
ದುಬೈ ಯೋಜನೆ, ಕೊಚ್ಚಿ ಫ್ಲಾಟ್‌ಗಳ ಮಾರಾಟ, ಕಪ್ಪು-ಬಿಳುಪು ತೆರಿಗೆ ವಂಚನೆ: ಸಿ.ಜೆ. ರಾಯ್‌ಗೆ ಮುಳುವಾಗಿದ್ದೇನು?
ಕೊಚ್ಚಿಯಲ್ಲಿ 150 ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದು ಸಾಮಾನ್ಯ ವ್ಯವಹಾರದಂತೆ ಕಂಡರೂ, ಇದರ ಹಿಂದೆ ತೆರಿಗೆ ವಂಚನೆಯ ತಂತ್ರಗಾರಿಕೆಯನ್ನು ಐಟಿ ಅಧಿಕಾರಿಗಳ ಗಮನ ಸೆಳೆದಿದೆ.
ಕೇರಳ ಮೂಲದ ಕಾನ್ಫಿಡೆಂಟ್ ಗ್ರೂಪ್‌ನ ಯೋಜನೆಗಳು ಹಾಗೂ ವೇಗದ ಬೆಳವಣಿಗೆಯಿಂದಾಗಿ ರಿಯಲ್‌ಎಸ್ಟೇಟ್ ವಲಯದಲ್ಲಿ ಹೆಸರು ಗಳಿಸಿದ್ದ ಉದ್ಯಮಿ ಸಿ.ಜೆ.ರಾಯ್ ತೆರಿಗೆ ವಂಚನೆ ಆರೋಪ, ವಿದೇಶಿ ಹೂಡಿಕೆಯ ಅಸ್ಪಷ್ಟತೆಯ ಕಾರಣದಿಂದಾಗಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ಕಣ್ಣು ಬೀಳಲು ಕಾರಣವೇನು?
ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ ಬಳಿಕ ಹಲವು ಅಂಶಗಳು ಬೆಳಕಿಗೆ ಬರುತ್ತಿದ್ದು, ಕೆಲವು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಕೊಚ್ಚಿಯಲ್ಲಿ 100ಕ್ಕೂ ಹೆಚ್ಚು ಮಾರಾಟ ಮಾಡಿದ ಫ್ಲಾಟ್‌ಗಳು ಸಾಮಾನ್ಯ ವ್ಯವಹಾರದಂತೆ ಮೇಲ್ನೋಟಕ್ಕೆ ಕಾಣದಿರುವ ಕಾರಣ ಐಟಿ ಅಧಿಕಾರಿಗಳು ಸಿ.ಜೆ.ರಾಯ್ ಬೆನ್ನು ಬಿದ್ದಿದ್ದರು ಎನ್ನಲಾಗಿದೆ.
ಇವುಗಳ ಪೈಕಿ ಐಟಿ ಅಧಿಕಾರಿಗಳ ಒತ್ತಡವು ಕಾರಣವು ಸಹ ಒಂದಾಗಿದೆ ಎಂಬ ಚರ್ಚೆಗಳು ಮುನ್ನಲೆಗೆ ಬಂದಿವೆ. ಕೊಚ್ಚಿಯಲ್ಲಿ ಕಳೆದ ವರ್ಷ ಮಾರಾಟ ಮಾಡಲಾದ ಫ್ಲ್ಯಾಟ್‌ಗಳನ್ನು ಮೂಲ ಬೆಲೆಗಿಂತ ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿದೆ. ಇದರಿಂದ ಕೋಟ್ಯಂತರ ರು. ತೆರಿಗೆ ವಂಚನೆಯಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಐಟಿ ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್‌ನ ವಹಿವಾಟಿನ ಮಾಹಿತಿ ಸಂಗ್ರಹಿಸಲಾರಂಭಿಸಿದರು. ತಮ್ಮದೇ ಮೂಲಗಳಿಂದ ಸಿ.ಜೆ.ರಾಯ್ ಹಣಕಾಸು ವಹಿವಾಟು ಕುರಿತು ಮಾಹಿತಿ ಪಡೆದ ಐಟಿ ಅಧಿಕಾರಿಗಳು ದಾಳಿ ಪ್ರಕ್ರಿಯೆಯನ್ನು ಆರಂಭಿಸಿದರು ಎಂದು ಹೇಳಲಾಗಿದೆ.
