
ಕಳ್ಳಸಾಗಣೆಯ ಮೂಲಕ ತಂದ ವಿದೇಶೀ ಸಿಗರೇಟು: ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರು
ಬೆಂಗಳೂರಿನ ಗಾಂಧಿನಗರದ ತ್ರಿಭುವನ್ ಕಟ್ಟಡದ ಅಂಗಡಿ ಹಾಗೂ ಗೋದಾಮಿನಲ್ಲಿ ಭಾರೀ ಪ್ರಮಾಣದಲ್ಲಿ ದಾಸ್ತಾನು ಮಾಡಿದ್ದ ವಿದೇಶಿ ಸಿಗರೇಟ್‌ಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ಹೃದಯಭಾಗದಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ವಿದೇಶಿ ಸಿಗರೇಟ್ ದಂಧೆಯನ್ನು ಭೇದಿಸುವಲ್ಲಿ ಉಪ್ಪಾರಪೇಟೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿಷೇಧಿತ ವಿದೇಶಿ ಕಂಪನಿಗಳ ಸಿಗರೇಟ್‌ಗಳನ್ನು ಸಂಗ್ರಹಿಸಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 35 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಗಾಂಧಿನಗರದ 5ನೇ ಮುಖ್ಯ ರಸ್ತೆಯಲ್ಲಿರುವ ‘ತ್ರಿಭುವನ್ ಕಟ್ಟಡ’ದ ಅಂಗಡಿಯೊಂದರಲ್ಲಿ ಮತ್ತು ಅದರ ಗೋದಾಮಿನಲ್ಲಿ ಭಾರೀ ಪ್ರಮಾಣದ ವಿದೇಶಿ ಸಿಗರೇಟ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯನ್ನಾಧರಿಸಿ ಉಪ್ಪಾರಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಕುಮಾರ್ ಮತ್ತು ಅವರ ಸಿಬ್ಬಂದಿ ತಂಡವು ತಕ್ಷಣವೇ ಕಾರ್ಯಪ್ರವೃತ್ತರಾಗಿ ದಾಳಿ ನಡೆಸಿದ್ದಾರೆ.
ಈ ದಾಳಿಯ ಸಂದರ್ಭದಲ್ಲಿ ಪೊಲೀಸರಿಗೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಗೋದಾಮಿನಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದ ಮತ್ತು ದೇಶದಲ್ಲಿ ನಿಷೇಧಿಸಲ್ಪಟ್ಟಿರುವ ವಿದೇಶಿ ಕಂಪನಿಗಳ ಸಾವಿರಾರು ಸಿಗರೇಟ್ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಒಟ್ಟು 1026 ಬಂಡಲ್‌ಗಳಷ್ಟು ವಿದೇಶಿ ಸಿಗರೇಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮಾರುಕಟ್ಟೆಯಲ್ಲಿ ಇವುಗಳ ಅಂದಾಜು ಮೌಲ್ಯ 35 ಲಕ್ಷ ರೂ. ಎಂದು ತಿಳಿದುಬಂದಿದೆ.
ದೆಹಲಿ ಮೂಲದ ವ್ಯಕ್ತಿಯೊಂದಿಗೆ ನಂಟು
ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಈ ದಂಧೆಯ ಜಾಲವು ದೆಹಲಿಯವರೆಗೂ ಹಬ್ಬಿರುವುದು ಬೆಳಕಿಗೆ ಬಂದಿದೆ. ದೆಹಲಿ ಮೂಲದ ವ್ಯಕ್ತಿಯೊಬ್ಬ ಈ ಅಕ್ರಮ ಸಿಗರೇಟ್‌ಗಳನ್ನು ಬೆಂಗಳೂರಿಗೆ ಸರಬರಾಜು ಮಾಡುತ್ತಿದ್ದ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಕಡಿಮೆ ಬೆಲೆಗೆ ಸಿಗುವ ಈ ನಿಷೇಧಿತ ಸಿಗರೇಟ್‌ಗಳನ್ನು ತಂದು, ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಧಿಕ ಲಾಭ ಗಳಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು. ಸದ್ಯ ಈ ಪ್ರಕರಣದಲ್ಲಿ ದೆಹಲಿ ಮೂಲದ ಪ್ರಮುಖ ಪೂರೈಕೆದಾರನಿಗಾಗಿ ಪೊಲೀಸರು ಬಲೆ ಬೀಸಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.
ದೇಶದಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ ಅಡಿಯಲ್ಲಿ ಸಿಗರೇಟ್ ಪ್ಯಾಕೆಟ್‌ಗಳ ಮೇಲೆ ಕಡ್ಡಾಯವಾಗಿ ಶೇ. 85 ರಷ್ಟು ಭಾಗ ಆರೋಗ್ಯ ಎಚ್ಚರಿಕೆಯ ಚಿತ್ರವಿರಬೇಕು. ಆದರೆ, ಈ ವಿದೇಶಿ ಸಿಗರೇಟ್‌ಗಳ ಮೇಲೆ ಇಂತಹ ಯಾವುದೇ ಎಚ್ಚರಿಕೆಗಳಿರುವುದಿಲ್ಲ ಮತ್ತು ಇವುಗಳನ್ನು ಕಳ್ಳಸಾಗಣೆಯ ಮೂಲಕ ದೇಶದೊಳಗೆ ತರಲಾಗುತ್ತದೆ. ಇವುಗಳ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ತೆರಿಗೆ ನಷ್ಟವಾಗುವುದಲ್ಲದೆ, ಸಾರ್ವಜನಿಕರ ಆರೋಗ್ಯದ ಮೇಲೆ ಕೂಡ ಇದು ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಇವುಗಳ ಆಮದು ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಬಂಧಿತ ಆರೋಪಿಗಳ ವಿರುದ್ಧ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಜಾಲದಲ್ಲಿ ಇನ್ನೂ ಯಾರು ಯಾರು ಭಾಗಿಯಾಗಿದ್ದಾರೆ? ದೆಹಲಿಯಿಂದ ಬೆಂಗಳೂರಿಗೆ ಈ ಮಾಲು ಹೇಗೆ ತಲುಪುತ್ತಿತ್ತು? ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ.

