ಮಗನನ್ನು ರಕ್ಷಿಸಲು ಹೋದ ತಾಯಿಯನ್ನೇ ಚೂರಿಯಿಂದ ಇರಿದು ಕೊಂದ ದುಷ್ಕರ್ಮಿಗಳು
x

ದೆಹಲಿಯ ನಜಾಫ್‌ಗಢ್‌ನಲ್ಲಿ ಮಗನನ್ನು ರಕ್ಷಿಸಲು ಹೋದ ಸೀಮಾ ರಿಷಿ ಚೂರಿ ಇರಿತದಿಂದ ಮೃತಪಟ್ಟಿದ್ದಾರೆ. ಪ್ರಕರಣದಲ್ಲಿ ಒಬ್ಬನ ಬಂಧನವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಗನನ್ನು ರಕ್ಷಿಸಲು ಹೋದ ತಾಯಿಯನ್ನೇ ಚೂರಿಯಿಂದ ಇರಿದು ಕೊಂದ ದುಷ್ಕರ್ಮಿಗಳು

ಗಾಯಗೊಂಡಿದ್ದ ಸೀಮಾ ಅವರನ್ನು ಮೊದಲು ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೀನ್ ದಯಾಳ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.


Click the Play button to hear this message in audio format

ಮಗನನ್ನು ಹಲ್ಲೆಯಿಂದ ರಕ್ಷಿಸಲು ಮುಂದಾದ ತಾಯಿಯೊಬ್ಬರು ಚೂರಿ ಇರಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ದೆಹಲಿಯ ನಜಾಫ್‌ಗಢ್ ಪ್ರದೇಶದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸೀಮಾ ರಿಷಿ ಎಂದು ಗುರುತಿಸಲಾಗಿದೆ. ಅಕ್ಟೋಬರ್ 15ರ ತಡರಾತ್ರಿ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಅವರು, ಚಿಕಿತ್ಸೆ ಫಲಿಸದೆ ಅಕ್ಟೋಬರ್ 17ರಂದು ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ಲಾಂಬಾ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಮಹಿಳೆಯ ಪುತ್ರ ಧ್ರುವ್ ರಿಷಿ ನೀಡಿರುವ ಮಾಹಿತಿಯ ಪ್ರಕಾರ, ಅವರು ಸ್ನೇಹಿತರೊಂದಿಗೆ ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ದಾರಿ ತಡೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು, ಅದು ಹೊಡೆದಾಟಕ್ಕೆ ತಿರುಗಿದೆ. ಆರೋಪಿಗಳು ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ನೇಹಿತರೊಬ್ಬರು ಮನೆಗೆ ತೆರಳಿ ತಾಯಿಗೆ ವಿಷಯ ತಿಳಿಸಿದ್ದಾರೆ. ಮಗನನ್ನು ರಕ್ಷಿಸಲು ಸೀಮಾ ರಿಷಿ ಸ್ಥಳಕ್ಕೆ ತೆರಳಿದಾಗ, ಅಷ್ಟರಲ್ಲೇ ಧ್ರುವ್ ಅಲ್ಲಿಂದ ತಪ್ಪಿಸಿಕೊಂಡಿದ್ದರು ಎಂದು ವರದಿಯಾಗಿದೆ.

ಪೋಷಕರ ಮೇಲೂ ಚೂರಿಯಿಂದ ಹಲ್ಲೆ

ಘಟನಾ ಸ್ಥಳಕ್ಕೆ ಬಂದ ಸೀಮಾ ರಿಷಿ ಮತ್ತು ಅವರ ಪತಿ ಕಮಲ್ ರಿಷಿ ಮೇಲೂ ಚೂರಿಯಿಂದ ಹಲ್ಲೆ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಗಾಯಗೊಂಡಿದ್ದ ಸೀಮಾ ಅವರನ್ನು ಮೊದಲು ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೀನ್ ದಯಾಳ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಒಬ್ಬ ಆರೋಪಿ ಬಂಧನ

ಕಮಲ್ ರಿಷಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಕ್ಟೋಬರ್ 16ರಂದು ಸತೀಶ್ ಲಾಂಬಾನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಸತೀಶ್ ಲಾಂಬಾ ಕೂಡ ಗಾಯಗೊಂಡಿದ್ದು, ಆತನ ಹೇಳಿಕೆ ಹಾಗೂ ವೈದ್ಯಕೀಯ ವರದಿಯ ಆಧಾರದ ಮೇಲೆ ಧ್ರುವ್ ರಿಷಿ ಮತ್ತು ಅವರ ಸ್ನೇಹಿತರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇತರ ಇಬ್ಬರು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More
Next Story