12ನೇ ತರಗತಿಯಲ್ಲಿ ಶೇ.90 ಅಂಕ, ಜೂಜಿನ ಚಟಕ್ಕೆ ಬಿದ್ದು ಅಂಕಪಟ್ಟಿಯನ್ನೇ ಅಡವಿಟ್ಟಿದ್ದ: ದಿಲ್ಲಿ ಕೊಲೆ ಆರೋಪಿಯ ಕರಾಳ ಮುಖ!
x
ರಾಹುಲ್ ಮೀನಾ.

12ನೇ ತರಗತಿಯಲ್ಲಿ ಶೇ.90 ಅಂಕ, ಜೂಜಿನ ಚಟಕ್ಕೆ ಬಿದ್ದು ಅಂಕಪಟ್ಟಿಯನ್ನೇ ಅಡವಿಟ್ಟಿದ್ದ: ದಿಲ್ಲಿ ಕೊಲೆ ಆರೋಪಿಯ ಕರಾಳ ಮುಖ!

ಆನ್‌ಲೈನ್ ಜೂಜಿನ ದಾಸನಾಗಿ, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಈತ ಹಣಕ್ಕಾಗಿ ಎಂತಹ ಹೇಯ ಕೃತ್ಯಕ್ಕೂ ಹೇಸದ ಕ್ರಿಮಿನಲ್ ಆಗಿ ಬದಲಾಗಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.


Click the Play button to hear this message in audio format

ದೆಹಲಿಯಲ್ಲಿ ಐಆರ್‌ಎಸ್ ಅಧಿಕಾರಿಯ 22 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿದ ಆರೋಪಿ ರಾಹುಲ್ ಮೀನಾ ಕುರಿತು ಹಲವು ಬೆಚ್ಚಿಬೀಳಿಸುವ ಮಾಹಿತಿಗಳು ಬಹಿರಂಗವಾಗಿವೆ. ಕೇವಲ 12 ಗಂಟೆಗಳ ಅಂತರದಲ್ಲಿ ಎರಡು ಕಡೆ ಅತ್ಯಾಚಾರವೆಸಗಿದ ಈ ಪಾತಕಿ, ಒಂದು ಕಾಲದಲ್ಲಿ ಓದಿನಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ.

ಆನ್‌ಲೈನ್ ಜೂಜಿನ ದಾಸನಾಗಿ, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಈತ ಹಣಕ್ಕಾಗಿ ಎಂತಹ ಹೇಯ ಕೃತ್ಯಕ್ಕೂ ಹೇಸದ ಕ್ರಿಮಿನಲ್ ಆಗಿ ಬದಲಾಗಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಓದಿನಲ್ಲಿ ಮುಂದು, ಜೂಜಿನಲ್ಲಿಯೂ ಮುಂದು!

ಮೂಲತಃ ರಾಜಸ್ಥಾನದ ಅಲ್ವಾರ್ ನಿವಾಸಿಯಾಗಿರುವ 23 ವರ್ಷದ ರಾಹುಲ್ ಮೀನಾ, 10ನೇ ತರಗತಿಯಲ್ಲಿ ಶೇ.73 ಹಾಗೂ 12ನೇ ತರಗತಿಯ ವಿಜ್ಞಾನ ವಿಭಾಗದಲ್ಲಿ ಶೇ.90ರಷ್ಟು ಅಂಕ ಪಡೆದಿದ್ದ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ. ಆದರೆ, ಇದೇ ಸಮಯದಲ್ಲಿ ಆತನಿಗೆ 'ತೀನ್ ಪತ್ತಿ', 'ಲುಡೋ' ಸೇರಿದಂತೆ ಆನ್‌ಲೈನ್ ಜೂಜಿನ ಗೀಳು ಅಂಟಿಕೊಂಡಿತ್ತು. ಮೊಬೈಲ್‌ನಲ್ಲಿ ಗೇಮ್ ಆಡುತ್ತಾ ಹಣ ಕಳೆದುಕೊಳ್ಳಲು ಶುರುಮಾಡಿದ. ಸಾಲದ ಸುಳಿಗೆ ಸಿಲುಕಿದ ಈತ, ಕೊನೆಗೆ ಹಣಕ್ಕಾಗಿ ತನ್ನದೇ 12ನೇ ತರಗತಿಯ ಅಂಕಪಟ್ಟಿ, ಮೊಬೈಲ್, ಬೈಕ್ ಮತ್ತು ಮನೆಯ ವಸ್ತುಗಳನ್ನೂ ಸಹ ಅಡಮಾನ ಇಟ್ಟಿದ್ದ ಎಂದು ಆತನ ಕುಟುಂಬಸ್ಥರೇ ತಿಳಿಸಿದ್ದಾರೆ.

