
ಸಾಂದರ್ಭಿಕ ಚಿತ್ರ
ಧಾರವಾಡ: ಗಾಂಜಾ ಸೇವಿಸದಿದ್ದರೂ ಪೊಲೀಸರ ಕಿರುಕುಳ, ಬೆದರಿಕೆ; ಮರ್ಯಾದೆಗೆ ಅಂಜಿ ವಿದ್ಯಾರ್ಥಿ ಆತ್ಮಹತ್ಯೆ
ವಿದ್ಯಾಗಿರಿ ಠಾಣೆ ಪೊಲೀಸರು ಆದಿತ್ಯ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಆದಿತ್ಯನಿಗೆ ವೈದ್ಯಕೀಯ ಪರೀಕ್ಷೆ (Drug Test) ಮಾಡಿಸಲಾಗಿದ್ದು, ವರದಿಯಲ್ಲಿ 'ನೆಗೆಟಿವ್' (ಗಾಂಜಾ ಸೇವಿಸಿಲ್ಲ) ಎಂದು ಬಂದಿತ್ತು.
ಗಾಂಜಾ ಸೇವನೆ ಮಾಡದಿದ್ದರೂ ಸುಳ್ಳು ಆರೋಪ ಹೊರಿಸಿ, ಹಣಕ್ಕಾಗಿ ಪೀಡಿಸಿದ ಪೊಲೀಸರ ಕಿರುಕುಳ ಹಾಗೂ ಬೆದರಿಕೆಗೆ ಹೆದರಿ ಕಾಲೇಜು ವಿದ್ಯಾರ್ಥಿಯೊಬ್ಬ ನೇಣಿಗೆ ಕೊರಳೊಡ್ಡಿರುವ ದಾರುಣ ಘಟನೆ ಧಾರವಾಡದಲ್ಲಿ ನಡೆದಿದೆ.
ನಗರದ ಗಿರಿನಗರದ ನಿವಾಸಿ, ಕಿಟೆಲ್ ಕಾಲೇಜಿನ ಬಿಎಸ್‌ಸಿ (BSc) ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ (20) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರ ಅಮಾನವೀಯ ನಡೆಯೇ ಈ ಸಾವಿಗೆ ನೇರ ಕಾರಣ ಎಂದು ಮೃತನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆಯ ಹಿನ್ನೆಲೆ ಹಾಗೂ ಪೊಲೀಸರ ಕಿರುಕುಳ
ಕಳೆದ ಶನಿವಾರ ಗಾಂಜಾ ಸೇವನೆ ಆರೋಪದಡಿ ವಿದ್ಯಾಗಿರಿ ಠಾಣೆ ಪೊಲೀಸರು ಆದಿತ್ಯ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಆದಿತ್ಯನಿಗೆ ವೈದ್ಯಕೀಯ ಪರೀಕ್ಷೆ (Drug Test) ಮಾಡಿಸಲಾಗಿದ್ದು, ವರದಿಯಲ್ಲಿ 'ನೆಗೆಟಿವ್' (ಗಾಂಜಾ ಸೇವಿಸಿಲ್ಲ) ಎಂದು ಬಂದಿತ್ತು. ವರದಿ ನೆಗೆಟಿವ್ ಬಂದರೂ ಪೊಲೀಸರು ಆತನನ್ನು ಬಿಡದೆ ಹಣಕ್ಕಾಗಿ ಪೀಡಿಸಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿ 10,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸರು, ಬಳಿಕ 2,000 ರೂ. ಪಡೆದುಕೊಂಡಿದ್ದಾರೆ. "ಹಣ ನೀಡದಿದ್ದರೆ ಬೇರೆ ಯಾವುದಾದರೂ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸುತ್ತೇವೆ" ಎಂದು ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ. ತಾನು ಯಾವುದೇ ತಪ್ಪು ಮಾಡದಿದ್ದರೂ ಪೊಲೀಸರು ಠಾಣೆಗೆ ಕರೆದೊಯ್ದಿದ್ದರಿಂದ ಸಮಾಜದಲ್ಲಿ ಮತ್ತು ಸ್ನೇಹಿತರ ಎದುರು ಮರ್ಯಾದೆ ಹೋಯಿತು ಎಂದು ತೀವ್ರ ಮನನೊಂದಿದ್ದ ಆದಿತ್ಯ, ತನ್ನ ಮನೆಯಲ್ಲಿಯೇ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಫೋನ್‌ಪೇ ಮೂಲಕವೂ ಸುಲಿಗೆ?
ಇದೇ ಕಾರ್ಯಾಚರಣೆಯಲ್ಲಿ ಡ್ರಗ್ ಟೆಸ್ಟ್ ವೇಳೆ 'ಪಾಸಿಟಿವ್' ಬಂದ ಯುವಕರಿಂದ ಪೊಲೀಸರು ತಲಾ 25,000 ದಿಂದ 30,000 ರೂ. ವರೆಗೆ ಸುಲಿಗೆ ಮಾಡಿದ್ದಾರೆ ಎಂಬ ಆಘಾತಕಾರಿ ವಿಚಾರವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಈ ಹಣವನ್ನು ನೇರವಾಗಿ ಪಡೆಯದೆ ಫೋನ್‌ಪೇ (PhonePe) ಹಾಗೂ ಮೂರನೇ ವ್ಯಕ್ತಿಗಳ ಮೂಲಕ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕಣ್ಣೀರಿಟ್ಟ ತಾಯಿ, ಕಠಿಣ ಕ್ರಮಕ್ಕೆ ಆಗ್ರಹ
ಮಗನ ದಿಢೀರ್ ಸಾವಿನಿಂದ ಆದಿತ್ಯನ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದು, ಶವಾಗಾರದ ಮುಂದೆ ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲಕುವಂತಿತ್ತು. "ನನ್ನ ಮಗ ಗಾಂಜಾ ಸೇದುವವನಲ್ಲ. ಆತ ಸಾಯಲು ವಿದ್ಯಾಗಿರಿ ಪೊಲೀಸರೇ ನೇರ ಕಾರಣ. ಸುಖಾಸುಮ್ಮನೆ ಹೆದರಿಸಿ, ಬೆದರಿಸಿ ಹಣ ಕಿತ್ತುಕೊಂಡಿದ್ದಾರೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಕಾರಣರಾದ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಹಾಗೂ ಪೇದೆಗಳ ವಿರುದ್ಧ ಹಿರಿಯ ಅಧಿಕಾರಿಗಳು ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

