
ಹಾಸನದ ಖಾಸಗಿ ಲಾಡ್ಜ್‌ನಲ್ಲಿ ಉಪ ತಹಶೀಲ್ದಾರ್ ಆತ್ಮಹತ್ಯೆ
ಆತ್ಮಹತ್ಯೆಗೂ ಮುನ್ನ 4 ಪುಟಗಳ ಸುದೀರ್ಘ ಡೆತ್‌ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದ್ದು, ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದೆ.
ಹಾಸನ ನಗರದ ಖಾಸಗಿ ವಸತಿಗೃಹದಲ್ಲಿ ಉಪತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಕಂದಾಯ ಅಧಿಕಾರಿ ತಿಮ್ಮಯ್ಯ (52) ಆತ್ಮಹತ್ಯೆ ಮಾಡಿಕೊಂಡವರು. ಹಾಸನದ ಬಿ.ಎಂ.ರಸ್ತೆಯ ಖಾಸಗಿ ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ ಮುನ್ನ 4 ಪುಟಗಳ ಸುದೀರ್ಘ ಡೆತ್‌ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದ್ದು, ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಸಂಚಲನ ಮೂಡಿಸಿದೆ.
ಮೂಲತಃ ಕೊಡಗು ಜಿಲ್ಲೆಯವರಾದ ತಿಮ್ಮಯ್ಯ ಅವರು ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಮೂರು ವರ್ಷಗಳ ಹಿಂದೆ ಹಾಸನದಲ್ಲೇ ಕರ್ತವ್ಯ ನಿರ್ವಹಿಸಿದ್ದ ಇವರು, ಸದ್ಯ ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ಉಪತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಕಾರ್ಯ ನಿಮಿತ್ತ ಹಾಸನಕ್ಕೆ ಬಂದಿದ್ದ ಅವರು ಲಾಡ್ಜ್ ನಲ್ಲಿ ತಂಗಿದ್ದರು. ಶನಿವಾರ ಸಂಜೆಯಾದರೂ ಕೊಠಡಿಯ ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ರಾತ್ರಿ 8.30ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲಿನ ಒಡೆದು ಒಳಪ್ರವೇಶಿಸಿದಾಗ ತಿಮ್ಮಯ್ಯ ಅವರು ಫ್ಯಾನ್ಗೆ ನೇಣುಬಿಗಿದುಕೊಂಡಿರುವುದು ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ ತೀವ್ರ
ಘಟನೆ ನಡೆದ ತಕ್ಷಣ ಹಾಸನ ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
"ಡೆತ್ನೋಟ್ನಲ್ಲಿರುವ ಪ್ರತಿಯೊಂದು ಅಂಶವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ. ಸದ್ಯದಲ್ಲೇ ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದನ್ನು ಬಹಿರಂಗಪಡಿಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ.

