22 ವರ್ಷದ ಯುವತಿಯ ಆತ್ಮಹತ್ಯೆ: ಕಾಲೇಜು ಸಹಪಾಠಿಯಿಂದ ಬ್ಲ್ಯಾಕ್​​ಮೇಲ್​ ಆರೋಪ
x

22 ವರ್ಷದ ಯುವತಿಯ ಆತ್ಮಹತ್ಯೆ: ಕಾಲೇಜು ಸಹಪಾಠಿಯಿಂದ ಬ್ಲ್ಯಾಕ್​​ಮೇಲ್​ ಆರೋಪ

ಕಾಲೇಜು ಸಹಪಾಠಿಯಿಂದ ನಿರಂತರ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್ ನಡೆದ ಆರೋಪದ ನಡುವೆ ಯುವತಿಯ ಡೆತ್‌ನೋಟ್ ಆಧರಿಸಿ ಪೊಲೀಸರು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.


Click the Play button to hear this message in audio format

ನಿರಂತರ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಿಂದ ಮಾನಸಿಕವಾಗಿ ನೊಂದಿದ್ದ 22 ವರ್ಷದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಸಮೀಪದ ಅಗರ ಕೆರೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೆಳಮಕ್ಕಿ ಮೂಲದ ವಾಣಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಯುವತಿಯ ಸಹಪಾಠಿಯಾಗಿದ್ದ ಅಭಿಷೇಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಾಣಿ ಸುಮಾರು ಒಂದು ವರ್ಷದ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದು, ನಗರದ ಚಿನ್ನಾಭರಣ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಾಲೇಜು ದಿನಗಳಲ್ಲಿ ವಾಣಿ ಮತ್ತು ಅಭಿಷೇಕ್ ಸಹಪಾಠಿಗಳಾಗಿದ್ದರು. ಈ ಹಿಂದಿನ ಪರಿಚಯದ ಹಿನ್ನೆಲೆಯಲ್ಲಿ ಅಭಿಷೇಕ್ ನಿರಂತರವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕುಟುಂಬದವರಿಂದ ಹಾಗೂ ತನಿಖೆಯ ಪ್ರಾಥಮಿಕ ಮಾಹಿತಿಯಿಂದ ಕೇಳಿಬಂದಿದೆ.

ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಕಿರುಕುಳ ಆರೋಪ

ಅಭಿಷೇಕ್ ವಾಟ್ಸ್‌ಆ್ಯಪ್ ಮೂಲಕ ವಿಡಿಯೊ ಮತ್ತು ಫೋಟೊಗಳನ್ನು ಕಳುಹಿಸಿ ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ತಾನು ಕರೆದಾಗಲೆಲ್ಲ ತನ್ನ ಕೊಠಡಿಗೆ ಬರಬೇಕು ಎಂದು ಸಂದೇಶ ಕಳುಹಿಸಿ ಒತ್ತಡ ಹೇರುತ್ತಿದ್ದ ಎನ್ನುವ ಅಂಶವೂ ತನಿಖೆಯಲ್ಲಿದೆ.

ನಿರಂತರ ಕಿರುಕುಳದಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೆ ಎಂಬುದಾಗಿ ವಾಣಿ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಆರೋಪಿಗೆ ಶಿಕ್ಷೆಯಾಗಬೇಕು ಎಂಬ ಬೇಡಿಕೆಯನ್ನೂ ಅವರು ಅದರಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಡೆತ್‌ನೋಟ್ ತನಿಖೆಗೆ ಪ್ರಮುಖ ಸಾಕ್ಷ್ಯ

ಯುವತಿ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್‌ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ. ಅದರಲ್ಲಿ ಉಲ್ಲೇಖವಾಗಿರುವ ಆರೋಪಗಳು ಹಾಗೂ ಘಟನೆಯ ಹಿನ್ನೆಲೆಯನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ. ವಾಣಿ ಮತ್ತು ಅಭಿಷೇಕ್ ನಡುವಿನ ಮೊಬೈಲ್ ಕರೆಗಳ ವಿವರ, ವಾಟ್ಸ್‌ಆ್ಯಪ್ ಸಂದೇಶಗಳು ಹಾಗೂ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ಮತ್ತು ಫೋಟೊಗಳ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆಯ ಬಳಿಕ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗುವ ಸಾಧ್ಯತೆ ಇದೆ.

ಆರೋಪಿ ಪತ್ತೆಗೆ ಪೊಲೀಸರ ಶೋಧ

ಘಟನೆ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪ ಕೇಳಿಬಂದಿರುವ ಅಭಿಷೇಕ್ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಡೆತ್‌ನೋಟ್‌ನಲ್ಲಿರುವ ಆರೋಪಗಳು ಮತ್ತು ಇತರೆ ಸಾಕ್ಷ್ಯಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Read More
Next Story