
Bengaluru Murder Case | ದುಬಾರಿ ಗಿಫ್ಟ್ ಆಸೆಗೆ ಬಿದ್ದು ಹೆಣವಾದ ಪ್ರಿಯಕರ; ವಿದೇಶಿ ಸ್ಟೈಲ್ ಪ್ರಪೋಸಲ್ ನೆಪದಲ್ಲಿ ನಡೆದ ಭೀಕರ ಹತ್ಯೆಯ ಕರಾಳ ಕಥೆ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರೇಮಾ ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾಳೆ.
"ವಿದೇಶಿ ಶೈಲಿಯಲ್ಲಿ ನಿನಗೆ ಸರ್‌ಪ್ರೈಸ್ ಪ್ರಪೋಸ್ ಮಾಡ್ತೀನಿ ಬಾ" ಎಂದು ಕರೆದು ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಪ್ರಕರಣದ ಆರೋಪಿ ಪ್ರೇಮಾಳ ಅಸಲಿ ಮುಖ ಇದೀಗ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಬ್ಯಾಡರಹಳ್ಳಿ ಪೊಲೀಸರ ಕಠಿಣ ವಿಚಾರಣೆಗೆ ಕಂಗಾಲಾದ ಈ ವಿಕೃತ ಮನಸ್ಸಿನ ಮಹಿಳೆ, ಕೊಲೆಯ ಹಿಂದಿನ ಒಂದೊಂದೇ ಆಘಾತಕಾರಿ ಸತ್ಯಗಳನ್ನು ಒಪ್ಪಿಕೊಂಡಿದ್ದಾಳೆ.
ಮದುವೆಗೆ ನಿರಾಕರಣೆ ಮತ್ತು ಜಾತಿಯ ಅವಮಾನ!
ವರ್ಷಗಳಿಂದ ಪ್ರೀತಿಸುತ್ತಿದ್ದ ಕಿರಣ್‌ನನ್ನು ಪ್ರೇಮಾ ಕೊಲೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ ತನಿಖೆ ವೇಳೆ ಉತ್ತರ ಸಿಕ್ಕಿದೆ. ಮದುವೆಯ ವಿಚಾರ ಬಂದಾಗಲೆಲ್ಲ ಕಿರಣ್ ಜಾತಿಯ ನೆಪ ಹೇಳಿ ಮದುವೆಯನ್ನು ನಿರಾಕರಿಸುತ್ತಿದ್ದನಂತೆ. ಅಷ್ಟೇ ಅಲ್ಲದೆ, ಕಿರಣ್ ತನ್ನನ್ನು ಕೇವಲ ಭೋಗದ ವಸ್ತುವನ್ನಾಗಿ ಬಳಸಿಕೊಳ್ಳುತ್ತಿದ್ದ ಮತ್ತು ಪದೇ ಪದೇ ಅವಮಾನ ಮಾಡುತ್ತಿದ್ದ ಎಂಬುದು ಪ್ರೇಮಾ ನೀಡಿರುವ ಹೇಳಿಕೆ. ಈ ದ್ವೇಷವೇ ಹತ್ಯೆಗೆ ಪ್ರೇರಣೆಯಾಗಿದೆ ಎಂದು ತಿಳಿದುಬಂದಿದೆ.
ನರಳಾಟ ನೋಡಲು ವಿಡಿಯೋ ರೆಕಾರ್ಡ್!
ಕೊಲೆಯ ದಿನ ನಡೆದ ಘಟನೆ ಅತ್ಯಂತ ಭೀಕರವಾಗಿದೆ. ನಿನಗೊಂದು ದುಬಾರಿ ಬೈಕ್ ಗಿಫ್ಟ್ ನೀಡುತ್ತೇನೆ ಎಂದು ಕಿರಣ್‌ನನ್ನು ನಂಬಿಸಿ ಮನೆಗೆ ಕರೆಸಿಕೊಂಡಿದ್ದಳು. ಪ್ರೇಮಾ ದುಬಾರಿ ಗಿಫ್ಟ್ ಕೊಡ್ತಾಳೆ ಅಂತಾನೆ ಕಿರಣ್ ಆಕೆಯ ಮನೆಗೆ ಬಂದಿದ್ದ. ಬೈಕ್ ಗಿಫ್ಟ್ ಕೊಡ್ತೀನಿ ಅಂತ ಕಿರಣ್ನನ್ನ ಕರೆದಿದ್ದ ಪ್ರೇಮಾ ಬಳಿಕ ಇದೇ ಕಾರಣಗಳಿಗೆ ನಾನು ಕಿರಣ್ ಕೊಲೆಗೆ ಪ್ಲಾನ್ ಮಾಡಿದ್ದಾಗಿ ಪೊಲೀಸರ ಮುಂದೆ ಆರೋಪಿ ಪ್ರೇಮಾ ತಪ್ಪೊಪ್ಪಿಕೊಂಡಿದ್ದಾಳೆ.
ವಿದೇಶಿ ಶೈಲಿಯ ಪ್ರೇಮ ನಿವೇದನೆ ಎಂದು ನಂಬಿಸಿ, ಕಿರಣ್ ಕಣ್ಣಿಗೆ ಬಟ್ಟೆ ಕಟ್ಟಿ, ಕೈಕಾಲುಗಳನ್ನು ಬೆಲ್ಟ್‌ನಿಂದ ಬಂಧಿಸಿದ್ದಳು. ಬಳಿಕ ಪೂರ್ವಸಂಚಿನಂತೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಕಿರಣ್ ಬೆಂಕಿಯಲ್ಲಿ ಬೆಂದು ನರಳುತ್ತಿದ್ದರೆ, ಈ ವಿಕೃತ ಪ್ರೇಮಿ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಳು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಸಾಯಲು ಹೋಗಿ ಸ್ನಾನದ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಳು!
ಕಿರಣ್‌ನನ್ನು ಬೆಂಕಿಗೆ ಆಹುತಿ ನೀಡಿದ ಬಳಿಕ ತಾನು ಕೂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇಮಾ ನಿರ್ಧರಿಸಿದ್ದಳು. ಆದರೆ ಬೆಂಕಿಯ ಜ್ವಾಲೆ ಮತ್ತು ಹೊಗೆ ಹೆಚ್ಚಾದಾಗ ಆತಂಕಗೊಂಡ ಆಕೆ, ಸಾಯುವ ಬದಲು ಸ್ನಾನದ ಮನೆಗೆ ಹೋಗಿ ಬಾಗಿಲು ಹಾಕಿಕೊಂಡು ಬಚ್ಚಿಟ್ಟುಕೊಂಡಿದ್ದಳು. ನಂತರ ಪರಿಸ್ಥಿತಿ ಮಿತಿ ಮೀರಿದಾಗ ಗಾಬರಿಯಿಂದ ಮನೆಯಿಂದ ಹೊರಬಂದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನ್ಯಾಯಾಂಗ ಬಂಧನಕ್ಕೆ ಆರೋಪಿ
ಪೊಲೀಸರ ತನಿಖೆಯ ಬಳಿಕ ಆರೋಪಿ ಪ್ರೇಮಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬ್ಯಾಡರಹಳ್ಳಿ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

