ಜಿಬಿಎ ನೋಟಿಸ್‌ನಿಂದ ಬಯಲಾದ ಕೊಲೆ ರಹಸ್ಯ; ಪತಿ ಬಂಧನ
x

ಅನುಸೂಯ ಅವರ ಕುಟುಂಬ ಹಾಗೂ ಪರಿಚಯಸ್ಥರಿಂದ ಮಾಹಿತಿ ಪಡೆದ ಪೊಲೀಸರು ಪತಿ ಸಾಗರ್ ಚಂದ್ರ ರಾವತ್‌ನನ್ನು ವಿಚಾರಣೆಗೆ ಒಳಪಡಿಸಿದರು.

ಜಿಬಿಎ ನೋಟಿಸ್‌ನಿಂದ ಬಯಲಾದ ಕೊಲೆ ರಹಸ್ಯ; ಪತಿ ಬಂಧನ

ಆಗಸ್ಟ್ 11ರಂದು ಮನೆಯಲ್ಲಿ ನಡೆದ ಜಗಳದ ವೇಳೆ ಸಾಗರ್ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


Click the Play button to hear this message in audio format

ಜಿಬಿಎ ಖಾಲಿ ಜಾಗಗಳ ಮಾಲೀಕರಿಗೆ ಸ್ವಚ್ಛತೆ ಕಾಪಾಡುವಂತೆ ನೀಡಿದ್ದ ಸೂಚನೆ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದನ್ನು ಬಯಲಿಗೆಳೆದಿದೆ. ಬೆಂಗಳೂರಿನ ಸಂಪಿಗೆಹಳ್ಳಿ ವ್ಯಾಪ್ತಿಯ ಖಾಲಿ ನಿವೇಶನದಲ್ಲಿ ಮಹಿಳೆಯೊಬ್ಬರ ಕೊಳೆತ ಮೃತದೇಹ ಪತ್ತೆಯಾಗಿದ್ದು, ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆಕೆಯ ಪತಿಯನ್ನೇ ಬಂಧಿಸಿದ್ದಾರೆ.

ಒಡಿಶಾ ಮೂಲದ ಸಾಗರ್ ಚಂದ್ರ ರಾವತ್ (32) ಬಂಧಿತ ಆರೋಪಿ. ಆತನ ಪತ್ನಿ ಅನಸೂಯ (28) ಕೊಲೆಯಾದವರು. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದು, ಬೆಂಗಳೂರಿನ ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಪತಿಯ ಆದಾಯ ಮತ್ತು ಕುಟುಂಬದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಆಗಾಗ್ಗೆ ಮನಸ್ತಾಪ ಉಂಟಾಗುತ್ತಿತ್ತು ಎನ್ನಲಾಗಿದೆ.

ಆಗಸ್ಟ್ 11ರಂದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಮತ್ತೆ ಜಗಳ ನಡೆದಿದ್ದು, ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸಾಗರ್ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ದಿನ ಮನೆಯಲ್ಲೇ ಶವ ಇಟ್ಟುಕೊಂಡಿದ್ದ

ಕೊಲೆ ಬಳಿಕ ಶವವನ್ನು ಏನು ಮಾಡಬೇಕು ಎಂಬುದರ ಬಗ್ಗೆ ಆರೋಪಿ ಕೆಲಕಾಲ ಗೊಂದಲದಲ್ಲಿದ್ದ ಎನ್ನಲಾಗಿದೆ. ಸುಮಾರು ಮೂರು ದಿನಗಳ ಕಾಲ ಮೃತದೇಹವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಆತ, ಬಳಿಕ ಅದನ್ನು ಹಾಸಿಗೆಯಲ್ಲಿ ಸುತ್ತಿ ಸಂಪಿಗೆಹಳ್ಳಿ ಸಮೀಪದ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ನಿವೇಶನದಲ್ಲಿ ಎಸೆದಿದ್ದ. ಶವವನ್ನು ಬಿಸಾಡಿದ ಬಳಿಕವೂ ಯಾರಿಗಾದರೂ ಅದು ಪತ್ತೆಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಆರೋಪಿ ಆಗಾಗ್ಗೆ ಆ ಸ್ಥಳದ ಸುತ್ತಮುತ್ತ ಓಡಾಡುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಜಿಬಿಎ ನೋಟಿಸ್‌ನಿಂದ ಬೆಳಕಿಗೆ ಬಂದ ಪ್ರಕರಣ

