
Bitcoin Scam | ಹ್ಯಾರಿಸ್, ನಲಪಾಡ್ ನಿವಾಸದ ಮೇಲೆ ED ರೇಡ್- ಬಿಟ್‌ಕಾಯಿನ್ ಹಗರಣದ ನಂಟು?
ED raid|ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಮತ್ತು ಪುತ್ರ ಮೊಹಮ್ಮದ್ ನಲಪಾಡ್ ನಿವಾಸ ಸೇರಿದಂತೆ 17 ಸ್ಥಳಗಳಲ್ಲಿ ಇ.ಡಿ ಭರ್ಜರಿ ದಾಳಿ ನಡೆಸಿದೆ.
ರಾಜ್ಯ ರಾಜಕಾರಣದಲ್ಲಿ ಬೆಳ್ಳಂಬೆಳಗ್ಗೆ ಸಂಚಲನ ಸೃಷ್ಟಿಯಾಗಿದ್ದು, ಕಾಂಗ್ರೆಸ್‌ನ ಪ್ರಭಾವಿ ಶಾಸಕ ಎನ್.ಎ. ಹ್ಯಾರಿಸ್ ಮತ್ತು ಅವರ ಬೆಂಬಲಿಗರಿಗೆ ಜಾರಿ ನಿರ್ದೇಶನಾಲಯ (ED) ಶಾಕ್ ನೀಡಿದೆ. ಬೆಂಗಳೂರಿನ ಶಾಂತಿನಗರ ಶಾಸಕರ ನಿವಾಸ ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ನಲಪಾಡ್ ನಿವಾಸದ ಮೇಲೂ ದಾಳಿ
ಬೆಂಗಳೂರಿನ ಗರುಡಾ ಮಾಲ್ ಹಿಂಭಾಗದಲ್ಲಿರುವ ಹ್ಯಾರಿಸ್ ಅವರ ನಿವಾಸ ಹಾಗೂ ಅವರ ಪುತ್ರ, ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕೇಂದ್ರ ಭದ್ರತಾ ಪಡೆಗಳ ಬಿಗಿ ಕಾವಲಿನಲ್ಲಿ ಈ ಶೋಧ ಕಾರ್ಯ ನಡೆಯುತ್ತಿದೆ.
ಬಿಟ್‌ಕಾಯಿನ್ ಹಗರಣದ ಕಂಟಕ?
ಮೂಲಗಳ ಪ್ರಕಾರ, ಈ ದಾಳಿಯು ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ 'ಬಿಟ್‌ಕಾಯಿನ್ ಸ್ಕ್ಯಾಮ್' ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಈ ಹಗರಣದ ಪ್ರಮುಖ ಆರೋಪಿ, ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಜೊತೆಗೆ ನಲಪಾಡ್ ಆರ್ಥಿಕ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶ್ರೀಕಿ ಮತ್ತು ಮೊಹಮ್ಮದ್ ನಲಪಾಡ್ ನಡುವೆ ಕಳೆದ 6 ವರ್ಷಗಳಿಂದ ಆರ್ಥಿಕ ಸಂಪರ್ಕವಿದ್ದು, ಸುಮಾರು 4.5 ಕೋಟಿ ರೂಪಾಯಿಗಳಷ್ಟು ಹಣದ ವ್ಯವಹಾರ ನಡೆದಿದೆ ಎಂಬ ಸಂಶಯವನ್ನು ಇ.ಡಿ ವ್ಯಕ್ತಪಡಿಸಿದೆ. ದಾಳಿಯ ವೇಳೆ ಡಿಜಿಟಲ್ ಸಾಧನಗಳು, ಬ್ಯಾಂಕ್ ದಾಖಲೆಗಳು ಮತ್ತು ಡೈರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ರಾಜಕೀಯ ಸಂಚಲನ
ಈ ಹಿಂದೆ ಶ್ರೀಕಿ ಬಂಧನದ ನಂತರ ತಣ್ಣಗಾಗಿದ್ದ ಬಿಟ್‌ಕಾಯಿನ್ ಪ್ರಕರಣಕ್ಕೆ ಈಗ ಇ.ಡಿ ದಾಳಿಯ ಮೂಲಕ ಮತ್ತೆ ಮರುಜೀವ ಬಂದಂತಾಗಿದೆ. ಈ ಪ್ರಕರಣದಲ್ಲಿ ಹಲವು ಪ್ರಭಾವಿ ರಾಜಕಾರಣಿಗಳ ಹೆಸರುಗಳು ಕೇಳಿಬರುತ್ತಿದ್ದು, ಮುಂದಿನ ದಿನಗಳಲ್ಲಿ ತನಿಖೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಹ್ಯಾರಿಸ್ ಕುಟುಂಬಕ್ಕೆ ಈ ದಾಳಿ ದೊಡ್ಡ ಸಂಕಷ್ಟ ತಂದೊಡ್ಡುವ ಲಕ್ಷಣಗಳು ಕಾಣುತ್ತಿವೆ.
ಯಾರು ಈ ಶ್ರೀಕಿ?
ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬೆಂಗಳೂರಿನ ಜಯನಗರದ ನಿವಾಸಿ. ಈತ ಕೇವಲ ಸಣ್ಣಪುಟ್ಟ ಹ್ಯಾಕರ್ ಅಲ್ಲ. ಅಂತರಾಷ್ಟ್ರೀಯ ಮಟ್ಟದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವಷ್ಟು ಬುದ್ಧಿವಂತ ತಾಂತ್ರಿಕ ನೈಪುಣ್ಯ ಹೊಂದಿರುವವನು. ನೆದರ್‌ಲ್ಯಾಂಡ್ಸ್‌ನ ಆಂಸ್ಟರ್‌ಡ್ಯಾಂನಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಶಿಕ್ಷಣ ಪಡೆದಿದ್ದ ಈತ, ಚಿಕ್ಕ ವಯಸ್ಸಿನಲ್ಲೇ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮತ್ತು ಹ್ಯಾಕಿಂಗ್‌ನಲ್ಲಿ ಪರಿಣತಿ ಸಾಧಿಸಿದ್ದ. ಶ್ರೀಕಿ ಸುದ್ದಿಗೆ ಬಂದಿದ್ದು ಡ್ರಗ್ಸ್ ಪ್ರಕರಣವೊಂದರ ತನಿಖೆಯ ವೇಳೆ. ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಈತನನ್ನು ಬಂಧಿಸಿದಾಗ, ಆತ ಮಾಡಿದ್ದ ಹ್ಯಾಕಿಂಗ್ ಕೃತ್ಯಗಳು ಬಯಲಿಗೆ ಬಂದವು.

