
ಬಂಧಿತರನ್ನು ಮಹಾರಾಷ್ಟ್ರದ ನಾಸಿಕ್ ಮೂಲದ ರೋಹನ್ ಮತ್ತು ಆಕಾಶ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಇಬ್ಬರು ಅಂತರ್‌ರಾಜ್ಯ ಕಳ್ಳರ ಬಂಧನ: ಚಿನ್ನಾಭರಣ ವಶ
ಬಂಧಿತ ಆರೋಪಿಗಳು ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು (ರೆಕ್ಕಿ). ಬಳಿಕ ರಾತ್ರಿ ವೇಳೆ ರಾಡ್ ಮತ್ತು ಕಟರ್‌ಗಳನ್ನು ಬಳಸಿ ಮನೆಯ ಬೀಗ ಒಡೆದು ಒಳನುಗ್ಗಿ ಕಳ್ಳತನವೆಸಗುತ್ತಿದ್ದರು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್‌ರಾಜ್ಯ ಕಳ್ಳರನ್ನು ಕೊಡಿಗೇಹಳ್ಳಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರದ ನಾಸಿಕ್ ಮೂಲದ ರೋಹನ್ ಮತ್ತು ಆಕಾಶ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಆಗಾಗ್ಗೆ ರೈಲಿನ ಮೂಲಕ ಬೆಂಗಳೂರಿಗೆ ಬಂದು, ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು (ರೆಕ್ಕಿ). ಬಳಿಕ ರಾತ್ರಿ ವೇಳೆ ರಾಡ್ ಮತ್ತು ಕಟರ್‌ಗಳನ್ನು ಬಳಸಿ ಮನೆಯ ಬೀಗ ಒಡೆದು ಒಳನುಗ್ಗಿ ಕಳ್ಳತನವೆಸಗುತ್ತಿದ್ದರು.
ಇತ್ತೀಚೆಗೆ ನಗರದ ಸಹಕಾರ ನಗರ ಪ್ರದೇಶದಲ್ಲಿ ಬೀಗ ಹಾಕಿದ್ದ ಮನೆಯೊಂದರ ಹಿಂಬದಿಯ ಗ್ರಿಲ್ ಮುರಿದು ಒಳನುಗ್ಗಿದ್ದ ಈ ಗ್ಯಾಂಗ್, ಸುಮಾರು 3 ಕೆ.ಜಿ ಬೆಳ್ಳಿ ಹಾಗೂ 250 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದರು. ಕಳವು ಮಾಡಿದ ಈ ಬೆಲೆಬಾಳುವ ಆಭರಣಗಳನ್ನು ತಮ್ಮ ಹುಟ್ಟೂರಾದ ನಾಸಿಕ್‌ನಲ್ಲಿ ಮಾರಾಟ ಮಾಡಿರುವುದು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಮುಂದುವರಿದ ಶೋಧ ಕಾರ್ಯ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಂಧಿತರಿಂದ ಮತ್ತಷ್ಟು ಮಾಹಿತಿ ಕಲೆಹಾಕಲು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರಬಹುದಾದ ಗ್ಯಾಂಗ್‌ನ ಇತರ ಸದಸ್ಯರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

