ಚಿಕ್ಕಮಗಳೂರಿನಲ್ಲಿ ಪೊಲೀಸ್ ಸಬ್‌‌-ಇನ್‌ಸ್ಪೆಕ್ಟರ್‌ ಎಂದು ನಂಬಿಸಿ ಕೋಟಿಗಟ್ಟಲೆ ವಂಚಿಸಿದ ಮಹಿಳೆ ಬಂಧನ
x

ಪೊಲೀಸ್ ಅಧಿಕಾರಿ ಎಂಬ ಪರಿಚಯವನ್ನು ಬಳಸಿಕೊಂಡು ಹಲವು ಮಂದಿಯಿಂದ ದೊಡ್ಡ ಮೊತ್ತದ ಹಣ ಹಾಗೂ ಚಿನ್ನಾಭರಣ ಪಡೆದಿರುವ ಆರೋಪ ನಿವೇದಿತಾ ಗೌಡ ಮೇಲಿದೆ.

ಚಿಕ್ಕಮಗಳೂರಿನಲ್ಲಿ ಪೊಲೀಸ್ ಸಬ್‌‌-ಇನ್‌ಸ್ಪೆಕ್ಟರ್‌ ಎಂದು ನಂಬಿಸಿ ಕೋಟಿಗಟ್ಟಲೆ ವಂಚಿಸಿದ ಮಹಿಳೆ ಬಂಧನ

ನಿವೇದಿತಾ ಗೌಡಳ ಹಿನ್ನೆಲೆ, ಆಕೆಯ ಸಂಪರ್ಕದಲ್ಲಿದ್ದ ವ್ಯಕ್ತಿಗಳು, ನಕಲಿ ದಾಖಲೆಗಳ ಬಳಕೆ ಹಾಗೂ ಇತರ ಜಿಲ್ಲೆಗಳಲ್ಲಿ ನಡೆದಿರಬಹುದಾದ ವಂಚನೆಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Click the Play button to hear this message in audio format

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಾರ್ವಜನಿಕರನ್ನು ನಂಬಿಸಿ ವಂಚಿಸುತ್ತಿದ್ದ ಅಸಲಿ ಖದೀಮಳೊಬ್ಬಳು ಖಾಕಿ ಬಲೆಗೆ ಬಿದ್ದಿದ್ದಾಳೆ. ತಾನು ಬೆಂಗಳೂರಿನ ಪೊಲೀಸ್ ಸಬ್‌-ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಎಂದು ಸುಳ್ಳು ಹೇಳಿಕೊಂಡು, ಜನರಿಂದ ಲಕ್ಷಾಂತರ ರೂಪಾಯಿ ಹಣ, ಬೆಲೆಬಾಳುವ ಚಿನ್ನಾಭರಣ ಹಾಗೂ ಐಷಾರಾಮಿ ಕಾರುಗಳನ್ನು ಸುಲಿಗೆ ಮಾಡುತ್ತಿದ್ದ ರಾಮನಗರ ಮೂಲದ ನಿವೇದಿತಾ ಗೌಡ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ನೀಡಿದ ದೂರುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು, ಈಕೆಯ ಬಣ್ಣ ಬಯಲು ಮಾಡಿದ್ದಾರೆ. ನಕಲಿ ಪೊಲೀಸ್ ಅಧಿಕಾರಿಯ ವಂಚನೆಯ ಜಾಲ ಚಿಕ್ಕಮಗಳೂರಿಗೆ ಮಾತ್ರ ಸೀಮಿತವಾಗಿದೆಯೇ ಅಥವಾ ರಾಜ್ಯಾದ್ಯಂತ ಹರಡಿದೆಯೇ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದೆ.

ಖಾಕಿ ವೇಷದಲ್ಲಿ ಮೋಸ

ವಂಚಕಿ ನಿವೇದಿತಾ ಗೌಡ ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿ ಕೆಫೆಯೊಂದನ್ನು ನಡೆಸಿಕೊಂಡಿದ್ದಳು. ಅಲ್ಲಿಗೆ ಬರುತ್ತಿದ್ದ ಗ್ರಾಹಕರು ಹಾಗೂ ಪರಿಚಯಸ್ಥರ ಮುಂದೆ ತಾನು ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆಯ ಪಿಎಸ್‌ಐ ಎಂದು ಬಿಂಬಿಸಿಕೊಳ್ಳುತ್ತಿದ್ದಳು. ಜನರು ತನ್ನನ್ನು ಸುಲಭವಾಗಿ ನಂಬಬೇಕು ಎಂಬ ಏಕೈಕ ಉದ್ದೇಶದಿಂದ, ಅಸಲಿ ಪೊಲೀಸ್ ಅಧಿಕಾರಿಗಳಂತೆಯೇ ಸಣ್ಣದಾಗಿ ಕೂದಲು ಕತ್ತರಿಸಿಕೊಂಡಿದ್ದಲ್ಲದೆ, ಖಾಕಿ ಬಣ್ಣವನ್ನು ಹೋಲುವ ಉಡುಪುಗಳನ್ನೇ ಹೆಚ್ಚಾಗಿ ಧರಿಸುತ್ತಿದ್ದಳು. ತಾನು ಸದ್ಯ ಕರ್ತವ್ಯಕ್ಕೆ ರಜೆ ಹಾಕಿ ಚಿಕ್ಕಮಗಳೂರಿಗೆ ಬಂದಿರುವುದಾಗಿ ಕಥೆ ಕಟ್ಟಿ, ಅಮಾಯಕ ಜನರೊಂದಿಗೆ ವಿಶ್ವಾಸ ಬೆಳೆಸಿಕೊಂಡು ಅವರನ್ನು ತನ್ನ ಮೋಸದ ಜಾಲಕ್ಕೆ ಕೆಡವುತ್ತಿದ್ದಳು.

