Coal truck-passenger vehicle collide head-on in Ramgarh: Seven dead
x

ಅಪಘಾತದ ರಭಸಕ್ಕೆ ನಜ್ಜುಗುಜ್ಜಾಗಿರುವ ವಾಹನ

ರಾಮಗಢದಲ್ಲಿ ಕಲ್ಲಿದ್ದಲು ಟ್ರಕ್-ಪ್ರಯಾಣಿಕರ ವಾಹನ ಮುಖಾಮುಖಿ ಡಿಕ್ಕಿ: ಏಳು ಮಂದಿ ಸಾವು

ಡಿಕ್ಕಿಯ ರಭಸಕ್ಕೆ ಪ್ರಯಾಣಿಕರಿದ್ದ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮೃತಪಟ್ಟವರೆಲ್ಲರೂ ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಸಂಗೀತ ನುಡಿಸುವ ಬ್ಯಾಂಡ್ ಸೆಟ್‌ ತಂಡದ ಸದಸ್ಯರು ಎಂದು ಗುರುತಿಸಲಾಗಿದೆ.


Click the Play button to hear this message in audio format

ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಲ್ಲಿದ್ದಲು ತುಂಬಿದ್ದ ಲಾರಿಯೊಂದು ಮದುವೆ ಬ್ಯಾಂಡ್ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಕನಿಷ್ಠ ಏಳು ಜನರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಪ್ರಯಾಣಿಕರಿದ್ದ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮೃತಪಟ್ಟವರೆಲ್ಲರೂ ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಸಂಗೀತ ನುಡಿಸುವ ಬ್ಯಾಂಡ್ ತಂಡದ ಸದಸ್ಯರು ಎಂದು ಗುರುತಿಸಲಾಗಿದೆ.

ಓವರ್‌ಟೇಕ್ ಮಾಡಲು ಹೋಗಿ ತಂದಿಟ್ಟ ಆಪತ್ತು!

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಹಜಾರಿಬಾಗ್ ಜಿಲ್ಲೆಯ ಬಾಲ್ಸಾಗ್ರ ಗ್ರಾಮದಲ್ಲಿ ನಡೆದಿದ್ದ ಮದುವೆ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಬ್ಯಾಂಡ್ ಸದಸ್ಯರು ತಡರಾತ್ರಿ ತಮ್ಮ ವಾಹನದಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ರಾತ್ರಿ ಸುಮಾರು 12 ಗಂಟೆಯ ವೇಳೆಗೆ ರಾಜ್ರಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-23 ಬಳಿ ಬರುತ್ತಿದ್ದಂತೆ, ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಹೋದ ಕಲ್ಲಿದ್ದಲು ಲಾರಿ ಇವರ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ.

ಅಪಘಾತದ ಭೀಕರ ಸದ್ದು ಕೇಳಿ ಹೆದ್ದಾರಿ ಪಕ್ಕದಲ್ಲಿದ್ದ ನಿವಾಸಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸಾರ್ವಜನಿಕರ ಸಹಾಯದಿಂದ ತಕ್ಷಣವೇ ಎಲ್ಲರನ್ನೂ ರಾಮಗಢದ ಸದರ್ ಆಸ್ಪತ್ರೆಗೆ ಸಾಗಿಸಿದ್ದಾರೆ. "ಆಸ್ಪತ್ರೆಗೆ ಕರೆತರಲಾದ ಎಂಟು ಜನರಲ್ಲಿ ಏಳು ಮಂದಿ ಈಗಾಗಲೇ ಮೃತಪಟ್ಟಿದ್ದರು. ತಲೆಗೆ ಗಂಭೀರ ಗಾಯವಾಗಿದ್ದ ಮತ್ತೊಬ್ಬ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS) ಆಸ್ಪತ್ರೆಗೆ ರವಾನಿಸಲಾಗಿದೆ." ಎಂದು ಸಿವಿಲ್‌ ಸರ್ಜನ್‌ ಡಾ.ಅನಿಲ್‌ ಕುಮಾರ್‌ ತಿಳಿಸಿದ್ದಾರೆ.

ಆಕ್ರೋಶ, ಹೆದ್ದಾರಿ ಬಂದ್‌

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸ್ಥಳೀಯರು ಮತ್ತು ಮೃತರ ಕುಟುಂಬಸ್ಥರು ರಾಷ್ಟ್ರೀಯ ಹೆದ್ದಾರಿ-23 ಅನ್ನು ಸಂಪೂರ್ಣವಾಗಿ ತಡೆದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡು, ಪ್ರಯಾಣಿಕರು ತೀವ್ರ ಪರದಾಡುವಂತಾಯಿತು. "ಈ ಲಾರಿ-ಬಾರ್ಲಾಂಗ್ ಮಾರ್ಗವು ಅತ್ಯಂತ ಅಪಾಯಕಾರಿಯಾಗಿದ್ದು, ಕಳೆದ ನಾಲ್ಕೇ ದಿನಗಳಲ್ಲಿ ಸಂಭವಿಸುತ್ತಿರುವ ಎರಡನೇ ದೊಡ್ಡ ಅಪಘಾತ ಇದಾಗಿದೆ. ಆದರೂ ಅಧಿಕಾರಿಗಳು ಇಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ" ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು.

ಪ್ರಕರಣ ದಾಖಲು, ತನಿಖೆ ಮುಂದುವರಿಕೆ

ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ, ಪ್ರತಿಭಟನಾಕಾರರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಈ ಮಾರ್ಗದಲ್ಲಿ ವೇಗ ನಿಯಂತ್ರಕಗಳು ಹಾಗೂ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದ ಬಳಿಕ ಸ್ಥಳೀಯರು ಪ್ರತಿಭಟನೆ ಹಿಂಪಡೆದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Read More
Next Story