Say No to Drugs| ಡ್ರಗ್ಸ್ ಸೇವಿಸಿ ಇಬ್ಬರು ಎಂಬಿಎ ವಿದ್ಯಾರ್ಥಿಗಳ ಸಾವು
x

ಪೊಲೀಸರು ಏಪ್ರಿಲ್ 13ರಂದು ಭರ್ಜರಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Say No to Drugs| ಡ್ರಗ್ಸ್ ಸೇವಿಸಿ ಇಬ್ಬರು ಎಂಬಿಎ ವಿದ್ಯಾರ್ಥಿಗಳ ಸಾವು

ಮುಂಬೈ ಸಂಗೀತ ಕಾರ್ಯಕ್ರಮದಲ್ಲಿ ಎಂಡಿಎಂಎ ಮಾತ್ರೆ ಸೇವಿಸಿ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಸಂಘಟಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.


Click the Play button to hear this message in audio format

ಮುಂಬೈನ ಗೋರೆಗಾಂವ್ ಈಸ್ಟ್‌ನಲ್ಲಿರುವ ನೆಸ್ಕೋ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ತಡರಾತ್ರಿಯ ಟೆಕ್ನೋ ಸಂಗೀತ ಕಾರ್ಯಕ್ರಮದ ವೇಳೆ ಮಾದಕ ವಸ್ತುಗಳನ್ನು ಸೇವಿಸಿದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದು, ಮತ್ತೋರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಕ್ರಮದ ಸಂಘಟಕರು ಮತ್ತು ಡ್ರಗ್ಸ್ ಪೂರೈಕೆದಾರರು ಸೇರಿದಂತೆ ಐವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಏಪ್ರಿಲ್ 11 ರಂದು ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 24 ವರ್ಷ ವಯಸ್ಸಿನ ಯುವಕ ಮತ್ತು ಯುವತಿ ಡ್ರಗ್ಸ್ ಸೇವಿಸಿ ಅಸ್ವಸ್ಥರಾಗಿದ್ದರು ಎನ್ನಲಾಗಿದ್ದು, ಏಪ್ರಿಲ್ 12 ರಂದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

ದಕ್ಷಿಣ ಮುಂಬೈನ ಪ್ರತಿಷ್ಠಿತ ಕಾಲೇಜೊಂದರ ಸುಮಾರು 25 ವಿದ್ಯಾರ್ಥಿಗಳ ಗುಂಪು ಏಪ್ರಿಲ್ 11ರಂದು ಈ ಸಂಗೀತ ಕಚೇರಿಯಲ್ಲಿ ಪಾಲ್ಗೊಂಡಿತ್ತು. ಕಾರ್ಯಕ್ರಮದ ನಡುವೆ ಇವರಿಗೆ 'ಹಳದಿ ಬಣ್ಣದ ಮಾತ್ರೆ'ಗಳನ್ನು ವಿತರಿಸಲಾಗಿತ್ತು ಎಂದು ಹೇಳಲಾಗಿದೆ. ಮಾತ್ರೆ ಸೇವಿಸಿದ ಕೆಲವೇ ಗಂಟೆಗಳಲ್ಲಿ 28 ವರ್ಷದ ಯುವಕ ಮತ್ತು 24 ವರ್ಷದ ಯುವತಿಗೆ ತೀವ್ರ ಉಸಿರಾಟದ ತೊಂದರೆ ಹಾಗೂ ತಲೆಸುತ್ತು ಕಾಣಿಸಿಕೊಂಡಿತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಏಪ್ರಿಲ್ 12ರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದರು. ಚಿಕಿತ್ಸೆ ಪಡೆಯುತ್ತಿರುವ ಮತ್ತೊಬ್ಬ ಯುವತಿ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಏಪ್ರಿಲ್ 13ರಂದು ಭರ್ಜರಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಡ್ರಗ್ಸ್ ಪೂರೈಸಿದ ಆರೋಪ ಹೊತ್ತಿರುವ ಇಬ್ಬರು ವಿದ್ಯಾರ್ಥಿಗಳು, ಕಾರ್ಯಕ್ರಮದ ಸಂಘಟಕರು ಮತ್ತು ನೆಸ್ಕೋ ಮ್ಯಾನೇಜ್‌ಮೆಂಟ್‌ನ ಸಿಬ್ಬಂದಿ ಸೇರಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಾರ್ಯಕ್ರಮದಲ್ಲಿ ಎಂಡಿಎಂಎ (MDMA) ಎಂಬ ನಿಷೇಧಿತ ಮಾದಕ ದ್ರವ್ಯವನ್ನು ಹಂಚಲಾಗಿತ್ತು ಎನ್ನಲಾಗಿದೆ. ಆರೋಪಿಗಳನ್ನು ಸದ್ಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸ್ಥಳದಲ್ಲಿ ಮಾದಕ ದ್ರವ್ಯ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಆಯೋಜಕರ ಮೇಲೆ ಕ್ರಮ ಜರುಗಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 105 (ಕೊಲೆಯಲ್ಲದ ಅಪರಾಧಯುತ ನರಹತ್ಯೆ) ಮತ್ತು ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತರಿಂದ ಆರು ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಮಾದಕ ದ್ರವ್ಯಗಳನ್ನು ಮುಂಬೈ ಹೊರಗಿನಿಂದ ತರಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಸ್ಕೋ ಸೆಂಟರ್ ಆಡಳಿತ ಮಂಡಳಿಯು ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.

