
Bengaluru Police| ಪೊಲೀಸರ ಸಮಯಪ್ರಜ್ಞೆ; ಸುಟ್ಟ ಗಾಯವಾದ ಮಹಿಳೆಯ ಪ್ರಾಣ ರಕ್ಷಣೆ; ಇಬ್ಬರು ವೃದ್ಧೆಯರಿಗೆ ಸಹಾಯಹಸ್ತ
ಎರಡೂ ಪ್ರಕರಣಗಳಲ್ಲಿ ಸಾರ್ವಜನಿಕರು ತಕ್ಷಣ '112'ಗೆ ಕರೆ ಮಾಡಿ ಮಾಹಿತಿ ನೀಡಿದ್ದು ಪ್ರಶಂಸನೀಯವಾಗಿದೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ ಪೊಲೀಸರು ಕರ್ತವ್ಯದಕ್ಷತೆ ಮೆರೆದಿದ್ದಾರೆ.
ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ನೆರವಿಗೆ ಧಾವಿಸುವ 'ನಮ್ಮ 112' ಸಹಾಯವಾಣಿ ಮತ್ತು ನಗರ ಪೊಲೀಸರಿಂದಾಗಿ ಇಬ್ಬರು ವೃದ್ಧೆಯರು ಸುಕ್ಷಿತವಾಗಿ ಮನೆ ಸೇರಿದ್ದರೆ, ಸುಟ್ಟ ಗಾಯಗಳಿಂದ ನರಳುತ್ತಿದ್ದ ಮಹಿಳೆಗೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗಿದೆ.
ಏ. 13ರ ರಾತ್ರಿ ಸುಮಾರು 10.46ಕ್ಕೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಸಂದ್ರ ಪೈಪ್‌ಲೈನ್ ರಸ್ತೆಯಲ್ಲಿ ಇಬ್ಬರು ವೃದ್ಧೆಯರು (65-70 ವರ್ಷ) ದಿಕ್ಕು ತೋಚದೆ ಗೊಂದಲದಲ್ಲಿರುವುದನ್ನು ಸಾರ್ವಜನಿಕರೊಬ್ಬರು ಗಮನಿಸಿ '112'ಗೆ ಕರೆ ಮಾಡಿದ್ದಾರೆ. ಮಾಹಿತಿ ಸಿಕ್ಕ ಕೇವಲ 7 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಹೊಯ್ಸಳ 112ರ ಎಎಸ್‌ಐ ಯೋಗೇಶ್ ಮತ್ತು ಎಹೆಚ್‌ಸಿ ರಂಗನಾಥ್ ವೃದ್ಧೆಯರನ್ನು ವಿಚಾರಿಸಿದ್ದಾರೆ.
ಈ ವೇಳೆ ಅವರು ಗೌರಿಬಿದನೂರಿನಿಂದ ತಮ್ಮೆನಹಳ್ಳಿಗೆ ಹೋಗುವಾಗ ದಾರಿ ತಪ್ಪಿರುವುದು ತಿಳಿದುಬಂದಿತ್ತು. ಪೊಲೀಸರು ಅವರ ಬಳಿಯಿದ್ದ ಮೊಬೈಲ್ ಫೋನ್ ಮೂಲಕ ಮಗನನ್ನು ಸಂಪರ್ಕಿಸಿ, ಸ್ಥಳಕ್ಕೆ ಕರೆಸಿಕೊಂಡು, ಅಗತ್ಯ ಪರಿಶೀಲನೆ ನಡೆಸಿದ ನಂತರ ವೃದ್ಧೆಯರನ್ನು ಅವರ ಕುಟುಂಬಕ್ಕೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಹಿಳೆಗೆ ಪುನರ್ಜನ್ಮ
ಅದೇ ರಾತ್ರಿ 11.34ರ ಸುಮಾರಿಗೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಿಯಮ್ಮನ ದೇವಸ್ಥಾನದ ಬಳಿ ಸುಮಾರು 40 ವರ್ಷದ ಮಹಿಳೆಯೊಬ್ಬರು ತೀವ್ರವಾದ ಸುಟ್ಟ ಗಾಯಗಳಿಂದ ನರಳುತ್ತಿರುವುದು ಕಂಡುಬಂದಿದೆ. ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹೊಯ್ಸಳ ಸಿಬ್ಬಂದಿಗಳಾದ ಎಎಸ್‌ಐ ಶ್ರೀನಿವಾಸ್ ಮತ್ತು ಕಾನ್‌ಸ್ಟೇಬಲ್ ರಾಘವೇಂದ್ರ ಅವರು ಕೇವಲ 11 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ್ದಾರೆ. ಗಾಯಾಳುವಿನ ಗಂಭೀರ ಸ್ಥಿತಿಯನ್ನು ಅರಿತ ಪೊಲೀಸರು ತಕ್ಷಣವೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಕಾಲದಲ್ಲಿ ಸ್ಪಂದಿಸಿದ್ದರಿಂದ ಮಹಿಳೆಯ ಪ್ರಾಣಾಪಾಯ ತಪ್ಪಿದಂತಾಗಿದೆ.
ಸಾರ್ವಜನಿಕರಿಂದ ಮೆಚ್ಚುಗೆ
ಎರಡೂ ಪ್ರಕರಣಗಳಲ್ಲಿ ಸಾರ್ವಜನಿಕರು ತಕ್ಷಣ '112'ಗೆ ಕರೆ ಮಾಡಿ ಮಾಹಿತಿ ನೀಡಿದ್ದು ಪ್ರಶಂಸನೀಯವಾಗಿದೆ. ಮಾಹಿತಿ ಬಂದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತಲುಪುವ ಮೂಲಕ ಪೊಲೀಸರು ತಮ್ಮ ಕರ್ತವ್ಯದಕ್ಷತೆ ಮೆರೆದಿದ್ದಾರೆ. ಕಾನೂನು ಸುವ್ಯವಸ್ಥೆಯ ಜತೆಗೆ ನಾಗರಿಕರ ಜೀವ ಉಳಿಸುವಲ್ಲಿ ಪೊಲೀಸರು ತೋರುತ್ತಿರುವ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆಗಳು ಬೆಂಗಳೂರು ನಗರದ ಸುರಕ್ಷತೆಯಲ್ಲಿ '112' ಸಹಾಯವಾಣಿಯ ವಿಶ್ವಾಸಾರ್ಹತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.

