
ಬಟ್ಟೆ ಒಗೆಯಲು ಹೋದ ಇಬ್ಬರು ಬಾಲಕಿಯರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬಟ್ಟೆ ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು
ಗದಗದ ತಿಮ್ಮಾಪುರದಲ್ಲಿ ನೀರಿನ ಅಭಾವದಿಂದ ಕೃಷಿ ಹೊಂಡಕ್ಕೆ ಬಟ್ಟೆ ಒಗೆಯಲು ಹೋದ ಇಬ್ಬರು ಬಾಲಕಿಯರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದ್ದು, ತನಿಖೆ ಮುಂದುವರಿದಿದೆ.
ಬಟ್ಟೆ ಒಗೆಯಲು ಕೃಷಿ ಹೊಂಡಕ್ಕೆ ತೆರಳಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಲಕ್ಷ್ಮವ್ವ ಹರನಾಶಿಕಾರಿ (15) ಮತ್ತು ಮುತ್ತವ್ವ ಹರನಾಶಿಕಾರಿ (8) ಎಂದು ಗುರುತಿಸಲಾಗಿದೆ. ಹಳ್ಳಿಯ ಕೆರೆಯಲ್ಲಿ ನೀರಿಲ್ಲದ ಕಾರಣ ಇಬ್ಬರೂ ಬಟ್ಟೆ ಒಗೆಯಲು ತಿಮ್ಮಾಪುರ-ಯಾರೆಹಂಚಿನಾಳ ರಸ್ತೆಯ ಹೊರವಲಯದಲ್ಲಿದ್ದ ಕೃಷಿ ಹೊಂಡಕ್ಕೆ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಇಬ್ಬರೂ ಹೊಂಡದೊಳಗೆ ಬಿದ್ದಿದ್ದಾರೆ. ಬಾಲಕಿಯರು ನೀರಿನಲ್ಲಿ ಮುಳುಗುತ್ತಿದ್ದಂತೆ ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ, ರಕ್ಷಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಬ್ಬರ ಮೃತದೇಹಗಳನ್ನು ಸ್ಥಳೀಯರು ಹೊರತೆಗೆದಿದ್ದಾರೆ.
ಮೃತದೇಹಗಳ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ತಿಮ್ಮಾಪುರ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದೆ. ವಿಷಯ ತಿಳಿಯುತ್ತಿದ್ದಂತೆ ಕೊಪ್ಪಳ ಜಿಲ್ಲೆಯ ಕುಕನೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕಿಯರು ಕೃಷಿ ಹೊಂಡಕ್ಕೆ ಹೇಗೆ ಬಿದ್ದರು ಎಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಪೊಲೀಸರು ಗ್ರಾಮಸ್ಥರು ಮತ್ತು ಪೋಷಕರಿಂದ ಮಾಹಿತಿ ಕಲೆಹಾಕುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