ನಿಯಮಗಳ ಉಲ್ಲಂಘನೆ

ಸಂಗೀತ ಕಚೇರಿಯಲ್ಲಿ ಕೇವಲ ಡ್ರಗ್ಸ್ ಮಾತ್ರವಲ್ಲದೆ ಇತರೆ ಕಾನೂನುಬಾಹಿರ ಚಟುವಟಿಕೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ರಾತ್ರಿ 10 ಗಂಟೆಯವರೆಗೆ ಮಾತ್ರ ಅನುಮತಿ ಇದ್ದರೂ ಕಾರ್ಯಕ್ರಮವು ಮಧ್ಯರಾತ್ರಿಯವರೆಗೂ ಮುಂದುವರಿದಿತ್ತು. ಅಷ್ಟೇ ಅಲ್ಲದೆ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ವಿತರಿಸಲು ಅನುಮತಿ ಇಲ್ಲದಿದ್ದರೂ, ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಸರಬರಾಜು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನಸಂದಣಿಯ ಲಾಭ ಪಡೆದ ಕಳ್ಳರು

ಸಂಗೀತ ಕಚೇರಿಯ ಗದ್ದಲದ ನಡುವೆ ಮತ್ತೊಂದು ಅಪರಾಧ ಪ್ರಕರಣ ವರದಿಯಾಗಿದ್ದು, ಸುಮಾರು 15,000 ಜನರಿದ್ದ ಗುಂಪಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳು ಕಳ್ಳತನವಾಗಿವೆ. ಐಫೋನ್ 17 ಮತ್ತು 16 ಪ್ರೊ ಮ್ಯಾಕ್ಸ್ ಸೇರಿದಂತೆ ಹಲವು ದುಬಾರಿ ಫೋನ್‌ಗಳನ್ನು ಕಳೆದುಕೊಂಡಿರುವ ಬಗ್ಗೆ ದೂರು ದಾಖಲಾಗಿದೆ. ಒಟ್ಟಾರೆ 3.40 ಲಕ್ಷ ರೂಪಾಯಿ ಮೊತ್ತದ ಆಸ್ತಿ ಕಳವಾಗಿದ್ದು, ವನ್ರಾಯ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ನೆಸ್ಕೋ ಸಂಸ್ಥೆಯ ಪ್ರತಿಕ್ರಿಯೆ

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ನೆಸ್ಕೋ ವಕ್ತಾರರು, ಮೃತರಿಗೆ ಸಂತಾಪ ಸೂಚಿಸಿದ್ದು ತನಿಖಾ ಸಂಸ್ಥೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಪ್ರಕರಣವು ತನಿಖೆಯ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ಏನಿದು MDMA?

