
ಸಚಿವ ಪ್ರಿಯಾಂಕ್ ಖರ್ಗೆ
ಬಾಲಕಿ ವೆನ್ನೆಲಾ ಕೊಲೆ ಪ್ರಕರಣ; ಕರ್ತವ್ಯ ಲೋಪವೆಸಗಿದ ಮೂವರು ಪೊಲೀಸರ ಅಮಾನತು
ಕಾಡುಗೋಡಿ ಮಗುವಿನ ಸಾವು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿ ಕರ್ತವ್ಯ ಲೋಪ ಎಸಗಿದ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಗುವಿನ ಸಾವಿನ ಪ್ರಕರಣದಲ್ಲಿ ಗಂಭೀರ ಕರ್ತವ್ಯ ಲೋಪ ಎಸಗಿದ ಮತ್ತು ಕಾನೂನು ನಿಯಮಗಳನ್ನು ಉಲ್ಲಂಘಿಸಿದ ಮೂವರು ಪೊಲೀಸ್ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಅಧಿಕೃತ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಇಲಾಖೆಯ ಉದಾಸೀನತೆ ಹಾಗೂ ಕಾನೂನು ಬಾಹಿರ ನಡೆಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಳೆದ ಏಪ್ರಿಲ್ 4 ರಂದೇ ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ಮಗುವಿನದ್ದು ಸಾವು ಎಂದು ದೃಢಪಟ್ಟಿತ್ತು. ವರದಿ ಬಂದ ತಕ್ಷಣವೇ ಅಧಿಕಾರಿಗಳು ಅದನ್ನು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕಾಗಿತ್ತು. ಆದರೆ, ಕಾನೂನುಬಾಹಿರವಾಗಿ ಈ ಪ್ರಕರಣವನ್ನು ಯುಡಿಆರ್ (ಅಸ್ವಾಭಾವಿಕ ಮರಣ ವರದಿ) ವ್ಯಾಪ್ತಿಯಲ್ಲೇ ಇಟ್ಟುಕೊಂಡು, ತಮ್ಮ ಹಂತದಲ್ಲೇ ವಿಳಂಬ ಧೋರಣೆ ಅನುಸರಿಸಿದ್ದಾರೆ. ಇದು ಅತ್ಯಂತ ಗಂಭೀರ ಕರ್ತವ್ಯ ಲೋಪವಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಕಾಡುಗೋಡಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹಾಗೂ ರೈಟರ್ ಸೇರಿದಂತೆ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಮೋಹನ್ ಮತ್ತು ಪ್ರಿಯಾಂಕ ಎಂಬುವವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ತನಿಖೆಯ ಪೂರ್ಣ ವರದಿ ಬಂದ ನಂತರ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.

