
ಕೊಪ್ಪಳದಲ್ಲಿ ವಿಮೆ ಹಣದ ಆಸೆ ಮತ್ತು ಸಾಲದ ಹೊರೆ ಹಿನ್ನೆಲೆ ಪತಿಯ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಪತ್ನಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪಿಜಿಗಳನ್ನೇ ಟಾರ್ಗೆಟ್ ಮಾಡಿದ್ದ ಕಳ್ಳನ ಬಂಧನ: 10 ಲಕ್ಷ ರೂ. ಮೌಲ್ಯದ ವಸ್ತು ವಶ
ಮಂಡೂರು, ಚಿಕ್ಕಗುಬ್ಬಿ ಸೇರಿದಂತೆ ಆವಲಹಳ್ಳಿ ಮತ್ತು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಿಜಿಗಳಲ್ಲಿ ಕಳವು ಪ್ರಕರಣಗಳು ನಡೆದಿದ್ದವು. ಪಿಜಿಗಳಲ್ಲಿ ವಾಸವಿದ್ದ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಕೊಠಡಿಗಳನ್ನು ಬಂಧಿತ ಬಿ. ಶಿವಾಜಿ (24) ಗುರಿಯಾಗಿಸಿಕೊಂಡಿದ್ದ ಎನ್ನಲಾಗಿದೆ.
ಬೆಂಗಳೂರು ನಗರದ ಮಂಡೂರು ಹಾಗೂ ಚಿಕ್ಕಗುಬ್ಬಿ ಸುತ್ತಮುತ್ತಲಿನ ಪಿಜಿಗಳನ್ನು ಗುರಿಯಾಗಿಸಿಕೊಂಡು ಸರಣಿ ಕಳವು ಮಾಡುತ್ತಿದ್ದ ಆರೋಪಿಯನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಬಿ. ಶಿವಾಜಿ (24) ಬಂಧಿತ ಆರೋಪಿ. ಆತನಿಂದ ಸುಮಾರು 10 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಡೂರು, ಚಿಕ್ಕಗುಬ್ಬಿ ಸೇರಿದಂತೆ ಆವಲಹಳ್ಳಿ ಮತ್ತು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪಿಜಿಗಳಲ್ಲಿ ಕಳವು ಪ್ರಕರಣಗಳು ನಡೆದಿದ್ದವು. ಪಿಜಿಗಳಲ್ಲಿ ವಾಸವಿದ್ದ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಕೊಠಡಿಗಳನ್ನು ಆರೋಪಿ ಗುರಿಯಾಗಿಸಿಕೊಂಡಿದ್ದ ಎನ್ನಲಾಗಿದೆ.
19 ಎಲೆಕ್ಟ್ರಾನಿಕ್ ಸಾಧನಗಳ ವಶ
ರಾತ್ರಿ ಅಥವಾ ಮುಂಜಾನೆ ವೇಳೆ ಪಿಜಿಗಳಿಗೆ ಪ್ರವೇಶಿಸುತ್ತಿದ್ದ ಶಿವಾಜಿ, ಕೊಠಡಿಗಳ ಬಾಗಿಲು ಸರಿಯಾಗಿ ಹಾಕದಿರುವುದನ್ನು ಗಮನಿಸಿ ಒಳನುಗ್ಗುತ್ತಿದ್ದ ಎನ್ನಲಾಗಿದೆ. ಕೊಠಡಿಗಳಲ್ಲಿದ್ದ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಆವಲಹಳ್ಳಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಚಲನವಲನಗಳನ್ನು ಪತ್ತೆಹಚ್ಚಿದ್ದಾರೆ. ಬಳಿಕ ಶಿವಾಜಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಆತನ ಬಳಿಯಿಂದ 12 ಮೊಬೈಲ್ ಫೋನ್ಗಳು ಮತ್ತು 7 ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸಾಧನಗಳ ಒಟ್ಟು ಮೌಲ್ಯ ಸುಮಾರು 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಹೆಚ್ಚಿನ ತನಿಖೆ ಮುಂದುವರಿಕೆ
ಪಿಜಿಗಳಲ್ಲಿ ನಡೆದ ಸರಣಿ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಇನ್ನಷ್ಟು ಪ್ರಕರಣಗಳಲ್ಲಿ ಈತನ ಕೈವಾಡವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪಿಜಿ ನಿವಾಸಿಗಳು ಕೊಠಡಿಯ ಬಾಗಿಲುಗಳನ್ನು ಸರಿಯಾಗಿ ಲಾಕ್ ಮಾಡಬೇಕು ಹಾಗೂ ಬೆಲೆಬಾಳುವ ವಸ್ತುಗಳ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

