
ರಾಯ್ ಸಿ.ಜೆ ಆತ್ಮಹತ್ಯೆ: 'ಡೆತ್ ನೋಟ್ ಡೈರಿ'ಯಲ್ಲಿ ಸ್ಫೋಟಕ ಮಾಹಿತಿ?
ಎಸ್‌ಐಟಿ ತಂಡವು ಈ ಪತ್ರವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಇದರಲ್ಲಿ ಉಲ್ಲೇಖವಾಗಿರುವ ಹೆಸರುಗಳು ಮತ್ತು ವ್ಯವಹಾರಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುತ್ತಿದೆ.
ದೇಶಾದ್ಯಂತ ಸಂಚಲನ ಮೂಡಿಸಿರುವ ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ರಾಯ್ ಸಿ.ಜೆ. ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ ರಾಯ್ ಬರೆದಿದ್ದಾರೆ ಎನ್ನಲಾದ 9 ಪುಟಗಳ ಮಹತ್ವದ ಪತ್ರವೊಂದು ಲಭ್ಯವಾಗಿದ್ದು, ಇದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ಪತ್ರದಲ್ಲಿ ಉದ್ಯಮದ ಏರಿಳಿತಗಳು, ಸಾಲದ ಹೊರೆ ಮತ್ತು ಹಲವು ಗಣ್ಯರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ರಾಯ್ ಸಿ.ಜೆ. ಅವರು ತಮ್ಮ ಕುಟುಂಬದ ಕ್ಷಮೆಯಾಚಿಸುವ ಮೂಲಕ ಪತ್ರವನ್ನು ಆರಂಭಿಸಿದ್ದಾರೆ. ದುಬೈ ಸೇರಿದಂತೆ ವಿದೇಶಗಳಲ್ಲಿನ ತಮ್ಮ ಉದ್ಯಮದಲ್ಲಿ ಉಂಟಾದ ಹಿನ್ನಡೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕರ್ನಾಟಕ ಮತ್ತು ಕೇರಳದ ಪ್ರಭಾವಿ ಜನಪ್ರತಿನಿಧಿಗಳು, ಕೆಲವು ನಟಿಯರು ಮತ್ತು ವ್ಯಾಪಾರ ಸಹಚರರೊಂದಿಗಿನ ವ್ಯವಹಾರಗಳ ಬಗ್ಗೆಯೂ ಪತ್ರದಲ್ಲಿ ಸುಳಿವು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಸಾಲಗಳು ಮತ್ತು ಕಂಪನಿಯ ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ಮಾಹಿತಿ ಇದೆ.
ಎಸ್‌ಐಟಿ ತಂಡವು ಈ ಪತ್ರವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಇದರಲ್ಲಿ ಉಲ್ಲೇಖವಾಗಿರುವ ಹೆಸರುಗಳು ಮತ್ತು ವ್ಯವಹಾರಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುತ್ತಿದೆ.
ಭಾರತಕ್ಕೆ ಬಂದಿದ್ದೇಕೆ?
ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ರಾಯ್ ಅವರ ಹೇಳಿಕೆ ಪಡೆಯಲು ಐಟಿ ಇಲಾಖೆ ಸಮನ್ಸ್ ಜಾರಿ ಮಾಡಿತ್ತು. ಹೀಗಾಗಿ ರಾಯ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಆದರೆ, ಬಂದ ಮೂರೇ ದಿನಗಳಲ್ಲಿ ಈ ದುರಂತ ಸಂಭವಿಸಿದೆ. ಐಟಿ ಅಧಿಕಾರಿಗಳ ಒತ್ತಡವೇ ಆತ್ಮಹತ್ಯೆಗೆ ಕಾರಣವೇ ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಗತ್ಯ ಬಿದ್ದರೆ ಸಾಕ್ಷ್ಯಾಧಾರಗಳ ಮೇಲೆ ಐಟಿ ಅಧಿಕಾರಿಗಳಿಗೂ ಸಮನ್ಸ್ ನೀಡಲು ಎಸ್‌ಐಟಿ ಸಿದ್ಧತೆ ನಡೆಸಿದೆ.
ಕುಟುಂಬಸ್ಥರ ವಿಚಾರಣೆ ಬಾಕಿ
ರಾಯ್ ಅವರ ಅಂತ್ಯಕ್ರಿಯೆ ಮುಕ್ತಾಯಗೊಂಡಿರುವುದರಿಂದ, ಎಸ್‌ಐಟಿ ತಂಡವು ಈಗ ಅವರ ಪತ್ನಿ ಮತ್ತು ಮಕ್ಕಳ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಿದೆ. ಕುಟುಂಬಸ್ಥರು ನೀಡುವ ಮಾಹಿತಿಯು ಮುಂದಿನ ತನಿಖೆಗೆ ನಿರ್ಣಾಯಕವಾಗಲಿದೆ.ಒಟ್ಟಾರೆಯಾಗಿ, 9 ಪುಟಗಳ ಈ ಪತ್ರವು ಕೇವಲ ಆತ್ಮಹತ್ಯೆಯ ಕಾರಣವನ್ನಷ್ಟೇ ಅಲ್ಲದೆ, ರಾಯ್ ಅವರ ವ್ಯವಹಾರದ ಜಾಲ ಮತ್ತು ಅದರಲ್ಲಿದ್ದ ಕಾಣದ ಕೈಗಳ ಬಗ್ಗೆಯೂ ಬೆಳಕು ಚೆಲ್ಲುವ ಸಾಧ್ಯತೆಯಿದೆ.