ಕೊಚ್ಚಿಯಲ್ಲಿ ಸುಮಾರು 150 ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗಿದೆ. ದೊಡ್ಡ ರಿಯಲ್ ಎಸ್ಟೇಟ್ ಕಂಪನಿಗೆ ಇದು ಸಾಮಾನ್ಯ ವ್ಯವಹಾರದಂತೆ ಕಂಡರೂ, ಇದರ ಹಿಂದೆ ತೆರಿಗೆ ವಂಚನೆ ಮಾಡಲು ಫ್ಲ್ಯಾಟ್‌ಗಳ ಮೌಲ್ಯ ಕಡಿಮೆ ತೋರಿಸಲಾಗಿದೆ ಎಂಬ ತಂತ್ರವು ಐಟಿ ಅಧಿಕಾರಿಗಳ ಗಮನ ಸೆಳೆದಿದೆ. ಫ್ಲ್ಯಾಟ್ ಮಾರಾಟ ಮಾಡುವ ವೇಳೆ ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ಬೆಲೆ ಇರಲಿದೆ. ಆದರೆ, ಸಿ.ಜೆ.ರಾಯ್ ಅವರ ಫ್ಲ್ಯಾಟ್‌ಗಳ ಮೂಲ ಬೆಲೆಗಿಂತ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬುದಾಗಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಒಂದು ಫ್ಲ್ಯಾಟ್‌ನ ಮಾರುಕಟ್ಟೆ ದರ ಒಂದು ಕೋಟಿ ರೂ. ಇದ್ದಲ್ಲಿ ಅದನ್ನು ಕೇವಲ 40-50 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ಬಿಂಬಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿವೆ.
ನಗದು ವ್ಯವಹಾರದ ದಂಧೆ
ತೆರಿಗೆ ವಂಚನೆ ಆರೋಪದ ಮೇಲೆ ಐಟಿ ಅಧಿಕಾರಿಗಳು ಕಾನ್ಫಿಡೆಂಟ್ ಸಂಸ್ಥೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ದಾಖಲೆಗಳಲ್ಲಿ ಕಡಿಮೆ ಮೊತ್ತವನ್ನು ತೋರಿಸಿ, ಉಳಿದ ಹಣವನ್ನು ಖರೀದಿದಾರರಿಂದ ನಗದು ರೂಪದಲ್ಲಿ ಪಡೆಯಲಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿತ್ತು. ಇದರಿಂದ ಎರಡು ರೀತಿಯ ವಂಚನೆಗಳನ್ನು ನಡೆಸಲಾಗುತ್ತದೆ. ನೋಂದಣಿ ಇಲಾಖೆಗೆ ಪಾವತಿಸಬೇಕಾದ ಮುದ್ರಾಂಕ ಶುಲ್ಕ ಕಡಿಮೆಯಾಗುತ್ತದೆ. ಮಾರಾಟಗಾರನಿಗೆ ಲಭ್ಯವಾದ ವಾಸ್ತವಾದ ಲಾಭವು ದಾಖಲೆಗಳಲ್ಲಿ ಇರುವುದಿಲ್ಲ. ಇದರಿಂದ ಕಾರ್ಪೊರೇಟ್ ತೆರಿಗೆಯನ್ನು ತಪ್ಪಿಸಬಹುದಾಗಿದೆ. ಪ್ರಕರಣದಲ್ಲಿ ಕೋಟ್ಯಂತರ ರೂ. ನಗದು ರೂಪದಲ್ಲಿ ವರ್ಗಾಯಿಸಲಾಗಿದೆ. ಅದು ಕಪ್ಪು ಹಣವಾಗಿ ಪರಿವರ್ತನೆಯಾಗಿರುತ್ತದೆ ಎಂದು ಐಟಿ ಇಲಾಖೆಯ ಹೇಳಿಕೆಯಾಗಿದೆ.
ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡ ಬಳಿಕ ಕೇರಳದ ಐಟಿ ಅಧಿಕಾರಿಗಳು ಸಿ.ಜೆ.ರಾಯ್ ಕಚೇರಿಗಳ ಮೇಲೆ ಮಾತ್ರವಲ್ಲದೇ, ಅವರ ನಿಕಟವರ್ತಿಗಳ ಮೇಲೂ ಹದ್ದಿನಕಟ್ಟಿದ್ದರು. ಡಿಜಿಟಲ್ ಪುರಾವೆಗಳು, ಬ್ಯಾಂಕ್‌ನ ಹಣಕಾಸು ವಹಿವಾಟಿನ ದಾಖಲೆ, ಮಾರಾಟದ ಕರಾರು ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಇವುಗಳನ್ನು ಪರಿಶೀಲನೆ ನಡೆಸಿದಾಗ ಆನ್‌ಲೈನ್ ಮೂಲಕ ಸಣ್ಣ ಮೊತ್ತದ ವ್ಯವಹಾರ ನಡೆಸಿ, ಉಳಿದಿರುವುದು ನಗದು ರೂಪದಲ್ಲಿ ಪಡೆದಿರುವ ಬಗ್ಗೆ ತಿಳಿದುಬಂದಿದೆ. ಸರ್ಕಾರಕ್ಕೆ ಸಲ್ಲಿಸಬೇಕಾದ ತೆರಿಗೆಯನ್ನು ವಂಚಿಸುವ ಮೂಲಕ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಲಾಗುತ್ತಿತ್ತು. ಕೇರಳದಲ್ಲಿ ತೆರಿಗೆ ವಂಚನೆ ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ತೆರಿಗೆ ವಂಚನೆ ನಡೆದಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಕೇರಳ ಐಟಿ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಿ ಪರಿಶೀಲನೆ ಕಾರ್ಯ ಕೈಗೊಂಡಿದ್ದರು ಎಂದು ರಾಜ್ಯದ ಐಟಿ ಮೂಲಗಳು ತಿಳಿಸಿವೆ.