ಖಾಲಿ ನಿವೇಶನಗಳಲ್ಲಿ ಕಸ ಹಾಗೂ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಲು ಜಿಬಿಎ ಅಧಿಕಾರಿಗಳು ಮಾಲೀಕರಿಗೆ ಸ್ವಚ್ಛತೆ ಕಾಪಾಡುವಂತೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ನಿವೇಶನದ ಮಾಲೀಕರು ಕಾರ್ಮಿಕರನ್ನು ಕಳುಹಿಸಿ ಸ್ಥಳವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು.

ಸ್ವಚ್ಛತಾ ಕಾರ್ಯದ ವೇಳೆ ಹಾಸಿಗೆಯಲ್ಲಿ ಸುತ್ತಿಡಲಾಗಿದ್ದ ಮಹಿಳೆಯ ಮೃತದೇಹ ಕಾರ್ಮಿಕರ ಕಣ್ಣಿಗೆ ಬಿದ್ದಿದೆ. ಮೃತದೇಹವನ್ನು ನಾಯಿಗಳು ಎಳೆದಾಡಿದ್ದರಿಂದ ಅದು ಕೊಳೆತ ಸ್ಥಿತಿಯಲ್ಲಿತ್ತು. ತಕ್ಷಣ ನಿವೇಶನದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಬಟ್ಟೆಯ ಟ್ಯಾಗ್ ಕೊಲೆಗಾರನತ್ತ ಕೊಂಡೊಯ್ದ ಸುಳಿವು

ಮೃತದೇಹದ ಬಳಿ ದೊರೆತ ಬಟ್ಟೆಗೆ ಸಂಬಂಧಿಸಿದ ‘ವಿಶಾಲ್ ಮಾರ್ಟ್’ ಟ್ಯಾಗ್ ತನಿಖೆಗೆ ಮಹತ್ವದ ಸುಳಿವು ನೀಡಿತು. ಅದಕ್ಕೆ ಸಂಬಂಧಿಸಿದ ಖರೀದಿ ವಿವರಗಳನ್ನು ಪರಿಶೀಲಿಸಿದ ಪೊಲೀಸರು ಸಂಪರ್ಕ ಸಂಖ್ಯೆಯೊಂದನ್ನು ಪತ್ತೆಹಚ್ಚಿದರು. ಆ ಮೂಲಕ ಮೃತ ಮಹಿಳೆಯ ಗುರುತು ಅನುಸೂಯ ಎಂದು ಖಚಿತಪಡಿಸಿಕೊಂಡರು.

ಬಳಿಕ ಆಕೆ ಕೆಲಸ ಮಾಡುತ್ತಿದ್ದ ಹೋಟೆಲ್‌ ಹಾಗೂ ಆಕೆಯ ಪರಿಚಯಸ್ಥರಿಂದ ಮಾಹಿತಿ ಸಂಗ್ರಹಿಸಿದಾಗ, ಪತಿಯೊಂದಿಗೆ ನಡೆಯುತ್ತಿದ್ದ ಜಗಳದ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ.

ವಿಚಾರಣೆ ವೇಳೆ ಕೊಲೆ ರಹಸ್ಯ ಬಯಲು

ಸಾಗರ್ ಚಂದ್ರ ರಾವತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ವಿವರಗಳು ಪೊಲೀಸರಿಗೆ ತಿಳಿದುಬಂದಿವೆ. ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಖಾಲಿ ನಿವೇಶನದಲ್ಲಿ ಎಸೆದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹ ಪತ್ತೆಯಾದ ಬಳಿಕ ಸುಮಾರು ಒಂದು ವಾರದೊಳಗೆ ತನಿಖೆ ಪೂರ್ಣಗೊಳಿಸಿದ ಸಂಪಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Read More
Next Story