
ಕೇರಳ ವ್ಯಾಪಾರಿಗಳಿಗೆ ಬೆದರಿಕೆ ಹಾಕಿದ ಇನ್ಸ್‌ಪೆಕ್ಟರ್: 20 ಲಕ್ಷ ಸುಲಿಗೆ
ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ವ್ಯಾಪಾರಕ್ಕಾಗಿ ಬಂದಿದ್ದ ಕೇರಳ ಉದ್ಯಮಿಗಳನ್ನು ಬೆದರಿಸಿ ಲಕ್ಷಾಂತರ ರೂಪಾಯಿ ಹಣ ದೋಚಿರುವ ಪ್ರಕರಣ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ವ್ಯಾಪಾರಕ್ಕಾಗಿ ಬಂದಿದ್ದ ಹೊರ ರಾಜ್ಯದ ಉದ್ಯಮಿಗಳನ್ನು ಬೆದರಿಸಿ ಲಕ್ಷಾಂತರ ರೂಪಾಯಿ ಹಣ ದೋಚಿರುವ ಪ್ರಕರಣ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ರಾಜ್ಯ ಪೊಲೀಸ್ ಇಲಾಖೆಯ ಘನತೆಗೆ ಮಸಿ ಬಳಿದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕೇರಳ ಮೂಲದ ಟ್ರೇಡಿಂಗ್ ವ್ಯಾಪಾರಿಗಳು ವಾಣಿಜ್ಯ ವ್ಯವಹಾರದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ನಗರದ ಮಡಿವಾಳದ ಸಿಲ್ಕ್ ಬೋರ್ಡ್ ಸಮೀಪದ ಖಾಸಗಿ ಹೋಟೆಲ್ ಒಂದರಲ್ಲಿ ಅವರು ತಂಗಿದ್ದರು. ಇವರ ಬಳಿ ಭಾರೀ ಮೊತ್ತದ ಹಣವಿದೆ ಎಂಬ ಮಾಹಿತಿ ಪಡೆದ ಕಿಡಿಗೇಡಿಗಳ ತಂಡ, ವ್ಯವಸ್ಥಿತವಾಗಿ ದರೋಡೆಗೆ ಸಂಚು ರೂಪಿಸಿತು ಸಿಐಡಿ ಇನ್ಸ್‌ಪೆಕ್ಟರ್ ಒಬ್ಬರ ನೇತೃತ್ವದಲ್ಲಿ ನಾಲ್ವರು ದರೋಡೆಕೋರರ ತಂಡ ಹೋಟೆಲ್ ಬಳಿ ಆಗಮಿಸಿತು. ಇನ್ಸ್‌ಪೆಕ್ಟರ್ ಜೀಪಿನಲ್ಲಿಯೇ ಕುಳಿತು ಕಾವಲು ಕಾಯುತ್ತಿದ್ದರೆ, ಇನ್ನುಳಿದ ನಾಲ್ವರು ದರೋಡೆಕೋರರು ಇನ್ಸ್‌ಪೆಕ್ಟರ್ ಹೆಸರಿನ ಐಡಿ ಕಾರ್ಡ್‌ಗಳನ್ನು ಪ್ರದರ್ಶಿಸುತ್ತಾ ವ್ಯಾಪಾರಿಗಳು ತಂಗಿದ್ದ ರೂಮ್‌ಗೆ ನುಗ್ಗಿದರು. "ನೀವು ಕಾನೂನುಬಾಹಿರವಾಗಿ ಟ್ರೇಡಿಂಗ್ ನಡೆಸುತ್ತಿದ್ದೀರಾ, ನಿಮ್ಮ ಬಳಿ ಇರುವ ಹಣದ ಮೂಲವೇನು?" ಎಂದು ಬೆದರಿಸಿ, ವ್ಯಾಪಾರಿಗಳಲ್ಲಿದ್ದ 20 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದರು. ಹಣ ಪಡೆದ ಕೂಡಲೇ ಈ ತಂಡ ಸ್ಥಳದಿಂದ ಜೀಪಿನಲ್ಲಿ ಪರಾರಿಯಾಯಿತು.