ಲಕ್ಷಾಂತರ ರೂಪಾಯಿ ವಂಚನೆ

ನಾನು ಪ್ರಭಾವಿ ಪೊಲೀಸ್ ಅಧಿಕಾರಿ ಎಂಬ ಪರಿಚಯವನ್ನು ದುರ್ಬಳಕೆ ಮಾಡಿಕೊಂಡ ಆರೋಪಿ ನಿವೇದಿತಾ, ಹಲವು ಮಂದಿಯಿಂದ ದೊಡ್ಡ ಮೊತ್ತದ ಹಣ ಹಾಗೂ ಚಿನ್ನಾಭರಣಗಳನ್ನು ಪಡೆದು ವಂಚಿಸಿದ್ದಾಳೆ. ಜನರಿಗೆ ಮಂಕುಬೂದಿ ಎರಚಿ, ಅವರಿಂದ ಐಷಾರಾಮಿ ಕಾರುಗಳನ್ನು ಪಡೆದುಕೊಳ್ಳುತ್ತಿದ್ದ ಈಕೆ, ಆ ಕಾರುಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಅಕ್ರಮ ಹಣ ಸಂಪಾದಿಸಿದ್ದಾಳೆ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಈಕೆಯ ವಂಚನೆಗೆ ಬಲಿಯಾದ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಸಂತ್ರಸ್ತರು ಬಸವನಹಳ್ಳಿ ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ಈ ದೂರುಗಳ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಕಂಬಿ ಹಿಂದೆ ತಳ್ಳಲಾಗಿದೆ.

ಪ್ರಿಯಕರನ ಪಾತ್ರವೇನು?

ಬಂಧಿತ ಆರೋಪಿಯ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಪ್ರಕರಣದ ಮತ್ತಷ್ಟು ಆಘಾತಕಾರಿ ವಿಚಾರಗಳು ಹೊರಬಿದ್ದಿವೆ. ಆಕೆಯ ಮೊಬೈಲ್‌ನಲ್ಲಿ ವಿವಿಧ ಹೆಸರುಗಳಿಂದ ಸಿದ್ಧಪಡಿಸಲಾಗಿದ್ದ ಹಲವಾರು ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ನಕಲಿ ದಾಖಲೆಗಳನ್ನು ಬಳಸಿ ಬೇರೆ ಯಾವೆಲ್ಲಾ ಅಪರಾಧ ಕೃತ್ಯಗಳನ್ನು ಎಸಗಿದ್ದಾಳೆ ಹಾಗೂ ಇದರ ಉದ್ದೇಶವೇನು ಎಂಬುದರ ಬಗ್ಗೆ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ತಾನು ವಂಚಿಸಿ ಸಂಪಾದಿಸಿದ ಹಣ ಹಾಗೂ ಚಿನ್ನಾಭರಣದ ಬಹುಪಾಲು ಪಾಲನ್ನು ಚಿಕ್ಕಮಗಳೂರು ನಗರದ ನಿವಾಸಿಯಾಗಿರುವ ತನ್ನ ಪ್ರಿಯಕರ ದೇವು ಎಂಬಾತನಿಗೆ ನೀಡಿರುವುದಾಗಿ ನಿವೇದಿತಾ ಒಪ್ಪಿಕೊಂಡಿದ್ದಾಳೆ.

ಸದ್ಯ ದೇವು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆತ ಸಿಕ್ಕಿಬಿದ್ದರೆ ಈ ವಂಚನೆಯ ಜಾಲದ ಇನ್ನಷ್ಟು ಕರಾಳ ಮುಖಗಳು ಹಾಗೂ ಇತರ ಜಿಲ್ಲೆಗಳಲ್ಲಿ ನಡೆದಿರಬಹುದಾದ ವಂಚನೆಗಳ ಸಂಪೂರ್ಣ ಮಾಹಿತಿ ಹೊರಬರುವ ನಿರೀಕ್ಷೆ ಇದೆ. ನಿವೇದಿತಾ ಗೌಡಳ ಹಿನ್ನೆಲೆ, ಆಕೆಯ ಸಂಪರ್ಕದಲ್ಲಿದ್ದ ಇತರ ವ್ಯಕ್ತಿಗಳು ಮತ್ತು ಕಾರುಗಳಿಗೆ ಸಂಬಂಧಿಸಿದ ವಹಿವಾಟುಗಳ ಬಗ್ಗೆಯೂ ಪೊಲೀಸ್ ತಂಡಗಳು ಮಾಹಿತಿ ಕಲೆಹಾಕುತ್ತಿವೆ.

Read More
Next Story