
ಸಿ.ಜೆ. ರಾಯ್ ಆತ್ಮಹತ್ಯೆ : ಐಟಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾದರೆ ಮುಂದೇನು?
ಸಿ.ಜೆ.ರಾಯ್ ಕುಟುಂಬಸ್ಥರು ಐಟಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ದೂರು ನೀಡಿದರೆ ಕೇರಳ ಐಟಿ ತನಿಖಾಧಿಕಾರಿಗಳು ಮತ್ತು ರಾಯ್ ಕುಟುಂಬಸ್ಥರ ನಡುವೆ ಕಾನೂನು ಸಮರಕ್ಕೆ ನಾಂದಿ ಹಾಡಲಿದೆ.
ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ.ರಾಯ್ ಅನಿರೀಕ್ಷಿತ ಅಂತ್ಯವು ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಪ್ರಸ್ತುತ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಒಂದು ವೇಳೆ ಸಿ.ಜೆ.ರಾಯ್ ಕುಟುಂಬಸ್ಥರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದರೆ ಕೇರಳ ಐಟಿ ಅಧಿಕಾರಿಗಳು ಕಾನೂನು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ.
ಸಿ.ಜೆ. ರಾಯ್ ಸಾವಿನ ಬಳಿಕ ಸಹೋದರ ಸಿ.ಜೆ.ಜೊಸೆಫ್, ಐಟಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಸಹೋದರನ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ದೂರಿದ್ದಾರೆ. ಆದರೆ, ಅಧಿಕೃತವಾಗಿ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಸಿ.ಜೆ.ರಾಯ್ ಕುಟುಂಬಸ್ಥರು ಐಟಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ದೂರು ನೀಡಿದರೆ ಪೊಲೀಸರು ತನಿಖೆ ಕೈಗೊಳ್ಳಲು ಸಾಧ್ಯ. ತನಿಖೆ ಕೈಗೆತ್ತಿಗೊಂಡರೆ ಐಟಿ ತನಿಖಾಧಿಕಾರಿಗಳು ಮತ್ತು ರಾಯ್ ಕುಟುಂಬಸ್ಥರ ನಡುವೆ ಕಾನೂನು ಸಮರಕ್ಕೆ ನಾಂದಿ ಹಾಡಲಿದೆ. ರಾಜ್ಯ ಸರ್ಕಾರವು ಎಸ್‌ಐಟಿ ತನಿಖೆ ಕೈಗೆತ್ತಿಕೊಂಡಿದೆ. ಆದರೆ, ಆತ್ಮಹತ್ಯೆ ಪ್ರಕರಣದಡಿಯಲ್ಲಿಯೇ ವಿಚಾರಣೆ ನಡೆಸಬೇಕಾಗುತ್ತದೆ. ಮುಂದಿನ ದಿನದಲ್ಲಿ ಎಸ್‌ಐಟಿ ಅಧಿಕಾರಿಗಳ ಮುಂದೆ ಕುಟುಂಬಸ್ಥರು ನೀಡುವ ಹೇಳಿಕೆಯ ಆಧಾರದ ಮೇಲೆ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ಸಿ.ಜೆ. ರಾಯ್ ಕುಟುಂಬಸ್ಥರು ಐಟಿ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿದರೆ ಸೆಕ್ಷನ್ 306 ಪ್ರಕಾರ, ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಪ್ರಚೋದಿಸಿದರೆ ಅದು ಗಂಭೀರ ಅಪರಾಧವಾಗುತ್ತದೆ. ಸತತ ವಿಚಾರಣೆ, ಬೆದರಿಕೆ ಅಥವಾ ಗೌರವಕ್ಕೆ ಧಕ್ಕೆ ತರುವಂತಹ ನಡೆಗಳಿಂದ ರಾಯ್ ಅವರು ಖಿನ್ನತೆಗೆ ಜಾರಿದ್ದರು ಎಂಬ ಮಾತುಗಳು ಕೇಳಿಬಂದಿವೆ.