ಅನುಮಾನಗೊಂಡ ವ್ಯಾಪಾರಿಗಳಿಂದ ದೂರು
ದರೋಡೆಕೋರರ ವರ್ತನೆ ಮತ್ತು ಅವರ ಅಧಿಕಾರ ಪ್ರದರ್ಶನದ ಶೈಲಿ ವ್ಯಾಪಾರಿಗಳಿಗೆ ಅನುಮಾನ ಮೂಡಿಸಿತು. ತಕ್ಷಣವೇ ಎಚ್ಚೆತ್ತ ಅವರು ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಕೇರಳ ವ್ಯಾಪಾರಿಗಳ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡ ಮಡಿವಾಳ ಪೊಲೀಸರು, ತನಿಖೆಯನ್ನು ತೀವ್ರಗೊಳಿಸಿದರು. ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಇನ್ಸ್‌ಪೆಕ್ಟರ್ ಜೀಪಿನಲ್ಲಿ ಬಂದು ಹೋಗಿರುವ ದೃಶ್ಯಾವಳಿಗಳು ಸಾಕ್ಷಿಯಾಗಿ ದಾಖಲಾಗಿದ್ದವು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆಗಿಳಿದ ಮಡಿವಾಳ ಪೊಲೀಸರು, ರಾಬರಿಗೆ ಬಳಸಿದ್ದ ಜೀಪ್ ಅನ್ನು ವಶಪಡಿಸಿಕೊಂಡರು. ಅಲ್ಲದೆ, ದರೋಡೆಕೋರರ ತಂಡದಲ್ಲಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಈ ಪ್ರಕರಣದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಒಬ್ಬರ ಕೈವಾಡವಿರುವುದು ಮತ್ತು ಅವರೇ ತಂಡದ ನೇತೃತ್ವ ವಹಿಸಿದ್ದರು ಎಂಬುದು ಖಚಿತವಾಗಿದೆ. ಈ ವಿಷಯ ಹೊರಬೀಳುತ್ತಿದ್ದಂತೆಯೇ, ಇನ್ಸ್‌ಪೆಕ್ಟರ್ ಹಾಗೂ ಇತರ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಇನ್ಸ್‌ಪೆಕ್ಟರ್ ಸೇರಿದಂತೆ ಉಳಿದ ಆರೋಪಿಗಳ ಪತ್ತೆಗೆ ಮಡಿವಾಳ ಪೊಲೀಸರು ಬಲೆ ಬೀಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಪ್ರತಿಕ್ರಿಯೆ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್, ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವೊಂದನ್ನು ರಚಿಸಲಾಗಿದೆ. ಪೊಲೀಸ್ ಸಮವಸ್ತ್ರದಲ್ಲೇ ಇಂತಹ ಕೃತ್ಯ ಎಸಗಿರುವುದು ಅಕ್ಷಮ್ಯ. ಆರೋಪಿಗಳ ಸುಳಿವು ಸಿಕ್ಕಿದೆ, ಶೀಘ್ರವೇ ಅವರನ್ನು ಬಂಧಿಸಲಾಗುವುದು. ಇಲಾಖೆಯ ಘನತೆಗೆ ಧಕ್ಕೆ ತರುವ ಇಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ದರೋಡೆಕೋರರ ತಂಡವನ್ನು ಮುನ್ನಡೆಸಿದ ಸಿಐಡಿ ಇನ್ಸ್‌ಪೆಕ್ಟರ್‌ನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಈಗ ದೊಡ್ಡ ಸವಾಲಾಗಿದೆ. ಇಲಾಖೆಯ ಒಳಗಿರುವ ಅಧಿಕಾರಿಯೇ ದರೋಡೆಗೆ ಇಳಿದಿರುವುದು ಹಿರಿಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈ ಇನ್ಸ್‌ಪೆಕ್ಟರ್ ಈ ಹಿಂದೆ ಕೂಡ ಇದೇ ರೀತಿಯ ಯಾವುದಾದರೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ? ಅಥವಾ ಈ ತಂಡದ ಹಿಂದೆ ದೊಡ್ಡ ದರೋಡೆಕೋರರ ಜಾಲವಿದೆಯೇ? ಎಂಬ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
"ರಕ್ಷಣೆ ಪಡೆಯಲು ನಾವು ಪೊಲೀಸ್ ಠಾಣೆಗೆ ಹೋಗುತ್ತೇವೆ. ಆದರೆ ರಕ್ಷಕರೆ ದರೋಡೆಗೆ ಇಳಿದರೆ ನಾವು ಯಾರನ್ನು ನಂಬಬೇಕು?" ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೊರ ರಾಜ್ಯಗಳಿಂದ ಬರುವ ವ್ಯಾಪಾರಿಗಳಿಗೆ ಬೆಂಗಳೂರು ಸುರಕ್ಷಿತವೇ ಎಂಬ ಪ್ರಶ್ನೆ ಉದ್ಭವಿಸಿದೆ. ಇಂತಹ ಘಟನೆಗಳು ನಗರದ ವರ್ಚಸ್ಸಿಗೆ ಧಕ್ಕೆ ತರುವುದಲ್ಲದೆ, ಪೊಲೀಸರ ಮೇಲಿರುವ ನಂಬಿಕೆಯನ್ನು ಅಲುಗಾಡಿಸುತ್ತವೆ.