ಇಡಿ ಆತಂಕ ಎದುರಾಗಿರುವ ಸಾಧ್ಯತೆ?
ಸಿ.ಜೆ.ರಾಯ್‌ಗೆ ಆದಾಯ ತೆರಿಗೆ ಇಲಾಖೆಯ ವಿಚಾರಣೆಯ ತಲೆಬಿಸಿ ಒಂದೆಡೆಯಾದರೆ, ಮತ್ತೊಂದೆಡೆ ಜಾರಿ ನಿರ್ದೇಶನಾಲಯದ ಆತಂಕವು ಎದುರಾಗುವ ಸಾಧ್ಯತೆಯೂ. ಇದು ರಾಯ್ ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿರಬಹುದು. ಐಟಿ ಅಧಿಕಾರಿಗಳು ತೆರಿಗೆ ವಂಚನೆಗೆ ದಂಡ ವಿಧಿಸಿ ಸರಿಪಡಿಸಬಹುದು. ಆದರೆ, ಇಡಿ ಪ್ರಕರಣದಲ್ಲಿ ಪ್ರವೇಶಿಸಿದರೆ ಕಾನೂನಿನ ತೀವ್ರ ಕ್ರಮವನ್ನು ಎದುರಿಸಬೇಕಾಗುತ್ತದೆ. ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡರೆ ತೀವ್ರ ಸಂಕಷ್ಟ ಎದುರಿಸಬೇಕಾಗುತಿತ್ತು.
ಅಲ್ಲದೇ, ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಬಂಧಿಸುವ ಸಾಧ್ಯತೆಯೂ ಇರುತ್ತದೆ. ರಾಯ್ ಅವರು ಭಾರತದಲ್ಲಿ ಮಾತ್ರವಲ್ಲದೇ ದುಬೈನಲ್ಲಿಯೂ ಹೂಡಿಕೆ ಮಾಡಿದ್ದರು. ದುಬೈ ಹೂಡಿಕೆಯ ಮೂಲವನ್ನು ಸಾಬೀತುಪಡಿಸಲು ವಿಫಲವಾದರೆ, ಭಾರೀ ಸಂಕಷ್ಟಕ್ಕೆ ಸಿಲುಕಬೇಕಾಗುತ್ತಿತ್ತು. ಇದರ ಒತ್ತಡಕ್ಕೂ ಸಿ.ಜೆ.ರಾಯ್ ಒಳಗಾಗಿರುವ ಸಾಧ್ಯತೆ ಇದೆ ಎಂಬುದು ಐಟಿ ಇಲಾಖೆಯ ಸಮರ್ಥನೆಯಾಗಿದೆ.
ದುಬೈನಲ್ಲಿ ಸಾಲ ಇಲ್ಲದೇ ಹೂಡಿಕೆ?
ಸಿ.ಜೆ.ರಾಯ್ ಮೇಲಿನ ತನಿಖೆಯ ವ್ಯಾಪ್ತಿ ಕೇವಲ ಭಾರತಕ್ಕೆ ಸೀಮಿತವಾಗಿರದೆ, ದುಬೈವರೆಗೂ ಹಬ್ಬಿತ್ತು. ಅಲ್ಲಿಯೂ ಹಲವು ಯೋಜನೆಗಳನ್ನು ಪ್ರಾರಂಭಿಸಲಾಗಿತ್ತು. ಐಟಿ ಮೂಲಗಳು ಹೇಳುವ ಪ್ರಕಾರ, ಸಾಮಾನ್ಯವಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬ್ಯಾಂಕ್ ಸಾಲಗಳಿಲ್ಲದೆ ಯೋಜನೆಗಳನ್ನು ಮುಗಿಸುವುದಿಲ್ಲ. ಆದರೆ, ಸಿ.ಜೆ.ರಾಯ್ ಯಾವುದೇ ಬ್ಯಾಂಕ್ ಸಾಲ ಪಡೆಯದೆ ದುಬೈನಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಪೂರ್ಣಗೊಳಿಸಿದ್ದರು ಎನ್ನಲಾಗಿದೆ.
ಹೀಗಾಗಿ ಈ ವಿಚಾರದಲ್ಲಿ ಐಟಿ ಇಲಾಖೆಗೆ ಸಾಕಾಷ್ಟು ಅನುಮಾನ ಮೂಡಿತ್ತು. ಯಾವುದೇ ಸಾಲ ಇಲ್ಲದೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣದ ಹರಿವು ಎಲ್ಲಿಂದ ಬಂದಿದೆ? ಎಂಬುದು ಯಕ್ಷಪ್ರಶ್ನೆಯಾಗಿತ್ತು. ಈ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು ಎಂದು ಹೇಳಲಾಗಿದೆ.