ಐಟಿ ಅಧಿಕಾರಿಗಳು ಕೇವಲ ತೆರಿಗೆ ವಂಚನೆಯನ್ನಷ್ಟೇ ಅಲ್ಲದೆ, ಜಾರಿ ನಿರ್ದೇಶನಾಲಯದ ಮೂಲಕ ಬಂಧನವಾಗುವ ಭಯವನ್ನು ಹುಟ್ಟಿಸಿರುವ ಸಾಧ್ಯತೆಯೂ ಇರುಬಹುದು. ದಶಕಗಳ ಕಾಲ ಕಟ್ಟಿದ ಸಾಮ್ರಾಜ್ಯ ಮತ್ತು ಗಳಿಸಿದ ಗೌರವ ಐಟಿ ದಾಳಿಯಿಂದಾಗಿ ಮಣ್ಣುಪಾಲಾಗುತ್ತಿದೆ ಎಂಬ ಅತಿಯಾದ ಒತ್ತಡವನ್ನು ಅಧಿಕಾರಿಗಳು ನಿರ್ಮಿಸಿದ್ದರು ಸೇರಿದಂತೆ ಇತರೆ ಅಂಶಗಳನ್ನು ಮುಂದಿಟ್ಟುಕೊಂಡು ಕುಟುಂಬವು ಎಫ್‌ಐಆರ್ ದಾಖಲಿಸಿದರೆ, ಐಟಿ ಅಧಿಕಾರಿಗಳಿಗೆ ಸಂಕಷ್ಟದ ಪರಿಸ್ಥಿತಿಯನ್ನು ನಿರ್ಮಿಸಲಿದೆ ಎಂದು ಹೇಳಲಾಗಿದೆ.
ಐಟಿ ಅಧಿಕಾರಿಗಳ ಮುಂದಿರುವ ಕಾನೂನು ಸಂಕಷ್ಟ, ರಕ್ಷಣೆ
ಒಮ್ಮೆ ಐಟಿ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾದರೆ, ಪೊಲೀಸರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಆತ್ಮಹತ್ಯೆಗೆ ಪ್ರಚೋದನೆ ನೀಡುವುದು ಗಂಭೀರ ಸ್ವರೂಪದ ಪ್ರಕರಣವಾಗಿರುವುದರಿಂದ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇರುತ್ತದೆ. ಆದರೆ, ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರಿ ನೌಕರರು ಆಗಿರುವುದರಿಂದ ಸಂವಿಧಾನಾತ್ಮಕ ರಕ್ಷಣೆ ಸಿಗಲಿದೆ. ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕೃತ ಕರ್ತವ್ಯವನ್ನು ನಿರ್ವಹಿಸುವಾಗ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರದ ಪೂರ್ವಾನುಮತಿ ಬೇಕಾಗುತ್ತದೆ. ಅಧಿಕಾರಿಗಳು ಕೇವಲ ತೆರಿಗೆ ವಂಚನೆಯ ತನಿಖೆ ನಡೆಸುತ್ತಿದ್ದೇವು. ಅದು ನಮ್ಮ ಕರ್ತವ್ಯ ಎಂದು ಹೇಳಬಹುದು. ಅಲ್ಲದೇ, ಪ್ರಕರಣ ದಾಖಲಾದ ತಕ್ಷಣ ಐಟಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇರಲಿದೆ. ಅವರು ಎಫ್‌ಐಆರ್ ರದ್ದುಗೊಳಿಸಲು ಅಥವಾ ತನಿಖೆಗೆ ತಡೆಯಾಜ್ಞೆ ತರಲು ಅರ್ಜಿ ಸಲ್ಲಿಸಬಹುದಾಗಿದೆ.
