
ರೌಡಿಸಂಗೆ ಶೂನ್ಯ ಸಹಿಷ್ಣುತೆ: ವಿಶೇಷ ಸ್ಕ್ವಾಡ್‌ಗಳ ರಚನೆಗೆ ಡಿಜಿಪಿ ಡಾ. ಎಂ.ಎ. ಸಲೀಂ ಸೂಚನೆ
ಸಮಾಜಘಾತುಕ ಶಕ್ತಿಗಳು, ರೌಡಿಗಳು ಮತ್ತು ಅಪರಾಧ ಗುಂಪುಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯಾದ್ಯಂತ ರೌಡಿ ನಿಗ್ರಹ ದಳ ರಚನೆಗೆ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕಠಿಣ ನಿರ್ಧಾರವೊಂದನ್ನು ಕೈಗೊಂಡಿದೆ. ಸಮಾಜಘಾತುಕ ಶಕ್ತಿಗಳು, ರೌಡಿಗಳು ಮತ್ತು ಅಪರಾಧ ಗುಂಪುಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ರಾಜ್ಯಾದ್ಯಂತ ರೌಡಿ ನಿಗ್ರಹ ದಳ ರಚನೆಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿಯವರ ಸ್ಪಷ್ಟ ನಿರ್ದೇಶನದ ಮೇರೆಗೆ, ರಾಜ್ಯದ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ಈ ಹೊಸ ಕ್ರಮ ಜಾರಿಗೆ ಬಂದಿದೆ. ರೌಡಿ ಅಂಶಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವುದು, ಅಮಾಯಕರಿಗೆ ಬೆದರಿಕೆ ಹಾಕುವುದು ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ತೊಡಗುವುದು ಹೆಚ್ಚಾಗಿದೆ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಯು ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲು ನಿರ್ಧರಿಸಿದೆ. ರೌಡಿಗಳ ಗುರುತಿಸುವಿಕೆ, ಅವರ ಮೇಲಿನ ನಿಗಾ ಮತ್ತು ಕಾನೂನುಬದ್ಧ ಕ್ರಮಗಳ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಿಸುವುದು ಈ ಆದೇಶದ ಮುಖ್ಯ ಉದ್ದೇಶವಾಗಿದೆ.
ರೌಡಿ ನಿಗ್ರಹ ದಳ ಸಂಯೋಜನೆ ಹಾಗೂ ಕಾರ್ಯವ್ಯಾಪ್ತಿ
ಪೊಲೀಸ್ ಇಲಾಖೆಯ ಈ ಹೊಸ ಯೋಜನೆಯು ವಲಯ ಮತ್ತು ಠಾಣಾ ಮಟ್ಟದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲಿದೆ. ಪ್ರತಿ ವಲಯದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ವಿಶೇಷ ಸ್ಕ್ವಾಡ್ ರಚನೆಯಾಗಲಿದೆ. ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಪ್ರತಿ ಠಾಣೆಯಲ್ಲೂ ಪ್ರತ್ಯೇಕ ಸ್ಕ್ವಾಡ್ ಕಾರ್ಯನಿರ್ವಹಿಸಲಿದೆ. ಈ ಸ್ಕ್ವಾಡ್‌ಗಳ ಸಂಯೋಜನೆಯು ಆಯಾ ಪ್ರದೇಶದ ಅಪರಾಧ ಪರಿಸ್ಥಿತಿ ಮತ್ತು ಸ್ಥಳೀಯ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಉಪ ವಿಭಾಗಾಧಿಕಾರಿ ಅಥವಾ ಸಹಾಯಕ ಪೊಲೀಸ್ ಆಯುಕ್ತರ ನಿರ್ಧಾರದಂತೆ ನಡೆಯಲಿದೆ.
ರೌಡಿ ನಿಗ್ರಹ ದಳಗಳಿಗೆ ಇಲಾಖೆಯು ಸ್ಪಷ್ಟವಾದ ಕಾರ್ಯಯೋಜನೆಗಳನ್ನು ನೀಡಿದೆ. ಹೊಸದಾಗಿ ರೌಡಿ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಗುರುತಿಸಿ ತಕ್ಷಣವೇ ಅವರ ವಿರುದ್ಧ ರೌಡಿ ಶೀಟ್ ತೆರೆಯಬೇಕು. ಈಗಾಗಲೇ ದಾಖಲಾಗಿರುವ ರೌಡಿ ಶೀಟರ್‌ಗಳ ಪ್ರತಿಯೊಂದು ಚಟುವಟಿಕೆಯ ಮೇಲೆ ಸತತ ನಿಗಾ ಇರಿಸಬೇಕು.
ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳ ವಿರುದ್ಧ 'ಆಕ್ಷನ್‌ಬಲ್ ಇಂಟೆಲಿಜೆನ್ಸ್' ಸಂಗ್ರಹಿಸಿ, ಅವುಗಳು ಬೆಳೆಯುವ ಮುನ್ನವೇ ಸದೆಬಡಿಯಬೇಕು. ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆಕ್ಟ್ , ಗುಂಡಾ ಕಾಯ್ದೆ ಹಾಗೂ ಪಿಎಆರ್‌ನಂತಹ ಕಠಿಣ ಕಾಯ್ದೆಗಳನ್ನು ತಕ್ಷಣವೇ ಪ್ರಯೋಗಿಸಬೇಕು. ಬೀಟ್ ಸಿಬ್ಬಂದಿಯ ಮೂಲಕ ಸ್ಥಳೀಯ ಮಾಹಿತಿದಾರರ ಜೊತೆ ನಿಕಟ ಸಂಪರ್ಕವಿಟ್ಟುಕೊಂಡು, ಅಪರಾಧ ಪೀಡಿತ ಪ್ರದೇಶಗಳಲ್ಲಿ ಅನಿರೀಕ್ಷಿತ ದಾಳಿಗಳು ಮತ್ತು ತಪಾಸಣೆಗಳನ್ನು ನಡೆಸಬೇಕು ಎಂದು ತಿಳಿಸಲಾಗಿದೆ.
ಪಾರದರ್ಶಕತೆ - ಮೇಲ್ವಿಚಾರಣೆ
ಈ ಸ್ಕ್ವಾಡ್‌ಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು ಇಲಾಖೆಯು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಸರ್ಕಲ್ ಇನ್ಸ್‌ಪೆಕ್ಟರ್‌ಗಳು ಸ್ಕ್ವಾಡ್‌ನ ಕೆಲಸದ ಪ್ರಗತಿಯನ್ನು ಪರಿಶೀಲಿಸಬೇಕು. ಎಸ್‌ಡಿಪಿಒ ಮತ್ತು ಎಸಿಪಿ ಹಂತದ ಅಧಿಕಾರಿಗಳು ಪ್ರತಿ ತಿಂಗಳು ಅಪರಾಧ ಸಭೆಗಳನ್ನು ನಡೆಸಿ, ಸ್ಕ್ವಾಡ್‌ನ ಸಾಧನೆಗಳನ್ನು ವಿಮರ್ಶಿಸಬೇಕು. ಪ್ರತಿ ಸ್ಕ್ವಾಡ್ ತನ್ನ ಚಟುವಟಿಕೆಗಳಿಗಾಗಿ ಪ್ರತ್ಯೇಕ ರಿಜಿಸ್ಟರ್ ನಿರ್ವಹಿಸಬೇಕು ಮತ್ತು ಮಾಸಿಕ ವರದಿಗಳನ್ನು ಡಿಓ ಪತ್ರದ ಮೂಲಕ ಮೇಲಧಿಕಾರಿಗಳಿಗೆ ಸಲ್ಲಿಸಬೇಕು. ಯಾವುದೇ ರೀತಿಯ ಬೆದರಿಕೆ, ಬಲವಂತದ ಹಣ ವಸೂಲಿ (ಹಫ್ತಾ ವಸೂಲಿ), ಗ್ಯಾಂಗ್‌ವಾರ್ ಅಥವಾ ಸಾರ್ವಜನಿಕ ಶಾಂತಿ ಕದಡುವ ಕೃತ್ಯಗಳನ್ನು ಪೊಲೀಸ್ ಇಲಾಖೆ ಸಹಿಸುವುದಿಲ್ಲ ಎಂದು ಮಹಾನಿರ್ದೇಶಕರು ಎಚ್ಚರಿಸಿದ್ದಾರೆ. ಅಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ರಾಜಕೀಯ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯಬಾರದು ಎಂಬುದು ಇಲಾಖೆಯ ಸ್ಪಷ್ಟ ನಿಲುವು ಆಗಿದೆ.

