
ಈ ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ, ಕೊಳೆತ ಶವ ತಿಂದ ಬೀದಿ ನಾಯಿಗಳು- 3 ಅಪ್ರಾಪ್ತರು ಸೇರಿ ನಾಲ್ವರ ಬಂಧನ
ಪೊಲೀಸರ ಪ್ರಕಾರ, ಬಾಲಕಿ ಆರೋಪಿಗಳೊಂದಿಗೆ ಟೆಂಪೋದಲ್ಲಿ ಮದ್ಯ ಸೇವಿಸಿದ್ದಳು. ಈ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ರಾಜಧಾನಿ ದೆಹಲಿಯ ಹೊರವಲಯದ ಸ್ವರೂಪ್ ನಗರದಲ್ಲಿ 17 ವರ್ಷದ ಬಾಲಕಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಬಾಲಕಿ ಹಾಗೂ ಆರೋಪಿಗಳು ಪರಸ್ಪರ ಪರಿಚಿತರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿ ಆರೋಪಿಗಳೊಂದಿಗೆ ಟೆಂಪೋದಲ್ಲಿ ಮದ್ಯ ಸೇವಿಸಿದ್ದಳು. ಈ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಬಳಿಕ ಶವವನ್ನು ಸ್ವರೂಪ್ ನಗರದ ಹೊಲವೊಂದರಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 13ರಂದು ಕುಶಕ್ ರಸ್ತೆಯ ಜೈಪಾಲ್ ರಾಣಾ ಅವರ ಹೊಲದ ಸಮೀಪ ಬಾಲಕಿಯ ಕೊಳೆತ ಶವ ಪತ್ತೆಯಾಗಿತ್ತು. ಗುರುತು ಪತ್ತೆಗೂ ಸಾಧ್ಯವಾದದಿರುವ ರೀತಿಯಲ್ಲಿ ಶವ ಕೊಳೆತು ಹೋಗಿತ್ತು. ಅಷ್ಟೇ ಅಲ್ಲದೇ ಬೀದಿ ನಾಯಿಗಳು ಶವದ ಭಾಗವನ್ನು ತಿಂದು ಹಾಕಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳ ಪರಿಶೀಲನೆ
ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳಿಲ್ಲದ ಹಿನ್ನೆಲೆಯಲ್ಲಿ ಪೊಲೀಸರು ಬಿಎನ್‌ಎಸ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಆರೋಪಿಗಳ ಸುಳಿವು ಪತ್ತೆಹಚ್ಚಲು ಘಟನೆ ನಡೆದ ಪ್ರದೇಶ ಹಾಗೂ ಸುತ್ತಮುತ್ತಲಿನ ಮಾರ್ಗಗಳ 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಯಿತು.
ತನಿಖೆ ವೇಳೆ ಘಟನೆ ನಡೆದ ಸಮಯದಲ್ಲಿ ಸ್ಥಳದ ಸಮೀಪ ಸಂಚರಿಸಿದ್ದ ಟೆಂಪೋವೊಂದು ಪೊಲೀಸರ ಗಮನಕ್ಕೆ ಬಂದಿದೆ. ಕತ್ತಲಿನ ಕಾರಣ ಅದರ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸದಿದ್ದರೂ, ವಿವಿಧ ಸಿಸಿಟಿವಿ ಕ್ಯಾಮೆರಾಗಳಲ್ಲಿನ ಚಲನವಲನವನ್ನು ಆಧರಿಸಿ ಪೊಲೀಸರು ಟೆಂಪೋವನ್ನು ಪತ್ತೆಹಚ್ಚಿದ್ದಾರೆ.
ಮೂವರು ಅಪ್ರಾಪ್ತರು ಸೇರಿ ನಾಲ್ವರ ಬಂಧನ
ಸೆಪ್ಟೆಂಬರ್ 15 ಮತ್ತು 16ರ ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ವರೂಪ್ ನಗರದ ಖಡ್ಡಾ ಕಾಲೋನಿಯಲ್ಲಿ ಶಂಕಿತ ಟೆಂಪೋ ಪತ್ತೆಯಾಗಿದೆ. ಅದರ ಚಾಲಕನನ್ನು ವಿಚಾರಣೆ ನಡೆಸಿದ ಬಳಿಕ ತನಿಖೆ ಮುಂದುವರಿದು ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಶಿವಂ ಅಲಿಯಾಸ್ ಸುದಾಮಾ ಅಲಿಯಾಸ್ ಚುಚು ಎಂಬ ವಯಸ್ಕ ಆರೋಪಿ ಹಾಗೂ 16 ಮತ್ತು 17 ವರ್ಷದ ಮೂವರು ಅಪ್ರಾಪ್ತರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಎರಡು ಚಾಕುಗಳು, ಆರೋಪಿಗಳು ಧರಿಸಿದ್ದರೆನ್ನಲಾದ ಬಟ್ಟೆಗಳು ಹಾಗೂ ಟೆಂಪೋವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದ್ದು, ಆರೋಪಿಗಳ ಪಾತ್ರ ಹಾಗೂ ವಿಧಿವಿಜ್ಞಾನ ಮತ್ತು ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

