
ಎಫ್‌ಎಸ್‌ಎಲ್ ಹಾಗೂ ಪೊಲೀಸ್ ಅಧಿಕಾರಿಗಳು ಕೆರೆಯಲ್ಲಿ ಪರಿಶೀಲನೆ ನಡೆಸಿದರು.
ಬೆಂಗಳೂರು ಹೊರವಲಯದ ಕೆರೆಯಲ್ಲಿ ತಲೆಬುರುಡೆ, ಅಸ್ಥಿಪಂಜರ ಪತ್ತೆ: ಮಹಿಳೆಯ ಕೊಲೆ ಶಂಕೆ!
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸ್ಥಳಕ್ಕೆ ಸೋಕೋ, ಎಫ್‌ಎಸ್‌ಎಲ್ ತಜ್ಞರ ತಂಡ ಭೇಟಿ ನೀಡಿದೆ. ಬುರುಡೆ ಹಾಗೂ ಮೂಳೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ತಜ್ಞರು, ಹೆಚ್ಚಿನ ಪರೀಕ್ಷೆಗಾಗಿ ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮುಗಳೂರು ಕೆರೆಯ ಅಂಗಳದಲ್ಲಿ ಮಾನವನ ತಲೆಬುರುಡೆ ಹಾಗೂ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿದೆ. ತೀವ್ರ ಬೇಸಿಗೆಯ ಹಿನ್ನೆಲೆಯಲ್ಲಿ ಕೆರೆಯ ನೀರು ಸಂಪೂರ್ಣ ಬತ್ತಿ ಹೋಗಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಶುಕ್ರವಾರ ಮುಗಳೂರು ಕೆರೆಯ ಒಣಗಿದ ಅಂಗಳದಲ್ಲಿ ಸ್ಥಳೀಯ ಕುರಿಗಾಹಿಗಳು ಎಂದಿನಂತೆ ಕುರಿ ಮೇಯಿಸುತ್ತಿದ್ದರು. ಈ ವೇಳೆ ಅಲ್ಲಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೂಳೆಗಳು ಹಾಗೂ ಮಾನವ ತಲೆಬುರುಡೆ ಕಂಡುಬಂದಿದೆ. ಇದನ್ನು ನೋಡಿದ ಕುರಿಗಾಹಿಗಳು ತಕ್ಷಣವೇ ಸರ್ಜಾಪುರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳನ್ನೊಳಗೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮಹಿಳೆಯ ಕೊಲೆ ಮಾಡಿ ಸಾಕ್ಷ್ಯ ನಾಶ?
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ ಮಾಧ್ಯಮಗಳೊಂದಿಗೆ ಮಾತನಾಡಿ, "ತಲೆಬುರುಡೆ ಮತ್ತು ಅಸ್ಥಿಪಂಜರದ ಮೂಳೆಗಳು ಚದುರಿದ ಸ್ಥಿತಿಯಲ್ಲಿ ಸಿಕ್ಕಿವೆ. ಮೃತದೇಹ ಕೊಳೆತ ಬಳಿಕ ನಾಯಿಗಳು ಅಥವಾ ಇತರೆ ಪ್ರಾಣಿಗಳು ಮೂಳೆಗಳನ್ನು ಎಳೆದಾಡಿರುವ ಸಾಧ್ಯತೆಯಿದೆ," ಎಂದು ತಿಳಿಸಿದ್ದಾರೆ.
ಅತಿ ಮುಖ್ಯವಾಗಿ, ಮೂಳೆಗಳು ಸಿಕ್ಕ ಜಾಗದಲ್ಲಿ ಮಹಿಳೆಯ ಸೀರೆ ಹಾಗೂ ಕೆಲವು ಬಟ್ಟೆಗಳು ಪತ್ತೆಯಾಗಿವೆ. ಹೀಗಾಗಿ ಯಾರೋ ದುಷ್ಕರ್ಮಿಗಳು ಮಹಿಳೆಯನ್ನು ಬೇರೆಲ್ಲೋ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ತಂದು ಕೆರೆಗೆ ಎಸೆದಿರಬಹುದು ಎಂಬ ಪ್ರಬಲ ಶಂಕೆ ವ್ಯಕ್ತವಾಗಿದೆ. ಆದರೆ, ಇದು ಪುರುಷನದ್ದೇ ಅಥವಾ ಮಹಿಳೆಯದ್ದೇ ಎಂಬುದು ಅಧಿಕೃತವಾಗಿ ತನಿಖೆಯಿಂದಷ್ಟೇ ಹೊರಬರಬೇಕಿದೆ ಎಂದು ಮಾಹಿತಿ ನೀಡಿದರು.
ಎಫ್‌ಎಸ್‌ಎಲ್ ತಜ್ಞರಿಂದ ಪರಿಶೀಲನೆ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸ್ಥಳಕ್ಕೆ ಸೋಕೋ (SOCO) ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ತಂಡ ಭೇಟಿ ನೀಡಿದೆ. ಬುರುಡೆ ಹಾಗೂ ಮೂಳೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ತಜ್ಞರು, ಹೆಚ್ಚಿನ ಪರೀಕ್ಷೆಗಾಗಿ ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕವಷ್ಟೇ ಮೃತರ ಲಿಂಗ, ವಯಸ್ಸು ಮತ್ತು ಸಾವು ಸಂಭವಿಸಿದ ನಿಖರ ಸಮಯದ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಸುತ್ತಮುತ್ತಲಿನ ಭಾಗಗಳಲ್ಲಿ ನಾಪತ್ತೆಯಾಗಿರುವವರ ವಿವರಗಳನ್ನು ಆಧರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

