ಅರಣ್ಯ ಸಿಬ್ಬಂದಿ ಗುಂಡಿನ ದಾಳಿ: ಮೂವರು ಶಂಕಿತ ಬೇಟೆಗಾರರು ಸಾವು
x

ಅರಣ್ಯ ಸಿಬ್ಬಂದಿ ಗುಂಡಿನ ದಾಳಿ: ಮೂವರು ಶಂಕಿತ ಬೇಟೆಗಾರರು ಸಾವು

ಕಾಡಿಗೆ ಅಕ್ರಮವಾಗಿ ಪ್ರವೇಶಿಸಿದ್ದ ಕೆಲವರು ವನ್ಯಜೀವಿಯನ್ನು ಬೇಟೆಯಾಡಿ, ಅದರ ಮಾಂಸವನ್ನು ಬೇರ್ಪಡಿಸುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಕಾವೇರಿ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ.


Click the Play button to hear this message in audio format

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿರುವ ಘಟನೆ ನಡೆದಿದೆ. ಕಾಡಿಗೆ ಅಕ್ರಮವಾಗಿ ಪ್ರವೇಶಿಸಿದ್ದ ಕೆಲವರು ವನ್ಯಜೀವಿಯನ್ನು ಬೇಟೆಯಾಡಿ, ಅದರ ಮಾಂಸವನ್ನು ಬೇರ್ಪಡಿಸುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಕಾವೇರಿ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿದೆ.

ಈ ವೇಳೆ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಅರಣ್ಯ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ ಶಂಕಿತ ಬೇಟೆಗಾರರು ಸಿಬ್ಬಂದಿ ಮೇಲೆ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿದಾಳಿಯಲ್ಲಿ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡಿಗೆ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿದ್ದಾರೆ. ಮೃತರನ್ನು ಹನೂರು ತಾಲೂಕಿನ ತೋಮಿಯರ್ ಪಾಳ್ಯದ ನಿವಾಸಿಗಳಾದ ಅಂತೋನಿಸ್ವಾಮಿ, ಕುಮಾರ್ ಹಾಗೂ ಪೀಟರ್ ಎಂದು ಗುರುತಿಸಲಾಗಿದೆ.

ಮೃತದೇಹಗಳು ಮೈಸೂರಿಗೆ ರವಾನೆ

ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಶಂಕಿತ ಬೇಟೆಗಾರರು ಬಳಸಿದ್ದ ಶಸ್ತ್ರಾಸ್ತ್ರಗಳು, ಬೇಟೆಯಾಡಲಾಗಿದ್ದ ವನ್ಯಜೀವಿ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯ ಕುರಿತು ಪರಿಶೀಲನೆ ನಡೆಯುತ್ತಿದೆ.

Read More
Next Story