ಹೆಬ್ಬಾಳದಲ್ಲಿ ಜಿಮ್ ಟ್ರೈನರ್ ಅನುಮಾನಾಸ್ಪದ ಸಾವು; ನಾಲ್ವರ ವಿರುದ್ಧ ಕೊಲೆ ಕೇಸ್
x

ಬೆಂಗಳೂರು ಹೆಬ್ಬಾಳದಲ್ಲಿ ಜಿಮ್ ಟ್ರೈನರ್ ನಂದನ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸ್ನೇಹಿತರು ಹಲ್ಲೆ ನಡೆಸಿದ್ದಾರೆ,

ಹೆಬ್ಬಾಳದಲ್ಲಿ ಜಿಮ್ ಟ್ರೈನರ್ ಅನುಮಾನಾಸ್ಪದ ಸಾವು; ನಾಲ್ವರ ವಿರುದ್ಧ ಕೊಲೆ ಕೇಸ್

ಜಿಮ್‌ ವಾರ್ಷಿಕೋತ್ಸವ ಮುಗಿದ ಬಳಿಕ ಜಿಮ್‌ನ ಇತರೆ ಸಿಬ್ಬಂದಿ ಹಾಗೂ ಪರಿಚಿತರೊಂದಿಗೆ ಅವರು ಅಪಾರ್ಟ್ಮೆಂಟ್‌ಗೆ ತೆರಳಿದ್ದರು. ಅಲ್ಲಿ ಕೆಲವರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ನಂದನ್ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.


Click the Play button to hear this message in audio format

ಹೆಬ್ಬಾಳ ಕೆಂಪಾಪುರದಲ್ಲಿ ಜಿಮ್ ಟ್ರೈನರ್ ಒಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸ್ನೇಹಿತರೇ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೃತರನ್ನು 25 ವರ್ಷದ ನಂದನ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸರು ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶನಿವಾರ ಜಿಮ್‌ನ ಮೊದಲ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮಕ್ಕೆ ತೆರಳುವ ಮುನ್ನ ನಂದನ್, ತಡವಾದರೆ ಬೆಳಗ್ಗೆ ಮನೆಗೆ ಬರುವುದಾಗಿ ಕುಟುಂಬದವರಿಗೆ ತಿಳಿಸಿದ್ದರು ಎನ್ನಲಾಗಿದೆ. ವಾರ್ಷಿಕೋತ್ಸವ ಮುಗಿದ ಬಳಿಕ ಜಿಮ್‌ನ ಇತರೆ ಸಿಬ್ಬಂದಿ ಹಾಗೂ ಪರಿಚಿತರೊಂದಿಗೆ ಅವರು ಅಪಾರ್ಟ್ಮೆಂಟ್‌ಗೆ ತೆರಳಿದ್ದರು. ಅಲ್ಲಿ ಕೆಲವರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ನಂದನ್ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಹಲ್ಲೆಯ ಬಳಿಕ ನಂದನ್‌ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದೇಹದ ಮೇಲೆ ಗಾಯದ ಗುರುತು ಪತ್ತೆ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂದನ್ ಮೃತಪಟ್ಟಿದ್ದಾರೆ. ವಿಷಯ ತಿಳಿದು ಅವರ ತಾಯಿ ಮಂಜುಳಾ ಆಸ್ಪತ್ರೆಗೆ ತೆರಳಿದ್ದು, ನಂದನ್ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ ಎಂದು ತಿಳಿಸಿದ್ದಾರೆ. ಅಪಾರ್ಟ್ಮೆಂಟ್‌ನಲ್ಲಿ ನಡೆದ ಗಲಾಟೆಯ ಸಂದರ್ಭದಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ನಾಲ್ವರ ವಿರುದ್ಧ ಎಫ್‌ಐಆರ್

ಈ ಸಂಬಂಧ ನಂದನ್ ತಾಯಿ ಮಂಜುಳಾ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ನಂದನ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಲ್ಲೆಗೆ ಕಾರಣವೇನು ಮತ್ತು ಘಟನೆಯಲ್ಲಿ ನಿಖರವಾಗಿ ಏನಾಯಿತು ಎಂಬುದನ್ನು ಪೊಲೀಸರು ತನಿಖೆ ಮೂಲಕ ಪರಿಶೀಲಿಸುತ್ತಿದ್ದಾರೆ.

Read More
Next Story