ಬೆಂಗಳೂರಿನ ಪಿಜಿಯಲ್ಲಿ ಭೀಕರ ಅಗ್ನಿ ಅವಘಡ: ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ 50 ಯುವತಿಯರು
x

ಬೆಂಗಳೂರಿನ ಪಿಜಿಯಲ್ಲಿ ಭೀಕರ ಅಗ್ನಿ ಅವಘಡ

ಬೆಂಗಳೂರಿನ ಪಿಜಿಯಲ್ಲಿ ಭೀಕರ ಅಗ್ನಿ ಅವಘಡ: ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ 50 ಯುವತಿಯರು

ಡಾ.ರಾಜ್‌ಕುಮಾರ್ ಸ್ಮಾರಕದ ಸಮೀಪವಿರುವ ಎಲ್ಇಡಿ ಸ್ಕ್ರೀನ್‌ಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿಯೇ ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದೆ.


Click the Play button to hear this message in audio format

ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಭಾನುವಾರ ತಡರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಗೋದಾಮಿನಲ್ಲಿ ಹೊತ್ತಿಕೊಂಡ ಬೆಂಕಿ ಪಕ್ಕದ ಮಹಿಳಾ ಪಿಜಿಗೆ (ಪೇಯಿಂಗ್ ಗೆಸ್ಟ್) ವ್ಯಾಪಿಸಿದೆ. ದಟ್ಟ ಹೊಗೆ ಹಾಗೂ ಬೆಂಕಿಯ ಕೆನ್ನಾಲಿಗೆಯಿಂದ ಪ್ರಾಣ ಉಳಿಸಿಕೊಳ್ಳಲು ಸುಮಾರು 50 ಯುವತಿಯರು ಮೇಲಿನ ಅಂತಸ್ತಿನಿಂದ ಜಿಗಿದು ಪಾರಾದ ರೋಚಕ ಘಟನೆ ನಡೆದಿದೆ.

ಡಾ.ರಾಜ್‌ಕುಮಾರ್ ಸ್ಮಾರಕದ ಸಮೀಪವಿರುವ ಎಲ್ಇಡಿ ಸ್ಕ್ರೀನ್‌ಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿಯೇ ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಆದರೂ ನಿಖರ ಕಾರಣ ತಿಳಿಯಲು ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಯುವತಿಯರು

ಗೋದಾಮಿನ ಪಕ್ಕದಲ್ಲೇ ಇದ್ದ ನಾಲ್ಕು ಅಂತಸ್ತಿನ ಮಹಿಳಾ ಪಿಜಿಗೆ ಬೆಂಕಿ ಆವರಿಸಿದ್ದರಿಂದ, ಒಳಗೆ ಮಲಗಿದ್ದ ಸುಮಾರು 50 ಯುವತಿಯರು ದಿಗ್ಭ್ರಮೆಗೊಂಡಿದ್ದಾರೆ. ಕಾರಿಡಾರ್‌ ಮತ್ತು ನಿರ್ಗಮನ ದ್ವಾರಗಳಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಹೊರಬರಲು ಯಾವುದೇ ದಾರಿ ಕಾಣದೆ, ಅನಿವಾರ್ಯವಾಗಿ ಯುವತಿಯರು ಮೇಲಿನ ಮಹಡಿಯಿಂದ ಕೆಳಗೆ ಜಿಗಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ.

ಕಾರ್ಯಾಚರಣೆ ಹಾಗೂ ಅಪಾರ ಹಾನಿ

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಎಲ್ಲ ಯುವತಿಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಆದರೆ, ಈ ಅಗ್ನಿ ಅವಘಡದಲ್ಲಿ ಗೋದಾಮಿನ ಹೊರಗೆ ನಿಲ್ಲಿಸಿದ್ದ ಬೈಕ್ ಮತ್ತು ಪಿಕಪ್ ಟ್ರಕ್ ಸೇರಿದಂತೆ ಹಲವು ವಾಹನಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯ ತಾಪಕ್ಕೆ ಅಕ್ಕಪಕ್ಕದ ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿದ್ದು, ಕಿಟಕಿ ಗಾಜುಗಳು ಪುಡಿಯಾಗಿವೆ. ಮಧ್ಯರಾತ್ರಿಯ ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದರು. ಇಂತಹ ದಟ್ಟಣೆಯ ಪ್ರದೇಶಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ತುರ್ತು ನಿರ್ಗಮನ ದ್ವಾರಗಳನ್ನು ನಿರ್ವಹಿಸುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Read More
Next Story