ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಮದ್ಯಮತ್ತ ಲಾರಿ ಚಾಲಕನ ಅತಿರೇಕಕ್ಕೆ ಪಿಯು ವಿದ್ಯಾರ್ಥಿನಿ ಬಲಿ
x

ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಹಾಸನದಲ್ಲಿ ಭೀಕರ ರಸ್ತೆ ಅಪಘಾತ: ಮದ್ಯಮತ್ತ ಲಾರಿ ಚಾಲಕನ ಅತಿರೇಕಕ್ಕೆ ಪಿಯು ವಿದ್ಯಾರ್ಥಿನಿ ಬಲಿ

ಘಟನೆಯಲ್ಲಿ ಆಕೆಯ ಜೊತೆಗಿದ್ದ ಮತ್ತೊಬ್ಬಳು ವಿದ್ಯಾರ್ಥಿನಿ ಚಿನ್ಮಯಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


Click the Play button to hear this message in audio format

ಹಾಸನ ನಗರದ ಹೃದಯಭಾಗದಲ್ಲಿರುವ ವಿಶ್ವಕರ್ಮ ವೃತ್ತದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ವಿದ್ಯಾರ್ಥಿನಿಯೊಬ್ಬಳ ಪ್ರಾಣ ಕಸಿದಿದೆ. ಅತಿ ವೇಗವಾಗಿ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 18 ವರ್ಷದ ಲಿಖಿತಾ ಎಂಬ ವಿದ್ಯಾರ್ಥಿನಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾಳೆ

ಘಟನೆಯಲ್ಲಿ ಆಕೆಯ ಜೊತೆಗಿದ್ದ ಮತ್ತೋರ್ವ ವಿದ್ಯಾರ್ಥಿನಿ ಚಿನ್ಮಯಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ನಗರದ ಜನನಿಬಿಡ ಪ್ರದೇಶದಲ್ಲಿ ನಡೆದ ಈ ದುರಂತವು ಸ್ಥಳೀಯರಲ್ಲಿ ತೀವ್ರ ಆಘಾತ ಉಂಟು ಮಾಡಿದೆ.

ದುರಂತ ಸಂಭವಿಸಿದ್ದು ಹೇಗೆ?

ಕಾಲೇಜು ಮುಗಿಸಿ ಮನೆಗೆ ಹಿಂದಿರುಗಿದ್ದ ಲಿಖಿತಾ, ಆನಂತರ ತನ್ನ ಗೆಳತಿ ಚಿನ್ಮಯಿ ಜೊತೆಗೆ ಸ್ಕೂಟರ್‌ನಲ್ಲಿ ನಗರದ ಕಡೆಗೆ ತೆರಳಿದ್ದರು. ಇಬ್ಬರೂ ಬಸ್ ನಿಲ್ದಾಣದ ಮಾರ್ಗವಾಗಿ ಬಂದು ಡೈರಿ ಕಡೆಗೆ ತಮ್ಮ ವಾಹನವನ್ನು ತಿರುಗಿಸುತ್ತಿದ್ದ ವೇಳೆ ಈ ಭೀಕರ ಅವಘಡ ಸಂಭವಿಸಿದೆ. ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿಕೊಂಡು ಬಂದ ಚಾಲಕ, ಸ್ಕೂಟರ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನಿಂದ ಕೆಳಗೆ ಬಿದ್ದ ಲಿಖಿತಾ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಮೇಲ್ನೋಟಕ್ಕೆ ಲಾರಿ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದದ್ದೇ ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ

ವಿದ್ಯಾರ್ಥಿನಿಯ ಸಾವಿನಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸ್ ಹಾಗೂ ಸಂಚಾರ ಇಲಾಖೆಯ ಕಾರ್ಯವೈಖರಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಅತ್ಯಂತ ಜನನಿಬಿಡ ಪ್ರದೇಶದೊಳಗೆ ಹಗಲು ಹೊತ್ತಿನಲ್ಲಿ ಭಾರಿ ಪ್ರಮಾಣದ ಲಾರಿಗಳು ಪ್ರವೇಶಿಸಲು ಅಧಿಕಾರಿಗಳು ಹೇಗೆ ಅನುಮತಿ ನೀಡಿದರು ಎಂಬುದು ಸಾರ್ವಜನಿಕರ ಪ್ರಮುಖ ಪ್ರಶ್ನೆ. ಘಟನಾ ಸ್ಥಳದಲ್ಲಿ ಸರಿಯಾದ ಸಂಚಾರ ಮಾರ್ಗದರ್ಶಕ ಫಲಕಗಳಾಗಲೀ ಅಥವಾ ಟ್ರಾಫಿಕ್ ಸಿಗ್ನಲ್‌ಗಳಾಗಲೀ ಇಲ್ಲದಿರುವುದೇ ಇಂತಹ ಅಪಘಾತಗಳಿಗೆ ಮೂಲ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಲಾರಿಯನ್ನು ಜಪ್ತಿ ಮಾಡಲಾಗಿದೆ.

Read More
Next Story