ಕೊಚ್ಚಿಯಲ್ಲಿ ನಡೆದ ನೂರಾರು ಫ್ಲ್ಯಾಟ್ ಮಾರಾಟದಲ್ಲಿ ಸ್ಪಷ್ಟವಾಗಿ ತೆರಿಗೆ ವಂಚನೆಯ ಸುಳಿವು ಸಿಕ್ಕಿದ್ದು, ದುಬೈ ಪ್ರಾಜೆಕ್ಟ್‌ನಲ್ಲಿ ಬ್ಯಾಂಕ್ ಸಾಲವಿಲ್ಲದೆ ಹಣ ಹೂಡಿಕೆಯಾಗಿರುವುದು ಸಂಶಯಾಸ್ಪದವಾಗಿತ್ತು. ಹಾಗಾಗಿ, ತನಿಖೆ ನಡೆಸಿದ್ದು ಕಾನೂನುಬದ್ಧವಾಗಿತ್ತು. ಆತ್ಮಹತ್ಯೆಗೆ ಪ್ರಚೋದನೆ ನೀಡಲು ಅಧಿಕಾರಿಗಳಿಗೆ ಯಾವುದೇ ದುರುದ್ದೇಶ ಇರಲಿಲ್ಲ. ತನಿಖೆ ಎದುರಿಸುವುದು ಪ್ರತಿ ನಾಗರಿಕನ ಕರ್ತವ್ಯ, ಅದನ್ನು ಒತ್ತಡ ಎಂದು ಕರೆಯಲಾಗದು. ಒಂದು ವೇಳೆ ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ, ಭವಿಷ್ಯದಲ್ಲಿ ಯಾವುದೇ ತನಿಖಾಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದು ಭ್ರಷ್ಟಾಚಾರ ಮತ್ತು ತೆರಿಗೆ ವಂಚನೆಯ ವಿರುದ್ಧದ ಹೋರಾಟವನ್ನು ಹತ್ತಿಕ್ಕಿದಂತಾಗುತ್ತದೆ ಎಂದು ನ್ಯಾಯಾಲಯದಲ್ಲಿ ಐಟಿ ಇಲಾಖೆಯ ಪರ ವಕೀಲರು ವಾದ ಮಂಡಿಸಬಹುದಾಗಿದೆ ಎಂದು ಹೇಳಲಾಗಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ವಕೀಲರಾದ ಸ್ವಾಮಿನಿ ಗಣೇಶ್, ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಬಹುದು. ಆದರೆ, ಮುಂದೆ ತನಿಖಾಧಿಕಾರಿಗೆ ಗಂಭೀರತೆ ಆಧಾರದ ಮೇಲೆ ಬಿಟ್ಟಿರುತ್ತದೆ. ಕಾನೂನಿನ ದೃಷ್ಟಿಯಲ್ಲಿ ಒಬ್ಬ ತನಿಖಾಧಿಕಾರಿಯು ಪ್ರಶ್ನೆಗಳನ್ನು ಕೇಳುವುದು ಅಥವಾ ದಾಖಲೆಗಳನ್ನು ಕೇಳುವುದು ಕಿರುಕುಳವಾಗುವುದಿಲ್ಲ. ವಿಚಾರಣೆಯ ಸಂದರ್ಭದಲ್ಲಿ ವೈಯಕ್ತಿಕ ನಿಂದನೆ, ಕಾನೂನುಬಾಹಿರವಾಗಿ ಬೆದರಿಕೆ ಹಾಕುವುದು ಪ್ರಚೋದನೆ ಎಂದು ಪರಿಗಣಿಸಲ್ಪಡಬಹುದು. ಆದರೆ, ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಆಧಾರ ರಹಿತ ಆರೋಪ ಮಾಡಿದರೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯ, ಕೇಂದ್ರದ ನಡುವಿನ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆ?
ಸಿ.ಜೆ.ರಾಯ್ ವಿರುದ್ಧ ತೆರಿಗೆ ವಂಚನೆ ಆರೋಪದ ಮೇಲೆ ಕೇರಳದ ಐಟಿ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಕರ್ನಾಟಕಕ್ಕೆ ಆಗಮಿಸಿದ್ದರು. ರಾಜ್ಯದಲ್ಲಿನ ಅವರ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸಿ.ಜೆ.ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದ ಪೊಲೀಸರು ಐಟಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆ ಇರಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಕೇಂದ್ರದ ವಿರುದ್ಧ ರಾಜಕೀಯ ಸಮರ ನಡೆಸುತ್ತಲೇ ಬಂದಿದೆ. ಇದನ್ನು ಸಹ ರಾಜಕೀಯವಾಗಿ ಪಡೆದುಕೊಂಡಿದೆ ಎಂದು ಪ್ರತಿಪಕ್ಷ ಬಿಜೆಪಿ ದೂರುವ ಸಾಧ್ಯತೆ ಹೆಚ್ಚಿರಲಿದೆ ಎಂಬ ಮಾತುಗಳು ಸಹ ಕೇಳಿಬಂದಿವೆ.

