ಮದುವೆಗೆ ಪೀಡಿಸುತ್ತಿದ್ದ ಪ್ರೇಯಸಿಯನ್ನೇ ಕತ್ತು ಹಿಸುಕಿ ಕೊಂದ ಆರೋಪಿ ಅರೆಸ್ಟ್
x

ಸೈಬರ್ ವಂಚನೆಗೆ ಸಂಬಂಧಿಸಿದಂತೆ 14,885 ಪ್ರಕರಣಗಳು ದಾಖಲಾಗಿವೆ

ಮದುವೆಗೆ ಪೀಡಿಸುತ್ತಿದ್ದ ಪ್ರೇಯಸಿಯನ್ನೇ ಕತ್ತು ಹಿಸುಕಿ ಕೊಂದ ಆರೋಪಿ ಅರೆಸ್ಟ್

ಹೆಬ್ಬಗೋಡಿ ಪೊಲೀಸರು, ಆರಂಭದಲ್ಲಿ ಇದನ್ನು ಅಸಹಜ ಸಾವು (ಯುಡಿಆರ್) ಎಂದು ಪರಿಗಣಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ವರದಿ ಕೈಸೇರಿದಾಗ ವೈದ್ಯರ ಅಭಿಪ್ರಾಯದಂತೆ ಮಹಿಳೆಯನ್ನು ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಸತ್ಯ ಬಯಲಿಗೆ ಬಂದಿತ್ತು.


ಮದುವೆಯಾಗುವಂತೆ ಪೀಡಿಸುತ್ತಿದ್ದ ಕಾರಣಕ್ಕೆ ಪ್ರೇಯಸಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ಕೆರೆಗೆ ಎಸೆದಿದ್ದ ಅಸ್ಸಾಂ ಮೂಲದ ಆರೋಪಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಮೇ 9ರಂದು ನಡೆದಿದ್ದ ಅಸಹಜ ಸಾವು ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು, ಇದೀಗ ಇದೊಂದು ವ್ಯವಸ್ಥಿತ ಕೊಲೆ ಎಂಬುದನ್ನು ಬಯಲಿಗೆಳೆದು ಆರೋಪಿಯನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಮೇ 9ರಂದು ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಿರುಪಾಳ್ಯ ಕೆರೆಯಲ್ಲಿ ಸುಮಾರು 47 ವರ್ಷದ ಮಹಿಳೆಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಮಹಿಳೆಯು ಹೊರ ರಾಜ್ಯದವಳಾಗಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಹೆಬ್ಬಗೋಡಿ ಪೊಲೀಸರು, ಆರಂಭದಲ್ಲಿ ಇದನ್ನು ಅಸಹಜ ಸಾವು (ಯುಡಿಆರ್) ಎಂದು ಪರಿಗಣಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ವರದಿ ಕೈಸೇರಿದಾಗ ವೈದ್ಯರ ಅಭಿಪ್ರಾಯದಂತೆ ಮಹಿಳೆಯನ್ನು ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಸತ್ಯ ಬಯಲಿಗೆ ಬಂದಿತ್ತು. ತಕ್ಷಣ ಎಚ್ಚೆತ್ತ ಪೊಲೀಸರು, ಇದೇ ಪ್ರಕರಣವನ್ನು ಸುಮೊಟೊ (ಸ್ವಯಂ ಪ್ರೇರಿತ) ಕೊಲೆ ಪ್ರಕರಣವಾಗಿ ಬದಲಾಯಿಸಿಕೊಂಡು ತನಿಖೆ ಚುರುಕುಗೊಳಿಸಿದರು.

ಅಸ್ಸಾಂ ಮೂಲದ ಆರೋಪಿಯ ಬಂಧನ

ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ಸ್ಥಳದಲ್ಲಿ ಕೆಲ ತಾಂತ್ರಿಕ ಹಾಗೂ ಸಾಂದರ್ಭಿಕ ಸಾಕ್ಷ್ಯಗಳು ಲಭ್ಯವಾದವು. ಈ ಸಾಕ್ಷ್ಯಗಳ ಆಧಾರದ ಮೇಲೆ, ಮೃತ ಮಹಿಳೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅಸ್ಸಾಂ ಮೂಲದ ವ್ಯಕ್ತಿಯೊಬ್ಬನ ಮೇಲೆ ಅನುಮಾನ ವ್ಯಕ್ತವಾಗಿತ್ತು. ಕಾರ್ಯಪ್ರವೃತ್ತರಾದ ಪೊಲೀಸರು, ಮೇ 14ರಂದು ಆತನನ್ನು ತಿರುಪಾಳ್ಯದಲ್ಲಿರುವ ಆತನ ವಾಸದ ಮನೆಯಲ್ಲೇ ವಶಕ್ಕೆ ಪಡೆದುಕೊಂಡರು.

ವಶಕ್ಕೆ ಪಡೆದ ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೊಲೆಯ ಹಿಂದಿನ ಅಸಲಿ ಕಾರಣ ಬಾಯ್ಬಿಟ್ಟಿದ್ದಾನೆ. ಮೃತ ಮಹಿಳೆ ಹಾಗೂ ಆರೋಪಿಯ ನಡುವೆ ಅಕ್ರಮ ಸಂಬಂಧವಿತ್ತು. ಆದರೆ, ಆಕೆಯು ತನ್ನನ್ನು ಮದುವೆಯಾಗುವಂತೆ ಆರೋಪಿಗೆ ಸತತವಾಗಿ ಒತ್ತಾಯ ಮಾಡುತ್ತಿದ್ದಳು. ಇದೇ ವಿಚಾರವಾಗಿ ಆತನಿಗೆ ಕಿರಿಕಿರಿ ಉಂಟಾಗಿತ್ತು. ಕೊನೆಗೆ ಕೋಪಗೊಂಡ ಆರೋಪಿಯು ಆಕೆಯ ಕುತ್ತಿಗೆ ಹಿಸುಕಿ, ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪಾಪಕೃತ್ಯ ಯಾರಿಗೂ ತಿಳಿಯದಿರಲಿ ಎಂದು ಮೃತದೇಹವನ್ನು ಕೆರೆಯ ಮಧ್ಯದಲ್ಲಿ ಬೆಳೆದಿದ್ದ ಹಸಿರು ಹುಲ್ಲಿನೊಳಗೆ ಎಸೆದು ಪರಾರಿಯಾಗಿದ್ದ ಎಂಬುದು ತನಿಖೆಯಿಂದ ದೃಢಪಟ್ಟಿದೆ.

ನ್ಯಾಯಾಂಗ ಬಂಧನಕ್ಕೆ ಆರೋಪಿ

ಬಂಧಿತ ಆರೋಪಿಯನ್ನು ಮೇ 15ರಂದು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಶ್ರೀ ನಾರಾಯಣ್ ಎಂ. (ಐಪಿಎಸ್) ಅವರ ಮಾರ್ಗದರ್ಶನ ಹಾಗೂ ಎಸಿಪಿ ಶ್ರೀ ಸತೀಶ್ ಕೆ.ಎಂ. ಅವರ ನೇತೃತ್ವದಲ್ಲಿ, ಹೆಬ್ಬಗೋಡಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಸೋಮಶೇಖರ್ ಜಿ. ಮತ್ತು ಇತರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.

Read More
Next Story