲಕನ ಪತ್ತೆಗಾಗಿ ಜಾಲ ಬೀಸಿದ್ದಾರೆ ಮತ್ತು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

Read More
Next Story