ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಶವ ಪತ್ತೆ – ಚಿನ್ನಾಭರಣಕ್ಕಾಗಿ ಕೊಲೆ ಶಂಕೆ
x

ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಮೃತದೇಹ ಪತ್ತೆ

ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯ ಶವ ಪತ್ತೆ – ಚಿನ್ನಾಭರಣಕ್ಕಾಗಿ ಕೊಲೆ ಶಂಕೆ

ಲಕ್ಷ್ಮಮ್ಮ ಅವರು ಅಕ್ಟೋಬರ್ 3ರಂದು ವಿಜಿ ಕೊಪ್ಪಲಿಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದರು. ಆದರೆ ಬಳಿಕ ಅವರು ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಹಾಗೂ ಸಂಬಂಧಿಕರು ಹಲವು ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.


Click the Play button to hear this message in audio format

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಸಮೀಪ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ನಾಲೆಯೊಂದರಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ತುಂಬಿದ್ದ ವೃದ್ಧೆಯ ಶವ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಮೃತರನ್ನು ಹಿರೀಹಳ್ಳಿಕೊಪ್ಪಲು ಗ್ರಾಮದ 67 ವರ್ಷದ ಲಕ್ಷ್ಮಮ್ಮ ಎಂದು ಗುರುತಿಸಲಾಗಿದೆ. ಚಿನ್ನಾಭರಣಕ್ಕಾಗಿ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿ, ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ನಾಲೆಗೆ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಅ.3ರಿಂದ ನಾಪತ್ತೆಯಾಗಿದ್ದ ಲಕ್ಷ್ಮಮ್ಮ

ಲಕ್ಷ್ಮಮ್ಮ ಅವರು ಪತಿ ಅಣ್ಣೇಗೌಡ ಅವರೊಂದಿಗೆ ವಾಸಿಸುತ್ತಿದ್ದರು. ಅಕ್ಟೋಬರ್ 3ರಂದು ವಿಜಿ ಕೊಪ್ಪಲಿಗೆ ತೆರಳುವುದಾಗಿ ಮನೆಯಿಂದ ಹೊರಟಿದ್ದ ಅವರು ಬಳಿಕ ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಹಾಗೂ ಸಂಬಂಧಿಕರು ಹಲವು ಕಡೆ ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ.

ಅಕ್ಟೋಬರ್ 6ರಂದು ಪತ್ನಿ ಕಾಣೆಯಾಗಿರುವ ಬಗ್ಗೆ ಅಣ್ಣೇಗೌಡರು ಪೊಲೀಸರಿಗೆ ದೂರು ನೀಡಲು ತೆರಳಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ ಬೆಟ್ಟದಹಳ್ಳಿ ಗ್ರಾಮದ ಬಳಿಯ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲ ಪತ್ತೆಯಾಗಿದೆ. ಪರಿಶೀಲನೆ ವೇಳೆ ಅದರೊಳಗೆ ಲಕ್ಷ್ಮಮ್ಮ ಅವರ ಶವ ಇರುವುದು ಬೆಳಕಿಗೆ ಬಂದಿದೆ.

ಪೊಲೀಸರಿಂದ ತನಿಖೆ ಚುರುಕು

ಮಾಹಿತಿ ತಿಳಿದು ಸ್ಥಳಕ್ಕೆ ಎಸ್‌ಪಿ ಶುಭನ್ವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವೃದ್ಧೆಯ ಸಾವಿನ ನಿಖರ ಕಾರಣ ಹಾಗೂ ಘಟನೆಯ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚಿನ್ನಾಭರಣದ ವಿಚಾರವೇ ಕೊಲೆಗೆ ಕಾರಣವಾಗಿರಬಹುದೇ ಎಂಬ ಅನುಮಾನವೂ ತನಿಖೆಯ ಪ್ರಮುಖ ಅಂಶವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ.

Read More
Next Story