
ಮಾರತಹಳ್ಳಿ ಫ್ಲೈಓವರ್ ಮೇಲೆ ಕಾರು-ಬೈಕ್ ಭೀಕರ ಅಪಘಾತ
ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಫ್ಲೈಓವರ್‌ನಿಂದ ಕೆಳಗೆ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ದುರ್ಮರಣ
ಬೆಂಗಳೂರಿನ ಮಾರತಹಳ್ಳಿ ಬ್ರಿಡ್ಜ್ ಮೇಲೆ ಒನ್-ವೇನಲ್ಲಿ ಬಂದ ಬೈಕ್‌ಗೆ ಮದ್ಯದ ನಶೆಯಲ್ಲಿದ್ದ ಕಾರು ಡಿಕ್ಕಿಯಾಗಿ, 15 ಅಡಿ ಮೇಲಿಂದ ಕೆಳಗೆ ಬಿದ್ದು ಮಹಿಳಾ ಟೆಕ್ಕಿ ಕೃಷ್ಣಶ್ರೀ ಮೃತಪಟ್ಟಿದ್ದಾರೆ.
ಐಟಿ ಹಬ್ ಮಾರತಹಳ್ಳಿಯ ಬ್ರಿಡ್ಜ್ ಮೇಲೆ ಗುರುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಬ್ಬ ಟೆಕ್ಕಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಮೂಲದ 26 ವರ್ಷದ ಕೃಷ್ಣಶ್ರೀ ಮೃತ ದುರ್ದೈವಿ. ಇವರು ಮಾರತಹಳ್ಳಿಯ ಅಶ್ವತ್ಥನಗರದ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದು, ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಸ್ನೇಹಿತ, ಹಾಸನ ಮೂಲದ ಅವಿನಾಶ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮುಂಜಾನೆ ಸುಮಾರು 2:15 ರ ವೇಳೆಗೆ ಅವಿನಾಶ್ ಮತ್ತು ಕೃಷ್ಣಶ್ರೀ ಇಬ್ಬರೂ ಬೈಕ್‌ನಲ್ಲಿ ಮರತಹಳ್ಳಿ ಬ್ರಿಡ್ಜ್ ಮೇಲೆ ಒನ್-ವೇ (ವಿರುದ್ಧ ದಿಕ್ಕಿನಲ್ಲಿ) ಸಂಚರಿಸುತ್ತಿದ್ದರು. ಈ ವೇಳೆ ಎದುರಿಗೆ ಅತಿ ವೇಗವಾಗಿ ಬಂದ ಕಾರೊಂದು ಇವರ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಕೃಷ್ಣಶ್ರೀ ಅವರು ಗಾಳಿಯಲ್ಲಿ ಹಾರಿ ಸುಮಾರು 15 ಅಡಿ ಎತ್ತರದ ಬ್ರಿಡ್ಜ್ ಮೇಲಿಂದ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಇನ್ನು ಅಪಘಾತಕ್ಕೆ ಕಾರಣವಾದ ಕಾರನ್ನು ಚಲಾಯಿಸುತ್ತಿದ್ದ ಸುರೇಶ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುರೇಶ್ ಕೂಡ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಅಪಘಾತದ ಸಮಯದಲ್ಲಿ ಅವರು ಮದ್ಯಪಾನ ಮಾಡಿ ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರಸ್ತುತ ಎಚ್‌ಎಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮದ್ಯಪಾನ ಮಾಡಿ ಅಜಾಗರೂಕತೆಯಿಂದ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಕಾರು ಚಾಲಕ ಸುರೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಮತ್ತೊಂದೆಡೆ, ಒನ್-ವೇನಲ್ಲಿ ಬೈಕ್ ಚಲಾಯಿಸಿದ ಹಿನ್ನೆಲೆಯಲ್ಲಿ ಗಾಯಾಳು ಅವಿನಾಶ್ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಕೃಷ್ಣಶ್ರೀ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