ಇದರ ಪೂರ್ಣ ಹೆಸರು ಮಿಥೈಲೆನಡಿಯೊಕ್ಸಿಮೆಥಾಂಫೆಟಮೈನ್ (Methylenedioxymethamphetamine). ಇದನ್ನು ಸಾಮಾನ್ಯ ಭಾಷೆಯಲ್ಲಿ ‘ಎಕ್ಸ್‌ಟಸಿ’ (Ecstasy) ಅಥವಾ ‘ಮಾಲಿ’ (Molly) ಎಂದು ಕರೆಯಲಾಗುತ್ತದೆ. ಇದು ಮಿದುಳಿನ ಮೇಲೆ ಅಪಾಯಕಾರಿಯಾಗಿ ಪ್ರಭಾವ ಬೀರುವ ಒಂದು ಕೃತಕ ರಾಸಾಯನಿಕ ಪದಾರ್ಥವಾಗಿದೆ.

ದೇಹದ ಮೇಲೆ ಇದರ ಅಡ್ಡ ಪರಿಣಾಮಗಳೇನು?

ಇದನ್ನು ಸೇವಿಸಿದ ತಕ್ಷಣ ವ್ಯಕ್ತಿಯಲ್ಲಿ ಅತಿಯಾದ ಶಕ್ತಿ ಕಂಡುಬರುತ್ತದೆ. ವ್ಯಕ್ತಿಯು ತಾನೇನೋ ಸುಖ ಲೋಕದಲ್ಲಿದ್ದೇನೆ ಎಂಬ ಭ್ರಮೆಗೆ ಒಳಗಾಗುತ್ತಾನೆ. ಅಪರಿಚಿತರ ಮೇಲೂ ಅತಿಯಾದ ಪ್ರೀತಿ ಮತ್ತು ಭಾವನಾತ್ಮಕ ಒಲವು ತೋರುವುದು ಇದರ ಪ್ರಭಾವವಾಗಿದೆ. ಶಬ್ದ, ಬೆಳಕು ಮತ್ತು ಸ್ಪರ್ಶದ ಅನುಭವಗಳು ಸಾಮಾನ್ಯಕ್ಕಿಂತ ವಿಭಿನ್ನವಾಗಿ ಕಾಣಿಸತೊಡಗುತ್ತವೆ.

ಕೇವಲ ಕ್ಷಣಿಕ ಸುಖಕ್ಕಾಗಿ ಬಳಸುವ ಈ ದ್ರವ್ಯವು ಪ್ರಾಣಕ್ಕೇ ಕುತ್ತು ತರಬಲ್ಲದು. ದೇಹದಲ್ಲಿನ ನೀರಿನಂಶ ಶೀಘ್ರವಾಗಿ ಕಡಿಮೆಯಾಗಿ ತೀವ್ರ ಸುಸ್ತು ಕಾಣಿಸಿಕೊಳ್ಳುತ್ತದೆ. ಹೃದಯ ಬಡಿತ ಮತ್ತು ರಕ್ತದೊತ್ತಡ ಅಸಹಜವಾಗಿ ಏರಿಕೆಯಾಗುತ್ತದೆ. ಅತಿಯಾದ ಆತಂಕ, ಗೊಂದಲ ಮತ್ತು ವಾಕರಿಕೆ ಸಂಭವಿಸಬಹುದು. ತೀವ್ರ ಪ್ರಕರಣಗಳಲ್ಲಿ ಮೆದುಳು ನಿಷ್ಕ್ರಿಯಗೊಳ್ಳುವುದು, ಮೂರ್ಛೆ ರೋಗ ಅಥವಾ ಸಾವು ಕೂಡ ಸಂಭವಿಸಬಹುದು.

ಪಾರ್ಟಿಗಳಲ್ಲಿ ಇದು ಏಕೆ ಹೆಚ್ಚು ಅಪಾಯಕಾರಿ?

ಹೆಚ್ಚಿನ ಜನರು ಕಿಕ್ಕಿರಿದಿರುವ ಸ್ಥಳಗಳಲ್ಲಿ ಮತ್ತು ಸತತವಾಗಿ ನೃತ್ಯ ಮಾಡುವಾಗ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ MDMA ಸೇವಿಸುವುದರಿಂದ ದೇಹವು ವಿಪರೀತವಾಗಿ ಕಾದಂತಾಗಿ ವ್ಯಕ್ತಿ ಕುಸಿದು ಬೀಳುವ ಸಾಧ್ಯತೆ ಇರುತ್ತದೆ. ಅಲ್ಲದೆ, ಇದರ ಜೊತೆ ಮದ್ಯಪಾನ ಮಾಡುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ.

Read More
Next Story