ಪಾಕ್ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಉತ್ತರ ಪ್ರದೇಶದ ಶಂಕಿತ ಯುವಕನ ಬಂಧನ
x

ಪಾಕ್ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಉತ್ತರ ಪ್ರದೇಶದ ಶಂಕಿತ ಯುವಕನ ಬಂಧನ

ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಪ್ರಚೋದಿಸಿ, ದೇಶವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುವ ಜಾಲದ ಭಾಗವಾಗಿ ಈತ ಕೆಲಸ ಮಾಡುತ್ತಿದ್ದನೇ ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Click the Play button to hear this message in audio format

ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ನಿಟ್ಟಿನಲ್ಲಿ ಸಂಚು ರೂಪಿಸುತ್ತಿದ್ದ ಉಗ್ರ ಸಂಘಟನೆಗಳ ಜಾಲವೊಂದು ಬಯಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನೆಲೆಸಿದ್ದ ಉತ್ತರ ಪ್ರದೇಶ ಮೂಲದ ಯುವಕನೊಬ್ಬ ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಶಹಜಾನ್‌ಪುರದ ನಿವಾಸಿ ಸುಯೇಲ್ (20) ಎಂದು ಗುರುತಿಸಲಾಗಿದೆ. ಈತ ಉದ್ಯೋಗ ಅರಸಿ ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ಬಂದಿದ್ದನು. ಇಲ್ಲಿನ ಒಂದು ಕಾರ್ಖಾನೆಯಲ್ಲಿ ಪೇಂಟಿಂಗ್ ಕೆಲಸಗಾರನಾಗಿ ದುಡಿಯುತ್ತಿದ್ದ ಸುಯೇಲ್, ಹೊರನೋಟಕ್ಕೆ ಸಾಮಾನ್ಯ ಕಾರ್ಮಿಕನಂತೆ ಕಂಡುಬರುತ್ತಿದ್ದರೂ, ಆತನ ಒಳಗಿನ ಚಟುವಟಿಕೆಗಳು ಮಾತ್ರ ದೇಶವಿರೋಧಿಯಾಗಿದ್ದವು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನೀಡಿದ ಖಚಿತ ಮಾಹಿತಿ ಮತ್ತು ಕೇಂದ್ರ ಗುಪ್ತಚರ ಇಲಾಖೆಯ ಎಚ್ಚರಿಕೆಯ ಮೇರೆಗೆ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದ ಪೊಲೀಸ್ ತಂಡವು ನಸುಕಿನ ಜಾವ ಕಾರ್ಯಾಚರಣೆ ನಡೆಸಿ ಸುಯೇಲ್‌ನನ್ನು ವಶಕ್ಕೆ ಪಡೆಯಿತು.

ಇನ್‌ಸ್ಟಾಗ್ರಾಮ್ ಮೂಲಕ ಉಗ್ರರೊಂದಿಗೆ ಸಂಪರ್ಕ

ಪ್ರಾಥಮಿಕ ತನಿಖೆಯಲ್ಲಿ, ಸುಯೇಲ್ ಸೋಷಿಯಲ್ ಇನ್‌ಸ್ಟಾಗ್ರಾಮ್ ಮೂಲಕ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದನು ಎಂಬುದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಪ್ರಚೋದಿಸಿ, ದೇಶವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುವ ಜಾಲದ ಭಾಗವಾಗಿ ಈತ ಕೆಲಸ ಮಾಡುತ್ತಿದ್ದನೇ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ. ಈ ಬಂಧನವು ಇತ್ತೀಚೆಗೆ ತುಮಕೂರಿನಲ್ಲಿ ದಾಖಲಾದ ಒಂದು ಪ್ರಮುಖ ಪ್ರಕರಣದ ಮುಂದುವರಿದ ಭಾಗವಾಗಿದೆ. ಒಂದು ತಿಂಗಳ ಹಿಂದೆ, ತುಮಕೂರು ಟೌನ್ ಪೊಲೀಸರು ದಾವಣಗೆರೆ ಮೂಲದ ಜಮೀರ್ ಖಾನ್ ಮತ್ತು ತುಮಕೂರಿನ ಅಲ್ಲಾಭಕ್ಷಿ ಎಂಬುವವರನ್ನು ಬಂಧಿಸಿದ್ದರು. ಅವರಿಬ್ಬರ ವಿಚಾರಣೆ ವೇಳೆ ಪಡೆದ ಮಾಹಿತಿ ಮತ್ತು ಅವರ ಡಿಜಿಟಲ್ ಸಂಪರ್ಕಗಳನ್ನು ಪರಿಶೀಲಿಸಿದಾಗ, ಸುಯೇಲ್‌ನ ಹೆಸರು ಬೆಳಕಿಗೆ ಬಂದಿತ್ತು. ಅಂತಾರಾಜ್ಯ ಉಗ್ರ ಸಂಪರ್ಕ ಜಾಲದ ಜಾಡು ಹಿಡಿದ ತುಮಕೂರು ಪೊಲೀಸರು, ಈ ಪ್ರಕರಣದಲ್ಲಿ ಸುಯೇಲ್ ಮೂರನೇ ವ್ಯಕ್ತಿ ಎಂದು ಖಚಿತಪಡಿಸಿಕೊಂಡಿದ್ದಾರೆ.

