ಪ್ರಪೋಸಲ್ ನೆಪದಲ್ಲಿ ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ
x
ಮೃತ ಕಿರಣ್‌

'ಪ್ರಪೋಸಲ್' ನೆಪದಲ್ಲಿ ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ

ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿದ್ದ ಕಿರಣ್‌ ಮೇಲೆ ಮೊದಲೇ ತಂದಿರಿಸಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಕುರ್ಚಿಗೆ ಕೈಕಾಲು ಕಟ್ಟಿದ್ದರಿಂದ ಕಿರಣ್ ಬೆಂಕಿಯ ಕೆನ್ನಾಲಿಗೆಯಲ್ಲೇ ನರಳಾಡಿ ಪ್ರಾಣ ಬಿಟ್ಟಿದ್ದಾರೆ.


ಮದುವೆ ನಿರಾಕರಿಸಿದ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಪ್ರೇಯಸಿ, ಆತನ ಕಣ್ಣಿಗೆ ಬಟ್ಟೆ ಕಟ್ಟಿ ಜೀವಂತವಾಗಿ ಸುಟ್ಟು ಹಾಕಿರುವ ಆಘಾತಕಾರಿ ಘಟನೆ ರಾಜಧಾನಿ ಬೆಂಗಳೂರಿನ ಅಂಜನಾಪುರದಲ್ಲಿ ಮಂಗಳವಾರ ನಡೆದಿದೆ.

ಪ್ರಿಯಕರನನ್ನೇ ಕೊಂದ ಆರೋಪಿಯನ್ನು ಪ್ರೇರಣಾ(27) ಎಂದು ಗುರುತಿಸಲಾಗಿದೆ. ಕಿರಣ್ ಮೃತ ಪ್ರಿಯಕರ. ಪ್ರೇರಣಾ ಹಾಗೂ ಕಿರಣ್‌ ಇಬ್ಬರು ಟೆಲಿಕಾಂ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮ ಅಂಕುರಿಸಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಕಿರಣ್ ತನ್ನನ್ನು ಕಡೆಗಣಿಸುತ್ತಿದ್ದಾನೆ, ಮದುವೆಗೆ ಮೀನಮೇಷ ಎಣಿಸುತ್ತಿದ್ದಾನೆ ಎಂಬ ಸಂಶಯ ಪ್ರೇರಣಾ ಮನಸ್ಸಿನಲ್ಲಿ ಬೇರೂರಿತ್ತು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಪದೇ ಪದೇ ಗಲಾಟೆಯಾಗುತ್ತಿತ್ತು.

ಸಿನಿಮೀಯ ಶೈಲಿಯಲ್ಲಿ ಹತ್ಯೆ

ಬೆಂಗಳೂರಿನ ಅಂಜನಾಪುರದಲ್ಲಿ ತಾಯಿ ಹಾಗೂ ಸಹೋದರನೊಂದಿಗೆ ವಾಸವಾಗಿದ್ದ ಪ್ರೇರಣಾ ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಪ್ರಿಯಕರ ಕಿರಣ್ ಅವರನ್ನು ಮನೆಗೆ ಕರೆಸಿಕೊಂಡಿದ್ದರು.

ಕಿರಣ್ ಮನೆಗೆ ಬಂದ ನಂತರ ಇಬ್ಬರು ಮಾತನಾಡುತ್ತಾ ಹರಟಿದ್ದಾರೆ. ವಿದೇಶಗಳಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಪ್ರೇಮ ನಿವೇದನೆ ಮಾಡುವುದು ಟ್ರೆಂಡ್‌ ಆಗಿದೆ. ಅದೇ ರೀತಿ ನಾನು ಪ್ರಮೋಸ್‌ ಮಾಡುತ್ತೇನೆ ಎಂದು ನಂಬಿಸಿ ಆತನನ್ನು ಕುರ್ಚಿಯ ಮೇಲೆ ಕೂರಿಸಿ, ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲುಗಳನ್ನು ಭದ್ರವಾಗಿ ಕಟ್ಟಿ ಹಾಕಿ, ಮೊಬೈಲ್‌ನಲ್ಲಿ ಎಲ್ಲವನ್ನೂ ರೆಕಾರ್ಡ್‌ ಮಾಡಿಕೊಂಡಿದ್ದಾರೆ.

ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪ್ರೇಯಸಿ

ಪ್ರೇಯಸಿ ಮಾತುಗಳನ್ನು ಸಮಾಧಾನವಾಗಿ ಕೇಳಿಸಿಕೊಂಡ ಕಿರಣ್ ಮೇಲೆ ಪ್ರೇರಣಾ ಏಕಾಏಕಿ ರೌದ್ರಾವತಾರ ತಾಳಿದ್ದಾಳೆ. ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿದ್ದ ಕಿರಣ್‌ ಮೇಲೆ ಮೊದಲೇ ತಂದಿರಿಸಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಕುರ್ಚಿಗೆ ಕೈಕಾಲು ಕಟ್ಟಿದ್ದರಿಂದ ಕಿರಣ್ ಬೆಂಕಿಯ ಕೆನ್ನಾಲಿಗೆಯಲ್ಲೇ ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಇಷ್ಟಾದರೂ ಪ್ರೇರಣಾ ಇಡೀ ಘಟನೆಯನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಮೂಲಕ ವಿಕೃತಿ ಪ್ರದರ್ಶಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪ್ರೇರಣಾ ಪೊಲೀಸ್‌ ವಶಕ್ಕೆ

ಘಟನೆಯ ಕುರಿತು ಮಾಹಿತಿ ಪಡೆದ ದಕ್ಷಿಣ ವಿಭಾಗದ ಡಿಸಿಪಿ ಡಿ.ಎಲ್. ನಾಗೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದೇವೆ. ವಿಚಾರಣೆಯ ವೇಳೆ ಆಕೆ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಕಿರಣ್ ಇತ್ತೀಚೆಗೆ ತನ್ನನ್ನು ನಿರ್ಲಕ್ಷಿಸುತ್ತಿದ್ದ ಕಾರಣಕ್ಕಾಗಿಯೇ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾಳೆ. ಬೆಂಕಿ ಹಚ್ಚುವ ಸಮಯದಲ್ಲಿ ಆಕೆ ವಿಡಿಯೋ ಮಾಡಿಕೊಂಡಿರುವುದು ದೃಶ್ಯಾವಳಿಯೂ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟಾರೆ, ಪ್ರಿಯಕರನನ್ನೇ ಬೆಂಕಿ ಹಚ್ಚಿ ಕೊಂದಿದ್ದಲ್ಲದೇ ಪ್ರೇಮಿಯ ಸಾವನ್ನು ನೋಡಿ ಸಂಭ್ರಮಿಸುವ ಮೂಲಕ ಕ್ರೂರವಾಗಿ ವರ್ತಿಸಿರುವುದು ನಾಗರಿಕರು ಹಾಗೂ ಪೊಲೀಸ್‌ ಇಲಾಖೆಯನ್ನು ಬೆಚ್ಚಿಬೀಳಿಸಿದೆ.

Read More
Next Story