ಹಣದಾಸೆಗೆ ದಿಲ್ಲಿಗೆ ಬಂದು ಕೆಲಸ ಕಳೆದುಕೊಂಡಿದ್ದ!

ತಂದೆಯ ಪರಿಚಯದ ಮೂಲಕ ದೆಹಲಿಗೆ ಬಂದಿದ್ದ ರಾಹುಲ್, ಕಳೆದೆಂಟು ತಿಂಗಳುಗಳಿಂದ ಸೌತ್ ದೆಹಲಿಯ ಕೈಲಾಶ್ ಹಿಲ್ಸ್‌ನಲ್ಲಿರುವ ಐಆರ್‌ಎಸ್ ಅಧಿಕಾರಿ ದಿನೇಶ್ ಗುಪ್ತಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ದೆಹಲಿಗೆ ಬಂದ ಮೇಲೂ ಆತನ ಆನ್‌ಲೈನ್ ಜೂಜು ನಿಂತಿರಲಿಲ್ಲ. ಔಷಧಿ ತರಲು ಕೊಟ್ಟ ಹಣದಲ್ಲಿಯೇ ಜೂಜಾಡುತ್ತಿದ್ದ ಈತ, ಮೆಡಿಕಲ್ ಶಾಪ್‌ಗಳಲ್ಲಿ ಸಾಲ ಮಾಡಿ, ಮನೆಯವರಿಗೆ ಸುಳ್ಳು ಹೇಳುತ್ತಿದ್ದ. ಈ ವಿಚಾರ ತಿಳಿದು, ಆತನನ್ನು ಒಂದೂವರೆ ತಿಂಗಳ ಹಿಂದಷ್ಟೇ ಕೆಲಸದಿಂದ ವಜಾಗೊಳಿಸಲಾಗಿತ್ತು.

ಆದರೂ ಜೂಜು ಮುಂದುವರಿಸಿದ್ದ ರಾಹುಲ್, ಇತ್ತೀಚೆಗಷ್ಟೇ 5 ಲಕ್ಷ ರೂ. ಗೆದ್ದಿದ್ದ. ಆದರೆ ಬಳಿಕ ಸ್ನೇಹಿತರ ಅಕೌಂಟ್ ಮೂಲಕ ಆಡಿ ಆ ಹಣವನ್ನೂ ಕಳೆದುಕೊಂಡು ತೀವ್ರ ಸಾಲದ ಸುಳಿಗೆ ಸಿಲುಕಿದ್ದ. ಸಾಲಗಾರರ ಕಾಟ ಹೆಚ್ಚಾದಾಗ, ಸುಲಭವಾಗಿ ಹಣ ಸಂಪರ್ಕಿಸಲು ತನ್ನ ಹಳೆಯ ಮಾಲೀಕರ ಮನೆಗೆ ಕನ್ನ ಹಾಕಲು ಸಂಚು ರೂಪಿಸಿದ್ದ.

12 ಗಂಟೆ, 2 ಅತ್ಯಾಚಾರ, 1 ಕೊಲೆ!