ಪೊಲೀಸರ ಮುಂದಿನ ಹೆಜ್ಜೆ

ದಾವಣಗೆರೆ ಪೊಲೀಸರು ಬಂಧಿತ ಸುಯೇಲ್‌ನನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದ ನಂತರ, ಹೆಚ್ಚಿನ ತನಿಖೆಗಾಗಿ ತುಮಕೂರು ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ತುಮಕೂರು ಪೊಲೀಸರು ಈ ಜಾಲದ ಮೂಲ ಬೇರುಗಳನ್ನು ಹುಡುಕಲು ಮತ್ತು ಸುಯೇಲ್‌ನೊಂದಿಗೆ ಇನ್ಯಾರೆಲ್ಲಾ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈತ ಕೇವಲ ವೈಯಕ್ತಿಕವಾಗಿ ಸಂಪರ್ಕದಲ್ಲಿದ್ದನಾ ಅಥವಾ ಸ್ಥಳೀಯವಾಗಿ ಇನ್ನಷ್ಟು ಜನರನ್ನು ಈ ಜಾಲಕ್ಕೆ ಸೇರಿಸುವ ಕೆಲಸ ಮಾಡುತ್ತಿದ್ದನಾ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಕರ್ನಾಟಕದ ಕೈಗಾರಿಕಾ ಪ್ರದೇಶಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಹೊರರಾಜ್ಯದ ವ್ಯಕ್ತಿಗಳು ಕೆಲಸದ ನೆಪದಲ್ಲಿ ಬಂದು, ಇಂತಹ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ರಾಜ್ಯದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. ಎನ್‌ಐಎ ಮತ್ತು ಗುಪ್ತಚರ ಇಲಾಖೆಯು ಇದೀಗ ರಾಜ್ಯದಾದ್ಯಂತ ಕೆಲಸ ಮಾಡುತ್ತಿರುವ ವಲಸಿಗ ಕಾರ್ಮಿಕರ ಮತ್ತು ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇರಿಸಿದೆ.

ದಾವಣಗೆರೆಯಂತಹ ಶಾಂತಿಯುತ ನಗರದಲ್ಲಿ ಉಗ್ರ ಸಂಪರ್ಕದ ಪ್ರಕರಣ ಬೆಳಕಿಗೆ ಬಂದಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಪೇಂಟಿಂಗ್ ಕೆಲಸದ ಮುಖವಾಡ ಹಾಕಿಕೊಂಡು ಉಗ್ರರೊಂದಿಗೆ ಚಾಟಿಂಗ್ ಮಾಡುತ್ತಿದ್ದ ಯುವಕನ ಕೃತ್ಯ, ಸಮಾಜದ ಶಾಂತಿ ಕದಡುವ ಪ್ರಯತ್ನವಾಗಿದೆ. ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಮತ್ತೊಂದು ಸಂಭವನೀಯ ಅನಾಹುತ ತಪ್ಪಿದಂತಾಗಿದೆ.

Read More
Next Story