ಬಿಎಂಟಿಸಿ ಬಸ್‌ಗಳು ಮುಖಾಮುಖಿ ಡಿಕ್ಕಿ: ಬಸ್​ ಚಾಲಕನ ಸ್ಥಿತಿ ಚಿಂತಾಜನಕ, 13ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
x

ಬೆಂಗಳೂರಿನ ಕೆ.ಆರ್. ವೃತ್ತದಲ್ಲಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. 

ಬಿಎಂಟಿಸಿ ಬಸ್‌ಗಳು ಮುಖಾಮುಖಿ ಡಿಕ್ಕಿ: ಬಸ್​ ಚಾಲಕನ ಸ್ಥಿತಿ ಚಿಂತಾಜನಕ, 13ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಬೆಂಗಳೂರಿನ ಕೆ.ಆರ್. ವೃತ್ತದಲ್ಲಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಬಸ್ ಡಿಕ್ಕಿಯಾದ ರಭಸಕ್ಕೆ ಚಾಲಕ ಸೇರಿ 14 ಪ್ರಯಾಣಿಕರು ತೀವ್ರ ಗಾಯಗೊಂಡಿದ್ದಾರೆ.


Click the Play button to hear this message in audio format

ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಬಸ್ ಚಾಲಕ ಹಾಗೂ 13ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಕೆ.ಆರ್. ಸರ್ಕಲ್ (ಕೃಷ್ಣರಾಜೇಂದ್ರ ವೃತ್ತ) ಜಂಕ್ಷನ್ ಬಳಿ ನಡೆದಿದೆ. ಮುಂಭಾಗದಲ್ಲಿ ಚಲಿಸುತ್ತಿದ್ದ ಬಿಎಂಟಿಸಿಯ ವೋಲ್ವೋ ಬಸ್‌ಗೆ ಹಿಂಬದಿಯಿಂದ ಬಂದ ಸಾಮಾನ್ಯ ಬಿಎಂಟಿಸಿ ಬಸ್ ನಿಯಂತ್ರಣ ತಪ್ಪಿ ಅತ್ಯಂತ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಾಮಾನ್ಯ ಬಸ್‌ನ ಮುಂಭಾಗದ ಸೀಟುಗಳು ಹಾಗೂ ಎಂಜಿನ್ ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಬಸ್‌ನೊಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರ ರಕ್ಷಣೆಗೆ ಹರಸಾಹಸ

ಅಪಘಾತದ ತೀವ್ರತೆಗೆ ಸಾಮಾನ್ಯ ಬಸ್‌ನ ಮುಂಭಾಗದ ಕಬ್ಬಿಣದ ಪ್ಲೇಟ್‌ಗಳು ಒಳಗೆ ನುಗ್ಗಿದ್ದರಿಂದ, ಮುಂಚೂಣಿಯ ಸೀಟುಗಳಲ್ಲಿದ್ದ ಮಹಿಳೆಯರು ಸೇರಿದಂತೆ ಹಲವು ಪ್ರಯಾಣಿಕರು ಸೀಟುಗಳ ಮಧ್ಯೆ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡುತ್ತಿದ್ದರು. ಸ್ಥಳದಲ್ಲಿದ್ದ ಸಾರ್ವಜನಿಕರು, ವಾಹನ ಸವಾರರು ಹಾಗೂ ಸಂಚಾರ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ನಜ್ಜುಗುಜ್ಜಾಗಿದ್ದ ಬಸ್‌ನ ಭಾಗಗಳನ್ನು ಎಳೆದು ಸಿಲುಕಿದ್ದ ಪ್ರಯಾಣಿಕರನ್ನು ಅತ್ಯಂತ ಕಷ್ಟಪಟ್ಟು ಹೊರಗೆ ಕರೆತಂದರು.

ಗಾಯಾಳುಗಳು ಆಸ್ಪತ್ರೆಗೆ ದಾಖಲು

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಸ್ ಚಾಲಕ ಮತ್ತು 13ಕ್ಕೂ ಹೆಚ್ಚು ಪ್ರಯಾಣಿಕರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಾಳುಗಳ ತಲೆ ಹಾಗೂ ಕೈಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕೆ.ಆರ್. ವೃತ್ತದ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್

ನಗರದ ಪ್ರಮುಖ ಜಂಕ್ಷನ್ ಆಗಿರುವ ಕೆ.ಆರ್. ವೃತ್ತದಲ್ಲೇ ಈ ಅಪಘಾತ ಸಂಭವಿಸಿದ್ದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಕಚೇರಿ ಹಾಗೂ ಕಾಲೇಜುಗಳಿಗೆ ಹೊರಟಿದ್ದ ಸಾರ್ವಜನಿಕರು ತೀವ್ರ ಪರದಾಡುವಂತಾಯಿತು. ಸ್ಥಳಕ್ಕೆ ಧಾವಿಸಿದ ಸಂಚಾರ ಪೊಲೀಸರು ಕ್ರೇನ್ ಮೂಲಕ ಅಪಘಾತಕ್ಕೀಡಾದ ಬಸ್‌ಗಳನ್ನು ರಸ್ತೆಯಿಂದ ತೆರವುಗೊಳಿಸಿ, ವಾಹನ ಸಂಚಾರವನ್ನು ಸುಗಮಗೊಳಿಸಿದ್ದಾರೆ. ಸ್ಥಳೀಯ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Read More
Next Story