
ಪೋಕ್ಸೋ ಕೇಸ್ ಭೀತಿಯಿಂದ ಲಾಕರ್ ಕೀ ನುಂಗಿದ ಆರೋಪಿ; ಮುಂದೇನಾಯಿತು ಗೊತ್ತಾ?
ವೈದ್ಯರ ಸಲಹೆಯಂತೆ ಕೀ ನೈಸರ್ಗಿಕವಾಗಿ ಹೊರಬರಲಿ ಎಂಬ ಉದ್ದೇಶದಿಂದ ಪೊಲೀಸರು ಆತನಿಗೆ ಸುಮಾರು 10 ಕೆ.ಜಿ. ಬಾಳೆಹಣ್ಣುಗಳನ್ನು ತಿನ್ನಿಸಿದರು. ಕೊನೆಗೆ ಮೂರು ದಿನಗಳ ನಂತರ ಮಲದ ಮೂಲಕ ಲಾಕರ್ ಕೀ ಹೊರಬಂದಿದೆ.
ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣದಲ್ಲಿ ಸೆರೆ ಸಿಕ್ಕ ಆರೋಪಿಯು ವಿಚಾರಣೆ ವೇಳೆ ಲಾಕರ್ ಕೀ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಆರೋಪಿಯ ಈ ದಿಢೀರ್ ಕೃತ್ಯದಿಂದ ಕಂಗಾಲಾದ ಪೊಲೀಸರು ಆತನಿಗೆ ಬರೋಬ್ಬರಿ 10 ಕೆ.ಜಿ. ಬಾಳೆಹಣ್ಣು ತಿನ್ನಿಸಿ ಕೊನೆಗೂ ಮಲದ ಮೂಲಕ ಕೀ ಹೊರಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಏ.24ರಂದು 17 ವರ್ಷದ ಅಪ್ರಾಪ್ತ ಬಾಲಕಿ ಕಾಣೆಯಾದ ಬಗ್ಗೆ ಆಕೆಯ ಪೋಷಕರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ಕಾರ್ತಿಕ್ ಎಂಬಾತ ಬಾಲಕಿಯನ್ನು ಕರೆದುಕೊಂಡು ಹೋಗಿರುವುದು ಪತ್ತೆಯಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು.
ವಿಚಾರಣೆ ವೇಳೆ ಹೈಡ್ರಾಮಾ
ಪೊಲೀಸರು ಠಾಣೆಯಲ್ಲಿ ಕಾರ್ತಿಕ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ತನ್ನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಬಹುದು ಎಂಬ ಭೀತಿ ಆರೋಪಿಯನ್ನು ಆವರಿಸಿತ್ತು. ಇದೇ ಆತಂಕದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಅಲ್ಲಿಯೇ ಇದ್ದ ಲಾಕರ್ ಕೀ ನುಂಗಿಬಿಟ್ಟ. ಕೀ ನುಂಗುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಆತ ಯತ್ನಿಸಿದ್ದ ಎಂದು ಹೇಳಲಾಗಿದೆ.
ಆರೋಪಿಯ ಈ ಹಠಾತ್ ಕೃತ್ಯದಿಂದ ಪೊಲೀಸರು ಒಂದು ಕ್ಷಣ ಬೆಚ್ಚಿಬಿದ್ದರು. ಠಾಣೆಯಲ್ಲೇ ಆರೋಪಿಗೆ ಏನಾದರೂ ಅಪಾಯ ಸಂಭವಿಸಿದರೆ ಕಾನೂನು ಸಂಕಷ್ಟ ಎದುರಾಗಬಹುದು ಎಂದು ಆತಂಕಗೊಂಡ ಸಿಬ್ಬಂದಿ, ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
10 ಕೆ.ಜಿ. ಬಾಳೆಹಣ್ಣು ತಿನ್ನಿಸಿದ ಪೊಲೀಸರು
ಆಸ್ಪತ್ರೆಯಲ್ಲಿ ಎಕ್ಸ್ ರೇ ಮಾಡಿಸಿದಾಗ ಹೊಟ್ಟೆಯೊಳಗೆ ಕೀ ಇರುವುದು ದೃಢಪಟ್ಟಿತ್ತು. ವೈದ್ಯರ ಸಲಹೆಯಂತೆ ಕೀ ನೈಸರ್ಗಿಕವಾಗಿ ಹೊರಬರಲಿ ಎಂಬ ಉದ್ದೇಶದಿಂದ ಪೊಲೀಸರು ಆತನಿಗೆ ಸುಮಾರು 10 ಕೆ.ಜಿ. ಬಾಳೆಹಣ್ಣುಗಳನ್ನು ತಿನ್ನಿಸಿದರು. ಕೊನೆಗೆ ಮೂರು ದಿನಗಳ ನಂತರ ಮಲದ ಮೂಲಕ ಲಾಕರ್ ಕೀ ಹೊರಬಂದಿದೆ. ಕೀ ಸಿಗುತ್ತಿದ್ದಂತೆಯೇ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಮುಂದುವರಿದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