ದೆಹಲಿಗೆ ಬರುವ ಮುನ್ನ, ಅಂದರೆ ಏಪ್ರಿಲ್ 21ರ ರಾತ್ರಿ ಸುಮಾರು 10.30ರ ವೇಳೆಗೆ ರಾಜಸ್ಥಾನದ ಅಲ್ವಾರ್‌ನಲ್ಲಿ ನೆರೆಹೊರೆಯ ಮನೆಯ ಮಹಿಳೆಯೊಬ್ಬರ ಮೇಲೆ ಈತ ಅತ್ಯಾಚಾರ ಎಸಗಿದ್ದ. ನಂತರ ಅಲ್ಲಿಂದ ಸುಮಾರು 200 ಕಿ.ಮೀ ಪ್ರಯಾಣ ಬೆಳೆಸಿ ಏ.22ರ ಬೆಳಿಗ್ಗೆ 6.30ಕ್ಕೆ ದೆಹಲಿ ತಲುಪಿದ್ದ. ಐಆರ್‌ಎಸ್ ಅಧಿಕಾರಿಯ ಮನೆಯ ಡಿಜಿಟಲ್ ಲಾಕ್ ಬಗ್ಗೆ ತಿಳಿದಿದ್ದ ಈತ, ಕದ್ದು ಇಡಲಾಗಿದ್ದ ಬಿಡಿ ಕೀ ಬಳಸಿ ಮನೆ ಪ್ರವೇಶಿಸಿದ್ದ.

ರೂಫ್‌ಟಾಪ್‌ನಲ್ಲಿ ಯುಪಿಎಸ್‌ಸಿ (UPSC) ಪರೀಕ್ಷೆಗೆ ಓದುತ್ತಿದ್ದ 22 ವರ್ಷದ ಯುವತಿಯ ಮೇಲೆ ಲ್ಯಾಂಬ್ ಹಾಗೂ ಚಾರ್ಜಿಂಗ್ ಕೇಬಲ್‌ನಿಂದ ಹಲ್ಲೆ ನಡೆಸಿ ಪ್ರಜ್ಞೆತಪ್ಪಿಸಿದ. ಬಳಿಕ ಅವಳ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಕೆಳಮಹಡಿಗೆ ಎಳೆತಂದು, ಲಾಕರ್ ಒಡೆಯಲು ಸ್ಕ್ರೂಡ್ರೈವರ್ ಬಳಸಿ, ಸುಮಾರು 2.5 ಲಕ್ಷ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದ. ರಕ್ತಸಿಕ್ತವಾಗಿದ್ದ ತನ್ನ ಬಟ್ಟೆಗಳನ್ನು ಬದಲಾಯಿಸಿ, ಯುವತಿಯ ಸಹೋದರನ ಬಟ್ಟೆ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದ.

ಯಾವುದೇ ಪಶ್ಚಾತ್ತಾಪವಿಲ್ಲದ ಕ್ರೂರಿ!

ದ್ವಾರಕಾ ಬಳಿ ಹೋಟೆಲ್‌ನಲ್ಲಿ ಅಡಗಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, "ಅವಳು ಹಣ ಕೊಟ್ಟಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ" ಎಂದು ಹೇಳಿರುವ ಆರೋಪಿ ರಾಹುಲ್ ಮೀನಾ ಮುಖದಲ್ಲಿ ಕಿಂಚಿತ್ತೂ ಪಶ್ಚಾತ್ತಾಪದ ಭಾವನೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆನ್‌ಲೈನ್ ಜೂಜಿನ ಚಟಕ್ಕೆ ಬಿದ್ದು ಅಮಾಯಕ ಯುವತಿಯನ್ನು ಬಲಿಪಡೆದ ಈತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆತನ ಕುಟುಂಬಸ್ಥರೇ ಆಗ್ರಹಿಸಿದ್ದಾರೆ.

Read More
Next Story